ಇಂದಿನಿಂದ ಹಾಕಿ ಲೀಗ್

woman hockey
Published on

ಮಂಗಳೂರು: ಸೂಕ್ತ ಮೈದಾನದ ಕೊರತೆ ನಡುವೆಯೇ ‘ಹಾಕಿ ದಕ್ಷಿಣ ಕನ್ನಡ’ ಈ ಬಾರಿಯ ಜಿಲ್ಲಾಮಟ್ಟದ ಮುಕ್ತ ಲೀಗ್ ಹಾಕಿ ಟೂರ್ನಿಗೆ ಸಿದ್ಧತೆ ನಡೆಸಿದೆ. ಫೆ.19ರಿಂದ 21ರವರೆಗೆ ಹಾಕಿ ಟೂರ್ನಿ ಆಯೋಜಿಸಲಾಗಿದ್ದು, ಈ ಬಾರಿ ದಾಖಲೆ ಸಂಖ್ಯೆಯ ಮಹಿಳಾ ಮತ್ತು ಪುರುಷ ತಂಡಗಳು ಭಾಗವಹಿಸುತ್ತಿವೆ.

ಈ ಬಾರಿಯೂ ಖಾಸಗಿಯವರ ಮೊರೆ ಹೋಗಿರುವ ‘ಹಾಕಿ ದಕ್ಷಿಣ ಕನ್ನಡ’ ಅತ್ತಾವರ ಕೆಎಂಸಿಯ ಮರೆನಾ ಗ್ರೀನ್ಸ್ ಹಾಕಿ ಮೈದಾನದಲ್ಲಿ ಟೂರ್ನಿ ಆಯೋಜಿಸಿದೆ. ಕಳೆದ ವರ್ಷವೂ ಇದೇ ಮೈದಾನದಲ್ಲಿ ಆಯೋಜಿಸಲಾಗಿತ್ತು. 2011ರಿಂದ ಸತತವಾಗಿ ಹಾಕಿ ಟೂರ್ಇ ಆಯೋಜಿಸುತ್ತಿದ್ದರೂ, ಸ್ವಂತ ಮೈದಾನದ ಬೇಡಿಕೆ ಇನ್ನೂ ಈಡೇರಿಲ್ಲ ಎನ್ನುತ್ತಾರೆ ‘ಹಾಕಿ ದಕ್ಷಿಣ ಕನ್ನಡ’ ಪದಾಧಿಕಾರಿಗಳು.

ತಂಡಗಳ ಸಂಖ್ಯೆಯಲ್ಲಿ ಹೆಚ್ಚಳ: ಹಿಂದಿನ ವರ್ಷಗಳಿಗೆ ಹೋಲಿಸಿದರೆ ಟೂರ್ನಿಯಲ್ಲಿ ಭಾಗವಹಿಸುತ್ತಿರುವ ತಂಡಗಳ ಸಂಖ್ಯೆ ಹೆಚ್ಚಾಗಿದೆ. ಪುರುಷರ ವಿಭಾಗದಲ್ಲಿ 10 ತಂಡಗಳು ಹಾಗೂ ಮಹಿಳಾ ವಿಭಾಗದಲ್ಲಿ ಈ ಬಾರಿ 6 ತಂಡಗಳು ಭಾಗವಹಿಸುತ್ತಿವೆ. ಪುರುಷರ ವಿಭಾಗದಲ್ಲಿ ಸಂತ ಅಲೋಶಿಯಸ್ ಕಾಲೇಜು, ಮಂಗಳೂರು ವಿವಿ ಹಾಕಿ ಕ್ಲಬ್, ಎನ್‌ಐಟಿಕೆ ಸುರತ್ಕಲ್, ಕೆಎಂಸಿ ಮಂಗಳೂರು, ಧವಳಾ ಕಾಲೇಜು, ಪುತ್ತೂರು ಸಂತ ಫಿಲೋಮಿನಾ ಕಾಲೇಜು, ಕೆನರಾ ಕಾಲೇಜು, ವಾಮಂಜೂರು ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜು, ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು ಹಾಗೂ ಆಳ್ವಾಸ್ ಕಾಲೇಜು. ಮಹಿಳಾ ವಿಭಾಗದಲ್ಲಿ ಹಳೆಯಂಗಡಿ ಸರ್ಕಾರಿ ಪ್ರಥಮದರ್ಜೆ ಕಾಲೇಜು, ಮಂಗಳೂರು ವಿವಿ ಹಾಕಿ ಕ್ಲಬ್, ಸಂತ ಅಲೋಶಿಯಸ್, ಆಳ್ವಾಸ್ ಕಾಲೇಜು, ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜು ಹಾಗೂ ಧವಳಾ ಕಾಲೇಜು ತಂಡಗಳು ಭಾಗವಹಿಸಲಿವೆ.

