ಅಮೆರಿಕದಲ್ಲಿ ಹಾಕಿ ದಿಗ್ಗಜ ಲಾಕ್​ಡೌನ್: ಸಹಾಯಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮೊರೆ- ಬಾತ್ರಾ ಬಳಿ ಮನವಿ

ashok diwan april
Published on

ನವದೆಹಲಿ: ಒಲಿಂಪಿಯನ್ ಹಾಗೂ 1975ರ ವಿಶ್ವಕಪ್ ವಿಜೇತ ಭಾರತ ಹಾಕಿ ತಂಡದ ಸದಸ್ಯ ಅಶೋಕ್ ದಿವಾನ್, ಅಮೆರಿಕದಲ್ಲೇ ಲಾಕ್​ಡೌನ್ ಆಗಿದ್ದಾರೆ. ತವರಿಗೆ ವಾಪಸಾಗಲು ಸಹಕರಿಸುವಂತೆ ಕೇಂದ್ರ ಸರ್ಕಾರದ ಮೊರೆ ಹೋಗಿದ್ದಾರೆ.

ಹಾಕಿ ದಿಗ್ಗಜನನ್ನು ತವರಿಗೆ ವಾಪಸ್ ಕರೆಸಿಕೊಳ್ಳಲು ಕ್ರೀಡಾ ಸಚಿವಾಲಯ ಕೂಡ ಒತ್ತಡ ಹೇರುತ್ತಿದೆ. ಕೋವಿಡ್-19 ರಿಂದಾಗಿ ಇಡೀ ದೇಶವೇ ಲಾಕ್​ಡೌನ್ ಆಗಿರುವ ಹಿನ್ನೆಲೆಯಲ್ಲಿ ಇದೀಗ ವಿದೇಶಿ ಸಂಪರ್ಕ ಕೂಡ ಕಡಿತಗೊಂಡಿದೆ. ಆನಾರೋಗ್ಯದಿಂದ ಬಳಲುತ್ತಿರುವ 65 ವರ್ಷದ ಅಶೋಕ್ ದಿವಾನ್, ಭಾರತೀಯ ಒಲಿಂಪಿಕ್ ಸಂಸ್ಥೆ ಅಧ್ಯಕ್ಷ (ಐಒಎ) ನರೇಂದ್ರ ಬಾತ್ರರನ್ನು ಸಂರ್ಪಸಿ ಭಾರತಕ್ಕೆ ವಾಪಸಾಗಲು ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಕ್ರೀಡಾ ಸಚಿವಾಲಯ, ಕ್ರೀಡಾ ಸಚಿವರಾದ ಕಿರಣ್ ರಿಜಿಜು ಪತ್ರ ಸ್ವೀಕರಿಸಿದ್ದು, ವಿದೇಶಾಂಗ ಸಚಿವರೊಂದಿಗೆ ಮಾತುಕತೆ ನಡೆಸಲಾಗುವುದು ಎಂದಿದೆ. ವಿದೇಶಾಂಗ ಸಚಿವಾಲಯ ಕ್ರಮ ಕೈಗೊಳ್ಳಲಿದೆ ಎಂದು ಕ್ರೀಡಾ ಸಚಿವಾಲಯ ಹೇಳಿದೆ.

ಧ್ಯಾನಚಂದ್ ಪ್ರಶಸ್ತಿ ಪುರಸ್ಕೃತರಾಗಿರುವ ಅಶೋಕ್ ದಿವಾನ್, ಪೂರ್ವನಿಗದಿಯಂತೆ ಏಪ್ರಿಲ್ 20 ರಂದು ಸ್ವದೇಶಕ್ಕೆ ಆಗಮಿಸಬೇಕಿದೆ. ಆದರೆ, ಲಾಕ್​ಡೌನ್ ಮುಂದುವರಿಯುವ ಸಾಧ್ಯತೆ ಇರುವುದರಿಂದ ನಿಗದಿತ ವೇಳೆಗೆ ವಾಪಸಾಗುವುದು ಅನುಮಾನವಾಗಿದೆ. ಅಮೆರಿಕದ ಕ್ಯಾಲಿಫೋರ್ನಿಯಾದ ಆಸ್ಪತ್ರೆಗೆ ದಿವಾನ್ ಹೋಗಿದ್ದರು. ಇಲ್ಲಿ ವೈದ್ಯಕೀಯ ವೆಚ್ಚ ದುಬಾರಿಯಾಗಿದ್ದು, ಮೆಡಿಕಲ್ ಇನ್ಶುರೆನ್ಸ್ ಕೂಡ ಇಲ್ಲ. ದಯಮಾಡಿ ಸಹಕರಿಸಿ ಭಾರತಕ್ಕೆ ವಾಪಸ್ ಕರೆಸಿಕೊಳ್ಳಿ ಎಂದು ಬಾತ್ರ ಬಳಿ ದಿವಾನ್ ತಿಳಿಸಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net