ಮೂವತ್ತೊಂದು ವರ್ಷಗಳ ಅವಧಿಯಲ್ಲಿ ಇದೇ ಮೊದಲ ಬಾರಿ ಟೀಂ ಇಂಡಿಯಾಕ್ಕೆ ಕಿವೀಸ್ ಪಡೆಯಿಂದ ವೈಟ್​ವಾಷ್​!

New Zealand v India - ODI: Game 2
AUCKLAND, NEW ZEALAND - FEBRUARY 08: Tom Latham, Kyle Jamieson and Jimmy Neesham of the Black Caps celebrate after winning game two of the One Day International Series between New Zealand and India at at Eden Park on February 08, 2020 in Auckland, New Zealand. (Photo by Hannah Peters/Getty Images)
Published on

ಮೌಂಟ್​ ಮೌಂಗನುಯಿ: ನ್ಯೂಜಿಲ್ಯಾಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಮೂವತ್ತೊಂದು ವರ್ಷಗಳ ಅವಧಿಯಲ್ಲಿ ಇದೇ ಮೊದಲ ಸಲ ಏಕದಿನ ಪಂದ್ಯದ ಸರಣಿಯಲ್ಲಿ ಸಂಪೂರ್ಣ ಸೋಲು ಅನುಭವಿಸಿದೆ. ಮಂಗಳವಾರ ನಡೆದ ತೃತೀಯ ಏಕದಿನ ಪಂದ್ಯದಲ್ಲಿ ಕಿವೀಸ್ ಪಡೆ ಟೀಂ ಇಂಡಿಯಾ ವಿರುದ್ಧ 5 ವಿಕೆಟ್ ಜಯ ಸಾಧಿಸಿ, 3-0 ಅಂತರದ ವೈಟ್​ವಾಷ್​ ಗೆಲುವು ಸಾಧಿಸಿದೆ.

ಇದಕ್ಕೂ ಮುನ್ನ 1989ರಲ್ಲಿ ವೆಸ್ಟ್​ಇಂಡೀಸ್ ತಂಡ 5-0 ಅಂತರದ ವೈಟ್​ವಾಷ್​ ಗೆಲುವನ್ನು ಟೀಂ ಇಂಡಿಯಾ ವಿರುದ್ಧ ದಾಖಲಿಸಿತ್ತು. ನಂತರ ಈ ರೀತಿ ಟೀಂ ಇಂಡಿಯಾ ವಿರುದ್ಧ ಗೆಲುವು ಸಾಧಿಸಲು ಯಾವ ತಂಡದಿಂದಲೂ ಆಗಿರಲಿಲ್ಲ.

ತೃತೀಯ ಏಕದಿನ ಪಂದ್ಯದಲ್ಲಿ ಕಿವೀಸ್ ಪಡೆಗೆ ಟೀಂ ಇಂಡಿಯಾ ಕೆ.ಎಲ್​.ರಾಹುಲ್ ಶತಕದೊಂದಿಗೆ 297 ರನ್​ಗಳ ಗೆಲುವಿನ ಗುರಿಯನ್ನು ನೀಡಿತ್ತು. ಇದನ್ನು ಬೆನ್ನತ್ತಿದ ಕಿವೀಸ್ ತಂಡ 47.1 ಓವರ್​ ನಲ್ಲಿ ಐದು ವಿಕೆಟ್ ನಷ್ಟಕ್ಕೆ 300 ರನ್​ ಸೇರಿಸಿ ಗೆಲುವಿನ ನಗೆ ಬೀರಿತ್ತು.

ಹೆನ್ರಿ ನಿಕೋಲ್ಸ್​ 103 ಬಾಲ್​ ಎದುರಿಸಿ 80 ರನ್​, ಮಾರ್ಟಿನ್ ಗುಪ್ಟಿಲ್ 46 ಬಾಲ್ ಎದುರಿಸಿ 66 ರನ್​ ಸೇರಿಸಿದ್ದರು. ಕೊಲಿನ್ ಡೆ ಗ್ರಾಂಡ್​ಹೋಮ್​ 28 ಬಾಲ್​ನಲ್ಲಿ 58 ರನ್ ಚಚ್ಚಿದ್ದರು. ಇದರ ಪರಿಣಾಮ, 17 ಬಾಲ್ ಬಾಕಿ ಇರುವಾಗಲೇ ತಂಡ ಗೆಲುವು ಕಂಡಿತ್ತು.

ಗುಪ್ಟಿಲ್ ಮತ್ತು ನಿಕೋಲ್ಸ್ 40 ಬಾಲ್​ಗಳಲ್ಲಿ 50 ರನ್ ಸೇರಿಸಿ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್ ಜೊತೆಯಾಟದಲ್ಲಿ ಇವರು 106 ರನ್ ಸೇರಿಸಿದ್ದರು. ಇದರಲ್ಲಿ ಗುಪ್ಟಿಲ್​ ಆರು ಫೋರ್​, ನಾಲ್ಕು ಸಿಕ್ಸ್​ ಸೇರಿದೆ. ಟೀಂ ಇಂಡಿಯಾ ಕಡೆಯಿಂದ ಶಾರ್ದೂಲ್ ಠಾಕೂರ್​ (1-87) ಮತ್ತು ನವದೀಪ್​ ಸೈನಿ(0-68) ಬೌಲಿಂಗ್ ಮಾಡಲು ಪರದಾಡಿದರು. ಜಸ್ಪ್ರೀತ್ ಬೂಮ್ರಾ ಜಾದೂ ಇಡೀ ಸರಣಿಯಲ್ಲಿ ನಡೆಯಲಿಲ್ಲ. ಯುಜುವೇಂದ್ರ ಚಾಹಲ್​ (3-47) ಬೌಲಿಂಗ್ ಕೆಲಸ ಮಾಡಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net