

ನವದೆಹಲಿ: ಸಿಡ್ನಿ ಟೆಸ್ಟ್ನಿಂದ ಹೊರಗುಳಿಯುವುದರೊಂದಿಗೆ ಮೆಲ್ಬೋರ್ನ್ ಪಂದ್ಯವೇ ರೋಹಿತ್ ಶರ್ಮರ ಕೊನೇ ಟೆಸ್ಟ್ ಆಗುವ ನಿರೀಕ್ಷೆ ಹೆಚ್ಚಾಗಿದೆ. ಇದರೊಂದಿಗೆ ಫೆಬ್ರವರಿ-ಮಾರ್ಚ್ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲೂ ಅವರು ಮುಂದುವರಿಯುವ ಸಾಧ್ಯತೆ ಕ್ಷೀಣಿಸಿದೆ. 37 ವರ್ಷದ ರೋಹಿತ್ ವೃತ್ತೀಜಿವನ ಈಗ ಸಂಧ್ಯಾಕಾಲದತ್ತ ಮುಖಮಾಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಕಳೆದ ವರ್ಷ ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಚುಟುಕು ಕ್ರಿಕೆಟ್ ಮಾದರಿಗೆ ವಿದಾಯ ಘೋಷಿಸಿದ್ದರು.
ಆಸ್ಟ್ರೆಲಿಯಾ ಪ್ರವಾಸದ ನಂತರದಲ್ಲಿ ರೋಹಿತ್ರನ್ನು ಟೆಸ್ಟ್ ಕ್ರಿಕೆಟ್ನಲ್ಲಿ ಆಡಿಸಲು ಆಯ್ಕೆಗಾರರು ಒಲವು ಹೊಂದಿಲ್ಲ. ಇದನ್ನು ಈಗಾಗಲೆ ಸಿಡ್ನಿ ಟೆಸ್ಟ್ ಪಂದ್ಯಕ್ಕೆ ಮುನ್ನ ಅವರಿಗೆ ಸ್ಪಷ್ಟಪಡಿಸಲಾಗಿದೆ. ಆಸೀಸ್ ಪ್ರವಾಸದ ನಂತರ ಆಯ್ಕೆಗಾರರು ಮತ್ತೋರ್ವ ಪ್ರಮುಖ ಬ್ಯಾಟರ್ ವಿರಾಟ್ ಕೊಹ್ಲಿ ಜತೆಗೂ ಭವಿಷ್ಯದ ಯೋಜನೆಗಳ ಬಗ್ಗೆ ಚರ್ಚಿಸಲಿದ್ದಾರೆ ಎನ್ನಲಾಗಿದೆ. ಆದರೆ ತಂಡದಲ್ಲಿರುವ ಇನ್ನೋರ್ವ ಅನುಭವಿ ಆಟಗಾರ ರವೀಂದ್ರ ಜಡೇಜಾರನ್ನು ಇನ್ನೂ ಒಂದೆರಡು ವರ್ಷಗಳ ಕಾಲ ಟೆಸ್ಟ್ ಕ್ರಿಕೆಟ್ನಲ್ಲಿ ಮುಂದುವರಿಸಲು ಆಯ್ಕೆಗಾರರು ಒಲವು ಹೊಂದಿದ್ದಾರೆ. ಅವರ ಮೌಲ್ಯಕ್ಕೆ ತಕ್ಕ ಬದಲಿ ಆಲ್ರೌಂಡರ್ ಸದ್ಯಕ್ಕೆ ಲಭ್ಯ ಇಲ್ಲದಿರುವುದು ಇದಕ್ಕೆ ಕಾರಣ ಎನ್ನಲಾಗಿದೆ.
ಚಾಂಪಿಯನ್ಸ್ ಟ್ರೋಫಿ ನಂತರದಲ್ಲಿ ಭಾರತ ಆಗಸ್ಟ್ವರೆಗೆ ಬೇರಾವುದೇ ಏಕದಿನ ಸರಣಿ ಹೊಂದಿಲ್ಲ. ಅಲ್ಲದೆ ಭಾರತ, ಚಾಂಪಿಯನ್ಸ್ ಟ್ರೋಫಿ ನಂತರ 2027ರ ಏಕದಿನ ವಿಶ್ವಕಪ್ಗೆ ತಂಡ ಕಟ್ಟುವ ಕೆಲಸ ಆರಂಭಿಸಬೇಕಾಗಿದ್ದು, 2027ರ ವೇಳೆ ರೋಹಿತ್ಗೆ 40 ವರ್ಷ ಆಗಲಿರುವುದರಿಂದ ಅವರು ಅದುವರೆಗೆ ಆಡುವುದು ಅನುಮಾನವಿದೆ. ಹಾಲಿ ಫಾರ್ಮ್-ಫಿಟ್ನೆಸ್ ಕೂಡ ಅವರಿಗೆ ಪೂರಕವಾಗಿಲ್ಲ. ಹೀಗಾಗಿ ರೋಹಿತ್ರ 17 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನ ಇನ್ನು 2 ತಿಂಗಳಲ್ಲಿ ಪೂರ್ಣವಿರಾಮ ಕಾಣುವ ಲಕ್ಷಣಗಳೇ ಹೆಚ್ಚಾಗಿವೆ.