

D Gukesh: ನಿನ್ನೆ (ಅ.05) ಟೆಕ್ಸಾಸ್ನ ಆರ್ಲಿಂಗ್ಟನ್ನ ಎಸ್ಪೋರ್ಟ್ಸ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಅಮೆರಿಕ ನಡುವಿನ ಚೆಸ್ ಸ್ಪರ್ಧೆಯಲ್ಲಿ ಅಮೇರಿಕನ್ ಗ್ರ್ಯಾಂಡ್ಮಾಸ್ಟರ್ ಹಿಕಾರು ನಕಮುರಾ ಭಾರತೀಯ ಚಾಂಪಿಯನ್ ಆಟಗಾರ ಡಿ. ಗುಕೇಶ್ರನ್ನು ಮಣಿಸಿದರು. ಈ ವೇಳೆ ಗೆದ್ದು ಹೋಗಬೇಕಿದ್ದ ನಕಮುರಾ, ಗುಕೇಶ್ ಅವರ 'ಕಿಂಗ್' ಅನ್ನು ಪ್ರೇಕ್ಷಕರ ಬಳಿ ಎಸೆದು, ವಿಚಿತ್ರ ಸಂಭ್ರಮಾಚರಣೆ ಮಾಡಿದರು. ಹಿಕಾರು ಅವರ ಈ ನಡೆಗೆ ಜಾಲತಾಣಗಳಲ್ಲಿ ತೀವ್ರ ಟೀಕೆಗಳು ವ್ಯಕ್ತವಾಗಿವೆ.
ಈ ಘಟನೆ ಅಲ್ಲಿದ್ದ ಪ್ರೇಕ್ಷಕರನ್ನು ಒಂದು ನಿಮಿಷ ಭಾರೀ ಅಚ್ಚರಿಗೆ ದೂಡಿತು. ಪಂದ್ಯ ಗೆದ್ದ ಸಂತಸ ಓಕೆ, ಆದರೆ, ಎದುರಾಳಿಯ ಕಿಂಗ್ ಅನ್ನು ಜನರ ಮೇಲೆಸೆದು ಸಂಭ್ರಮಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಹಲವರು ಜಾಲತಾಣಗಳಲ್ಲಿ ಪ್ರಶ್ನಿಸಿದ್ದಾರೆ. ಹಿಕಾರು ಅವರ ನಡೆಗೆ ಯಾವುದೇ ರೀತಿಯಲ್ಲೂ ಸ್ಪಂದಿಸದ ಗುಕೇಶ್, ಇದನ್ನು ಕಂಡು ಕುಳಿತ ಜಾಗದಲ್ಲೇ ಸುಮ್ಮನಿದ್ದರು. ಇದರ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಮಾಜಿ ಚೆಸ್ ಚಾಂಪಿಯನ್ಗಳ ಕೆಂಗಣ್ಣಿಗೆ ಗುರಿಯಾಗಿದೆ.
ಈ ಅಸಭ್ಯ ವರ್ತನೆ ಸ್ವೀಕಾರಾರ್ಹವಲ್ಲ ಎಂದು ಹಲವರ ಅಭಿಪ್ರಾಯಗಳ ಬೆನ್ನಲ್ಲೇ ಮಾಜಿ ವಿಶ್ವ ಚಾಂಪಿಯನ್ ವ್ಲಾಡಿಮಿರ್ ಕ್ರಾಮ್ನಿಕ್ ಪ್ರತಿಕ್ರಿಯಿಸಿ, ಹಿಕಾರು ನಕಮುರಾ ನಡೆಗೆ ಛೀಮಾರಿ ಹಾಕಿದ್ದಾರೆ. "ಇದು ಕೇವಲ ಅಸಭ್ಯ ನಡೆಯಲ್ಲ, ಬದಲಿಗೆ ಅವನತಿಯ ಪರಮಾವಧಿ. ನನಗೆ ಗೊತ್ತಿಲ್ಲ, ಯಾರು ಈ ರೀತಿ ಮಕ್ಕಳಂತೆ ಆಡುತ್ತಾರೆ ಅಂತ? ಅರ್ಥವಿಲ್ಲದ ವರ್ತನೆ. ಓರ್ವ ವಿಶ್ವ ಚಾಂಪಿಯನ್ ಅನ್ನು ಎದುರಾಳಿ ಸ್ಥಾನದಲ್ಲಿ ಇರಿಸಿ, ಅವರ ಕಿಂಗ್ ಎನ್ನು ಎಸೆದು, ಸಂಭ್ರಮಿಸುವುದು ಒಪ್ಪುವಂತದ್ದಲ್ಲ" ಎಂದು ಕಿಡಿಕಾರಿದ್ದಾರೆ,(ಏಜೆನ್ಸೀಸ್).