

ಗ್ವಾಲಿಯಾರ್: ಶ್ರೀಲಂಕಾ ವಿರುದ್ಧದ ಏಕದಿನ ಹಾಗೂ ಟಿ20 ಸರಣಿ ಬಳಿಕ ರೆಸ್ಟ್ ಮೂಡ್ನಲ್ಲಿರುವ ಟೀಮ್ ಇಂಡಿಯಾ ಆಟಗಾರರು ಸೆಪ್ಟೆಂಬರ್ನಲ್ಲಿ ಬಾಂಗ್ಲಾದೇಶ ವಿರುದ್ಧ ಜರುಗಲಿರುವ ಸೀರೀಸ್ನಲ್ಲಿ ಅಖಾಡಕ್ಕಿಳಿಯಲಿದ್ದಾರೆ. ಪ್ರವಾಸಿ ತಂಡದ ವಿರುದ್ಧ ನಡೆಯಲಿರುವ ಸರಣಿಗೆ ಭಾರತ ಆತಿಥ್ಯ ವಹಿಸಲಿದ್ದು, ಯಾವುದೇ ಕಾರಣಕ್ಕೂ ಸರಣಿ ನಡೆಸಬಾರದು ಎಂದು ಹಿಂದೂ ಮಹಾಸಭಾ ಆಗ್ರಹಿಸಿದೆ.
ಬಾಂಗ್ಲಾದೇಶ ವಿರುದ್ಧ ಎರಡು ಟೆಸ್ಟ್, ಮೂರು ಟಿ20 ಪಂದ್ಯಗಳನ್ನು ಭಾರತ ಆಡಲಿದೆ. ಮೊದಲೆರಡು ಟೆಸ್ಟ್ ಪಂದ್ಯಗಳು ಕ್ರಮವಾಗಿ ಚೆನ್ನೈ ಹಾಗೂ ಕಾನ್ಪುರದಲ್ಲಿ ನಡೆಯಲ್ಲಿವೆ. ಆ ಬಳಿಕ ಆರಂಭವಾಗಲಿರುವ ಮೂರು ಪಂದ್ಯಗಳ ಟಿ20 ಸರಣಿಗೆ ಮಧ್ಯಪ್ರದೇಶ, ದೆಹಲಿ ಹಾಗೂ ಹೈದರಾಬಾದ್ ಕ್ರೀಡಾಂಗಣಗಳು ಆತಿಥ್ಯವಹಿಸಲಿವೆ. ಆದರೆ, ಮಧ್ಯಪ್ರದೇಶದ ಗ್ವಾಲಿಯಾರ್ನಲ್ಲಿ ನಡೆಯಬೇಕಿರುವ ಟಿ20 ಪಂದ್ಯಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದ್ದು, ರದ್ದುಪಡಿಸುವಂತೆ ಆಗ್ರಹ ಕೇಳಿ ಬರುತ್ತಿದೆ.
ಅಕ್ಟೋಬರ್ 06ರಂದು ಮಧ್ಯಪ್ರದೇಶದ ಗ್ವಾಲಿಯಾರ್ನಲ್ಲಿರುವ ಮಾಧವ್ರಾವ್ ಕ್ರೀಡಾಂಗಣದಲ್ಲಿ ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಅಂತಿಮ ಟಿ20 ಪಂದ್ಯ ನಡೆಯಲಿದೆ. ಆದರೆ ಈ ಪಂದ್ಯಕ್ಕೆ ಅಖಿಲ ಭಾರತ ಹಿಂದೂ ಮಹಾಸಭಾ ವಿರೋಧ ವ್ಯಕ್ತಪಡಿಸಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯದ ವಿರುದ್ಧ ಈ ಪಂದ್ಯವನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ರಕ್ತದಲ್ಲಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.
ಈ ಕುರಿತು ಮಾತನಾಡಿರುವ ರಾಷ್ಟ್ರೀಯ ಉಪಾಧ್ಯಕ್ಷ ಜೈವೀರ್ ಭಾರಧ್ವಾಜ್, ನೆರೆಯ ಬಾಂಗ್ಲಾದೇಶದ ಕ್ರಿಕೆಟ್ ತಂಡದೊಂದಿಗೆ ಭಾರತದ ನೆಲದಲ್ಲಿ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಗುರಿಯಾಗಿಸಿ ದಾಳಿ ಮಾಡಲಾಗುತ್ತಿದೆ. ಹೀಗಾಗಿ ಈ ವಿಚಾರದಲ್ಲಿ ಪ್ರಧಾನಿ ಮೋದಿ ಮಧ್ಯಸ್ಥಿಕೆ ವಹಿಸಬೇಕು. ಇಷ್ಟೇ ಅಲ್ಲದೇ ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಸರಣಿಯನ್ನು ರದ್ದುಪಡಿಸಬೇಕು. ಒಂದು ವೇಳ ಸರಣಿ ನಡೆಸಿದ್ದಲ್ಲಿ ನಾವು ಕಪ್ಪು ಬಾವುಟಗಳನ್ನು ಹಿಡಿದು ಪ್ರತಿಭಟಿಸುತ್ತೇವೆ ಎಂದು ಎಚ್ಚರಿಸಿದ್ದಾರೆ.
ಅಕ್ಟೋಬರ್ 6 ರಂದು ನಗರದ ಶಂಕರಪುರದಲ್ಲಿರುವ ಶ್ರೀಮಂತ್ ಮಾಧವರಾವ್ ಸಿಂಧಿಯಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದ್ದು, ಈ ಬಗ್ಗೆ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ಪುತ್ರ ಆರ್ಯಮನ್ ಸಿಂಧಿಯಾ ಮಾಹಿತಿ ನೀಡಿದ್ದರು. ಆದರೆ ಇದೀಗ ಈ ಪಂದ್ಯಕ್ಕೆ ಹಿಂದೂ ಮಹಾಸಭಾ ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಬಿಸಿಸಿಐ ಈ ಬಗ್ಗೆ ಯಾವ ಕ್ರಮ ಕೈಗೊಳ್ಳಿದೆ ಎಂಬುದನ್ನು ಕಾದು ನೋಡಬೇಕಿದೆ.