ಉತ್ತಮ ಹಾಕಿ ಮೈದಾನ ಸೌಲಭ್ಯ ಕಲ್ಪಿಸಿ: ಹಾಕಿ ಕೋಚ್ ಅಂಕಿತಾ

IMG_0657
Published on

ಶಿವಮೊಗ್ಗ: ನಗರದಲ್ಲಿ ಉತ್ತಮ ಹಾಕಿ ಮೈದಾನ ಸೌಲಭ್ಯ ಕಲ್ಪಿಸಿದರೆ ಒಳ್ಳೆಯ ಆಟಗಾರರನ್ನು ಹೊರತರಲು ಸಾಧ್ಯ ಎಂದು ಭಾರತೀಯ ಮಹಿಳಾ ಹಾಕಿ ತಂಡದ ಸಹಾಯಕ ಕೋಚ್ ಬಿ.ಎಸ್.ಅಂಕಿತಾ ಅಭಿಪ್ರಾಯಪಟ್ಟರು.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತೀಯ ಮಹಿಳಾ ಹಾಕಿ ತಂಡ ಉತ್ತಮ ಪ್ರದರ್ಶನ ತೋರುವಲ್ಲಿ ಪ್ರಮುಖ ಪಾತ್ರವಹಿಸಿದ ಹಿನ್ನೆಲೆಯಲ್ಲಿ ಸೋಮವಾರ ಡಿಸಿ ಕಚೇರಿಯಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ನಾನು ಶಿವಮೊಗ್ಗದವಳು ಎಂದು ಹೇಳಿಕೊಳ್ಳಲು ಹೆಮ್ಮೆ ಅನ್ನಿಸುತ್ತಿದೆ ಎಂದರು.

ಒಲಿಂಪಿಕ್ಸ್‌ನಲ್ಲಿ ಸಾಧನೆ ಮಾಡಿದ ತಂಡದ ಭಾಗವಾಗಿದ್ದು ಅವಿಸ್ಮರಣೀಯ ಅನುಭವ. ಶಿವಮೊಗ್ಗದಲ್ಲಿ ಪ್ರತಿಭಾವಂತ ಹಾಕಿ ಆಟಗಾರರಿದ್ದಾರೆ. ಕೆಲವರು ರಾಷ್ಟ್ರ ಮಟ್ಟವನ್ನೂ ಪ್ರತಿನಿಧಿಸುತ್ತಿದ್ದಾರೆ. ಮತ್ತಷ್ಟು ಪ್ರತಿಭೆಗಳನ್ನು ಗುರುತಿಸಿ ತರಬೇತಿ ನೀಡುವ ಗುರಿ ಇದೆ ಎಂದು ಹೇಳಿದರು.

ಒಲಿಂಪಿಕ್ಸ್‌ನಲ್ಲಿ ಸೆಮಿಫೈನಲ್ ತಲುಪಿದ್ದ ಭಾರತೀಯ ಹಾಕಿ ತಂಡದ ಸದಸ್ಯರಾಗಿದ್ದ ತಾವು ಶಿವಮೊಗ್ಗ ಮೂಲದವರು ಎಂಬುದು ಜಿಲ್ಲೆಯ ಹೆಮ್ಮೆ. ಈ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಮಾಡುವಂತೆ ಡಿಸಿ ಕೆ.ಬಿ.ಶಿವಕುಮಾರ್ ಹಾರೈಸಿದರು.

ಜಿಪಂ ಸಿಇಒ ಎಂ.ಎಲ್.ವೈಶಾಲಿ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್ ಸ್ವಾಮಿ, ಅಂಕಿತಾ ಅವರ ಕುಟುಂಬದ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net