ಹಾಕಿ ಫೆಡರೇಶನ್ ನಿಯಮಾವಳಿ: ಮೂರು ದಿನಗಳ ಟೂರ್ನಿ ಭಾರತೀಯ ಹಾಕಿ ಫೆಡರೇಶನ್ ನಿಯಮಾವಳಿ ಪ್ರಕಾರವೇ ನಡೆಯಲಿದೆ. ಕೆಎಂಸಿ ಮೈದಾನ ಹುಲ್ಲಿನ ಮೈದಾನವಾಗಿದ್ದು, ಇದು ಮಣ್ಣಿನ ಮೈದಾನದಲ್ಲಿ ಆಡುವುದಕ್ಕಿಂತ ಹೆಚ್ಚು ಆರಾಮದಾಯಕ. ಒಂದು ಪಂದ್ಯ 45 ನಿಮಿಷ ಜರುಗಲಿದ್ದು, ಮೊದಲಾರ್ಧ 20 ನಿಮಿಷ, ಬಳಿಕ 5 ನಿಮಿಷ ವಿರಾಮ, ದ್ವಿತೀಯಾರ್ಧ 20 ನಿಮಿಷ. ಪ್ರತಿ ಪಂದ್ಯದ ವಿಜೇತ ತಂಡಕ್ಕೆ 3 ಅಂಕ, ಪಂದ್ಯ ಡ್ರಾ ಆದಲ್ಲಿ ತಲಾ 1 ಅಂಕ ದೊರೆಯಲಿದೆ. ವಿಜೇತರಿಗೆ ಬೆಂಜಮಿನ್ ಡಿಸೋಜ ಸ್ಮರಣಾರ್ಥ ಟ್ರೋಫಿ ಹಾಗೂ ನಗದು ಬಹುಮಾನ ದೊರೆಯಲಿದೆ.

ಹಾಕಿ ದಕ್ಷಿಣ ಕನ್ನಡ ಒಂಬತ್ತು ವರ್ಷಗಳಿಂದ ಜಿಲ್ಲಾಮಟ್ಟದ ಹಾಕಿ ಟೂರ್ನಿ ಆಯೋಜಿಸುತ್ತಿದೆ. ಹಾಕಿಗಾಗಿ ಮಂಗಳೂರಿನಲ್ಲಿ ಮೈದಾನವಿಲ್ಲ. ಹಿಂದೆ ಕರಾವಳಿ ಉತ್ಸವ ಮೈದಾನದ ಒಂದು ಬದಿಯಲ್ಲಿ ಮಣ್ಣಿನ ಮೈದಾನದಲ್ಲಿ ಆಯೋಜಿಸಲಾಗುತ್ತಿತ್ತು. ಕಳೆದ ವರ್ಷದಿಂದ ಅಲ್ಲೂ ಜಾಗವಿಲ್ಲದಾಗಿದೆ. ಆದ್ದರಿಂದ ಖಾಸಗಿ ಸಂಸ್ಥೆಗಳ ಮೊರೆ ಹೋಗಿ ಟೂರ್ನಿ ಆಯೋಜಿಸುತ್ತಿದ್ದೇವೆ. ಟೂರ್ನಿ ಮುಗಿದ ಬಳಿಕ ಜಿಲ್ಲಾಧಿಕಾರಿಯವರನ್ನು ಭೇಟಿಯಾಗಿ ಮೈದಾನ ಕುರಿತಾಗಿ ಮನವಿ ಮಾಡಲಾಗುವುದು. ಜೆರಾಲ್ಡ್ ಡಿಸೋಜ ಹಾಕಿ ದಕ್ಷಿಣ ಕನ್ನಡ ಗೌರವ ಕಾರ್ಯದರ್ಶಿ ಇದ್ದ ಹಾಕಿ ಕ್ರೀಡಾಂಗಣವನ್ನು ಬಸ್ ನಿಲ್ದಾಣಕ್ಕೆ ಬಿಟ್ಟು ಕೊಟ್ಟ ಬಳಿಕ ಹಾಕಿ ಆಡುವವರಿಗೆ ಸೂಕ್ತ ಮೈದಾನ ಇಲ್ಲ ಎಂಬಂತಾಗಿದೆ. ನಗರ ವ್ಯಾಪ್ತಿಯಲ್ಲಿ ಸ್ಥಳಾವಕಾಶದ ಕೊರತೆಯಿಂದ ಬೇಡಿಕೆಯಿದ್ದರೂ ಮೈದಾನ ನಿರ್ಮಿಸಲು ಸಾಧ್ಯವಾಗಿಲ್ಲ. ಜಿಲ್ಲೆಯಲ್ಲಿ ಹಾಕಿ ಕೋಚ್ ಇದ್ದಾರೆ. ಆದರೆ ಕ್ರೀಡಾಂಗಣ ಇಲ್ಲ ಎನ್ನುವಂತಾಗಿದೆ. ಕೋಚ್ ಶಾಲೆಗಳಿಗೆ ತೆರಳಿ ತರಬೇತಿ ನೀಡುತ್ತಿದ್ದಾರೆ. ಜಾಗ ಸಿಕ್ಕರೆ ಬೇಡಿಕೆ ಈಡೇರಿಸಲು ಪ್ರಯತ್ನಿಸಲಾಗುವುದು. ಪ್ರದೀಪ್ ಡಿಸೋಜ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ

ಭರತ್ ಶೆಟ್ಟಿಗಾರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net