

ವೆಲ್ಲಿಂಗ್ಟನ್: ನ್ಯೂಜಿಲೆಂಡ್ ಪಿಚ್ಗಳ ಸ್ಥಿತಿಗಳನ್ನು ಅರಿತುಕೊಂಡು, ವಿಕೆಟ್ ಕೀಳುವ ಹಠದಲ್ಲಿ ಇಶಾಂತ್ ಶರ್ಮ ನಡೆಸಿದ ಭರ್ಜರಿ ಬೌಲಿಂಗ್ ದಾಳಿಯ ನಡುವೆಯೂ ಭಾರತ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಹಿನ್ನಡೆ ಕಂಡಿದೆ. 165 ರನ್ಗಳ ಸಾಧಾರಣ ಮೊತ್ತಕ್ಕೆ ಮೊದಲ ಇನಿಂಗ್ಸ್ನಲ್ಲಿ ಆಲೌಟ್ ಆದ ಟೀಮ್ ಇಂಡಿಯಾ, ಬೌಲಿಂಗ್ ವೇಳೆ ದಿನದ ಕೊನೆಯಲ್ಲಿ ಹೋರಾಟ ನಡೆಸಿತು.
ಬೇಸಿನ್ ರಿಸರ್ವ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 5 ವಿಕೆಟ್ಗೆ 122 ರನ್ಗಳಿಂದ 2ನೇ ದಿನವಾದ ಶನಿವಾರ ಬ್ಯಾಟಿಂಗ್ ಮುಂದುವರಿಸಿದ ಭಾರತ ತಂಡ, 68.1 ಓವರ್ಗಳಲ್ಲಿ 165 ರನ್ಗೆ ಆಲೌಟ್ ಆಯಿತು. ಅದರಲ್ಲೂ ಕೊನೇ ಐದು ವಿಕೆಟ್ಗಳು ಕೇವಲ 43 ರನ್ಗಳ ಅಂತರದಲ್ಲಿ ಉದುರಿದ್ದು ಪಂದ್ಯದಲ್ಲಿ ಹಿನ್ನಡೆಗೆ ಕಾರಣವಾಯಿತು. ನಂತರ ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್ ತಂಡ 71.1 ಓವರ್ಗಳಲ್ಲಿ 5 ವಿಕೆಟ್ಗೆ 216 ರನ್ ಪೇರಿಸಿದೆ. ಆ ಮೂಲಕ 51 ರನ್ಗಳ ಅಮೂಲ್ಯ ಮುನ್ನಡೆಯನ್ನು ನ್ಯೂಜಿಲೆಂಡ್ ತಂಡ ಪಡೆದುಕೊಂಡಿದೆ.
ದಿನದ ಆರಂಭದಲ್ಲಿ ಟಿಮ್ ಸೌಥಿ ನಡೆಸಿದ ಮಾರಕ ದಾಳಿಯಿಂದ ಹಿನ್ನಡೆ ಕಂಡ ಭಾರತಕ್ಕೆ ಬಳಿಕ ಕೇನ್ ವಿಲಿಯಮ್ಸನ್ (89ರನ್, 153 ಎಸೆತ, 11 ಬೌಂಡರಿ) ಆಕರ್ಷಕ ಅರ್ಧಶತಕ ಬಾರಿಸುವ ಮೂಲಕ ತಂಡವನ್ನು ಕಾಡಿದರು. ಕೇವಲ ಎರಡೇ ವಿಕೆಟ್ ಕಳೆದುಕೊಂಡು ಮುನ್ನಡೆ ಕಂಡುಕೊಂಡಿದ್ದ ನ್ಯೂಜಿಲೆಂಡ್ಗೆ ಮುನ್ನಡೆ ವಿಸ್ತರಿಸಿಕೊಳ್ಳುವ ವೇಳೆ ಕಡಿವಾಣ ಹಾಕಿದ ಭಾರತ ಮೂರು ಪ್ರಮುಖ ವಿಕೆಟ್ಗಳನ್ನು ಉರುಳಿಸಿತು. ಭಾರತಕ್ಕೆ ಇನ್ನೊಂದು ಹಿತಕರ ವಿಚಾರವೆಂದರೆ, ಬೇಸಿನ್ ರಿಸರ್ವ್ ಸಾಂಪ್ರದಾಯಿಕ ನ್ಯೂಜಿಲೆಂಡ್ನ ಪಿಚ್ ರೀತಿಯ ವರ್ತನೆ ತೋರುತ್ತಿಲ್ಲ. ಮೊದಲ ದಿನದ ಆಟದ ಬಳಿಕ ಸ್ವಲ್ಪ ಮಟ್ಟಿಗೆ ಬ್ಯಾಟಿಂಗ್ ಹಾಗೂ ಸ್ಪಿನ್ ಸ್ನೇಹಿಯಾಗಿ ವರ್ತನೆ ತೋರಿದೆ. ಇದು 2ನೇ ಇನಿಂಗ್ಸ್ ಬ್ಯಾಟಿಂಗ್ ವೇಳೆ ಭಾರತಕ್ಕೆ ನೆರವಾಗುವ ಸಾಧ್ಯತೆ ಇದೆ. ಕಿವೀಸ್ ತಂಡಕ್ಕೆ ಉತ್ತಮ ಮೊತ್ತವನ್ನು ಚೇಸಿಂಗ್ಗೆ ನೀಡಿದಲ್ಲಿ ಗೆಲುವಿನ ಅವಕಾಶವೂ ಭಾರತಕ್ಕೆ ಇದೆ.
