ನವದೆಹಲಿ: ಮುಂಬರುವ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ವರೆಗೆ (Los Angeles Olympics) ಸಿಹಿತಿನಿಸು, ಚಾಕೊಲೇಟ್ಸ್ ಮತ್ತು ಫಾಸ್ಟ್ಫುಡ್ಗಳನ್ನು ತಿನ್ನುವುದಿಲ್ಲ ಎಂದು ಭಾರತ ಮಹಿಳಾ ಹಾಕಿ ತಂಡದ ಆಟಗಾರ್ತಿಯರು ದೃಢಸಂಕಲ್ಪ ಮಾಡಿದ್ದಾರೆ. ಫಿಟ್ನೆಸ್ ಕಾಯ್ದುಕೊಳ್ಳುವ ಸಲುವಾಗಿ ಅವರು ಈ ಡಯೆಟ್ ಯೋಜನೆ ಹಾಕಿಕೊಂಡಿದ್ದು, ಸದ್ಯಕ್ಕೆ ಹಾಲಿ ವರ್ಷದ ವಿಶ್ವಕಪ್ ಮತ್ತು ಏಷ್ಯನ್ ಗೇಮ್ಸ್ನಲ್ಲಿ ಪದಕ ಗೆಲ್ಲುವತ್ತ ಗಮನ ಹರಿಸಿದ್ದಾರೆ. ಭಾರತ ತಂಡದ ಅನುಭವಿ ಗೋಲು ಕೀಪರ್ ಸವಿತಾ ಪೂನಿಯಾ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.
2021ರ ಟೋಕಿಯೊ ಒಲಿಂಪಿಕ್ಸ್ನಲ್ಲಿ ಭಾರತ ಮಹಿಳಾ ತಂಡ 4ನೇ ಸ್ಥಾನದೊಂದಿಗೆ ಪದಕ ವಂಚಿತವಾಗಿತ್ತು. ಆದರೆ 2024ರ ಪ್ಯಾರಿಸ್ ಒಲಿಂಪಿಕ್ಸ್ಗೆ ಅರ್ಹತೆ ಗಳಿಸಲೇ ವಿಫಲವಾಗಿತ್ತು. ಇದೀಗ ತಂಡದ ಸ್ಟ್ರೆಂತ್ ಮತ್ತು ಕಂಡೀಷನಿಂಗ್ ಕೋಚ್ ವೇಯ್ನ್ ಲಂಬಾರ್ಡ್ ಮಾರ್ಗದರ್ಶನದಲ್ಲಿ ಆಟಗಾರ್ತಿಯರು ಕಟ್ಟುನಿಟ್ಟಾದ ಫಿಟ್ನೆಸ್ ಯೋಜನೆಯನ್ನು ಪಾಲಿಸಲು ಆರಂಭಿಸಿದ್ದಾರೆ.
"ನೀವು ಏನನ್ನಾದರೂ ಸಾಧಿಸಬೇಕೆಂದಿದ್ದರೆ, ತ್ಯಾಗ ಮಾಡಲು ಸಿದ್ಧರಾಗಿರಬೇಕು ಎಂದು ವೇಯ್ನ್ ಹೇಳಿದ್ದು, ಉನ್ನತ ಫಿಟ್ನೆಸ್ ಮಾನದಂಡವನ್ನು ನಿಗದಿಪಡಿಸಿದ್ದಾರೆ. ಇದರನ್ವಯ ಆಟಗಾರ್ತಿಯರು ಮೊದಲಿಗೆ ಸಕ್ಕರೆ ಮತ್ತು ಜಂಕ್ಫುಡ್ನಿಂದ ದೂರವಿರಲು ನಿರ್ಧರಿಸಿದ್ದಾರೆ. ಕಳೆದ ನೇಷನ್ಸ್ ಕಪ್ ಗೆಲುವಿನ ಬಳಿಕ ತಂಡಕ್ಕಾಗಿ ಕೇಕ್ ಆರ್ಡರ್ ಮಾಡಲಾಗಿತ್ತು. ಆದರೆ ಯಾವ ಆಟಗಾರ್ತಿಯರೂ ಆ ಕೇಕ್ ತಿಂದಿರಲಿಲ್ಲ' ಎಂದು ಸವಿತಾ ತಿಳಿಸಿದ್ದಾರೆ.
ನಮ್ಮ ಫಿಟ್ನೆಸ್ ಈಗ ಸುಧಾರಿಸಿದ್ದು, ಆಧುನಿಕ ಹಾಕಿಗೆ ಇದು ಅತ್ಯಗತ್ಯವಾಗಿದೆ. ಲಾಸ್ ಏಂಜಲೀಸ್ನಲ್ಲಿ ಪದಕ ಗೆದ್ದ ಬಳಿಕವೇ ಸಿಹಿ ತಿನ್ನಲಿದ್ದೇವೆ ಎಂದು ಆಟಗಾರ್ತಿಯರು ಸಂಕಲ್ಪ ಮಾಡಿದ್ದಾರೆ. ಎಂದು ಭಾರತ ಪರ 300ಕ್ಕೂ ಅಧಿಕ ಪಂದ್ಯ ಆಡಿರುವ ಸವಿತಾ ಹೇಳಿದ್ದಾರೆ.