43 ರನ್ ಸೇರಿಸಿ ಭಾರತ ಆಲೌಟ್
ಚೇತರಿಕೆ ಕಾಣುವ ಭಾರತದ ಆಸೆಗೆ ದಿನದ ಆರಂಭದಲ್ಲಿಯೇ ಏಟು ಬಿದ್ದಿತು. ಶುಕ್ರವಾರದ ಮೊತ್ತಕ್ಕೆ 10 ರನ್ ಕೂಡಿಸಿದ ಹಂತದಲ್ಲಿ ಅಜಿಂಕ್ಯ ರಹಾನೆ (46ರನ್, 138 ಎಸೆತ, 5 ಬೌಂಡರಿ) ಹಾಗೂ ರಿಷಭ್ ಪಂತ್ (19) ಸಂವಹನದ ಕೊರತೆಯಿಂದಾಗಿ 6ನೇ ವಿಕೆಟ್ ಕಳೆದುಕೊಂಡಿತು. ರನ್ಗಾಗಿ ಯತ್ನಿಸಿದ ರಿಷಭ್ ಪಂತ್, ಅಜಾಜ್ ಪಟೇಲ್ರ ನಿಖರ ಥ್ರೋಗೆ ರನೌಟ್ ಆಗಿ ಹೊರನಡೆದರು. ಇದು ಭಾರತ ತಂಡದ ಕುಸಿತಕ್ಕೆ ಕಾರಣವಾಯಿತು. ಸ್ಪೆಷಲಿಸ್ಟ್ ಬ್ಯಾಟ್ಸ್ಮನ್ ಆಗಿ ಕ್ರೀಸ್ನಲ್ಲಿದ್ದ ಅಜಿಂಕ್ಯ ರಹಾನೆ ಅರ್ಧಶತಕದ ಗಡಿಯಿಂದ ನಾಲ್ಕು ರನ್ ದೂರವಿದ್ದಾಗ ಸೌಥಿಗೆ ವಿಕೆಟ್ ಒಪ್ಪಿಸಿದರು. ಮೊದಲ ಒಂದು ಗಂಟೆಯ ಆಟದ ಬಳಿಕ ನೀಡಲಾದ ಡ್ರಿಂಕ್ಸ್ ಬ್ರೇಕ್ ವೇಳೆಗೆ 43 ರನ್ ಪೇರಿಸಿದ್ದ ಭಾರತ, ಆ ನಂತರದ ಕೆಲ ಓವರ್ನಲ್ಲಿಯೇ ಮೊಹಮದ್ ಶಮಿ (21)ರೂಪದಲ್ಲಿ ತನ್ನ ಕೊನೆಯ ವಿಕೆಟ್ ಕಳೆದುಕೊಂಡಿತು. ಮೊದಲ ದಿನ ಜೇಮಿಸನ್ ನಡೆಸಿದ ದಾಳಿಯಿಂದ ಸ್ಪೂರ್ತಿ ಪಡೆದಂತೆ ಬೌಲಿಂಗ್ ನಡೆಸಿದ ಸೌಥಿ, ಆರಂಭಿಕ ಒಂದು ಗಂಟೆಯ ಆಟದಲ್ಲಿ ಶ್ರೇಷ್ಠ ವೇಗದ ಬೌಲಿಂಗ್ ನಿರ್ವಹಣೆ ತೋರುವ ಮೂಲಕ ಮೂರು ಪ್ರಮುಖ ವಿಕೆಟ್ ಉರುಳಿಸಿದರು.
ಕಾಡಿದ ವಿಲಿಯಮ್ಸನ್ಟೇಲರ್
ನ್ಯೂಜಿಲೆಂಡ್ ಬ್ಯಾಟಿಂಗ್ನ ಆರಂಭದ ವೇಳೆ ಭಾರತದ ಬೌಲರ್ಗಳು ವಿಕೆಟ್ ಉರುಳಿಸಲು ತಡಕಾಡಿದರು. 10 ಓವರ್ಗಳ ಕಾಲ ಜತೆಯಾಗಿದ್ದ ಟಾಮ್ ಲಥಾಮ್ ಹಾಗೂ ಟಾಮ್ ಬ್ಲಂಡೆಲ್ (30) ಜೋಡಿಯನ್ನು 26 ರನ್ ಆಗಿದ್ದಾಗ ಇಶಾಂತ್ ಬೇರ್ಪಡಿಸಿದರು. ಲಥಾಮ್ ನಿರ್ಗಮನದ ಬಳಿಕ ಬ್ಲಂಡೆಲ್ಗೆ ಜತೆಯಾದ ಕೇನ್ ವಿಲಿಯಮ್ಸನ್ 2ನೇ ವಿಕೆಟ್ಗೆ 47 ರನ್ಗಳ ಜತೆಯಾಟವಾಡಿದ್ದರು. ಅಪಾಯಕಾರಿಯಾಗುತ್ತಿದ್ದ ಈ ಜೋಡಿಯನ್ನು 27ನೇ ಓವರ್ನಲ್ಲಿ ಇಶಾಂತ್ ಬೇರ್ಪಡಿಸಿದರು. ಇಶಾಂತ್ ಕಿವೀಸ್ ಬ್ಯಾಟ್ಸ್ಮನ್ಗಳಿಗೆ ತಡೆಗೋಡೆಯಾಗಿ ನಿಂತಿದ್ದರೆ, ಮೊಹಮದ್ ಶಮಿ ಹಾಗೂ ಜಸ್ಪ್ರೀತ್ ಬುಮ್ರಾ ನೀರಸ ದಾಳಿ ನಡೆಸಿ ರನ್ ನೀಡುತ್ತಿದ್ದರು. ಬಳಿಕ ವಿಲಿಯಮ್ಸನ್ಗೆ ಜತೆಯಾದ ರಾಸ್ ಟೇಲರ್ (44ರನ್, 71 ಎಸೆತ, 6 ಬೌಂಡರಿ, 1 ಸಿಕ್ಸರ್) ಅಶ್ವಿನ್ರ ಸ್ಪಿನ್ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. 3ನೇ ವಿಕೆಟ್ಗೆ 93 ರನ್ ಕೂಡಿಸಿದ್ದ ಈ ಜೋಡಿಯನ್ನು ಬೇರ್ಪಡಿಸಲೂ ಇಶಾಂತ್ ಬರಬೇಕಾಯಿತು. ಟೇಲರ್ಗೆ ಒಂದು ಆಕರ್ಷಕ ಎಸೆತ ಎಸೆದ ಇಶಾಂತ್ ವಿಕೆಟ್ ಉರುಳಿಸಲು ಯಶ ಕಂಡರು. ಆ ನಂತರ ಭಾರತ ಮತ್ತಷ್ಟು ಶಿಸ್ತಿನ ದಾಳಿ ನಡೆಸಿತು. ಬುಮ್ರಾ ಲಯ ಕಂಡುಕೊಳ್ಳುವಲ್ಲಿ ಯಶ ಕಂಡರೆ, ಎಡಗೈ ಬ್ಯಾಟ್ಸ್ಮನ್ ಹೆನ್ರಿ ನಿಕೋಲ್ಸ್ಗೆ
ಒಂದೊಂದು ರನ್ಗೂ ಅಶ್ವಿನ್ ಕಷ್ಟಪಡುವಂತೆ ಮಾಡಿದರು. ಶತಕದಿಂದ 11 ರನ್ ದೂರವಿದ್ದ ವೇಳೆ ಕೇನ್ ವಿಲಿಯಮ್ಸನ್, ಮೊಹಮದ್ ಶಮಿಯ ಎಸೆತದಲ್ಲಿ ರವೀಂದ್ರ ಜಡೇಜಾಗೆ ಕ್ಯಾಚ್ ನೀಡಿ ಹೊರನಡೆದರು. ಹೆನ್ರಿ ನಿಕೋಲ್ಸ್ ಹಾಗೂ ಬಿಜೆ ವ್ಯಾಟ್ಲಿಂಗ್ ಜೋಡಿ ದಿನದಾಟ ಮುಗಿಯವವರೆಗೂ ಬ್ಯಾಟಿಂಗ್ ಮಾಡುವ ಪ್ರಯತ್ನವನ್ನು ಅಶ್ವಿನ್ ಕೊನೆ ಮಾಡಿದರು. ದಿನದ ಕೊನೆಯಲ್ಲಿ ಇನ್ನಷ್ಟು ವಿಕೆಟ್ ಉರುಳಿಸುವ ಆಸೆಗೆ ಮಂದಬೆಳಕು ಅಡ್ಡಿಯಾಯಿತು.