ಕೋಚ್​ ಹುದ್ದೆಗೆ ಗೌತಮ್ ಗಂಭೀರ್ ಆಯ್ಕೆ ತಡ​! ಬಿಸಿಸಿಐ ವಿಳಂಬಕ್ಕೆ ಇದೊಂದೇ ಬಲವಾದ ಕಾರಣ

ವಿಜಯವಾಣಿ - 2024-07-09T115403.490
Published on

ನವದೆಹಲಿ: 2024ರ ಟಿ20 ವಿಶ್ವಕಪ್ ಟೂರ್ನಿಯೇ ತನ್ನ ಕೊನೆ ಎಂದು ಈ ಹಿಂದೆಯೇ ತಿಳಿಸಿದ್ದ ಹೆಡ್ ಕೋಚ್ ರಾಹುಲ್ ದ್ರಾವಿಡ್​, ಅದರಂತೆಯೇ ಈಗ ಭಾರತದ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇನ್ನು ಐಪಿಎಲ್ 17ನೇ ಆವೃತ್ತಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್​ ಮೆಂಟರ್ ಆಗಿ ತಂಡವನ್ನು ಚಾಂಪಿಯನ್​ ಪಟ್ಟಕೇರಿಸಿದ ಗೌತಮ್ ಗಂಭೀರ್​ಗೆ ಟೀಮ್ ಇಂಡಿಯಾ ಕೋಚ್ ಹುದ್ದೆಗೆ ಆಫರ್​ ಕೇಳಿಬಂದಿತ್ತು. ಇದರ ಬಗ್ಗೆ ಒಲವು ತೋರಿಸಿದ್ದ ಗಂಭೀರ್​, ಶೀಘ್ರವೇ ಹೆಡ್ ಕೋಚ್ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದೇ ಹಲವು ದಿನಗಳಿಂದ ಹೇಳಲಾಗುತ್ತಿದೆ. ಆದ್ರೆ, ಕಾರಣಾಂತರಗಳಿಂದ ಇದು ಮುಂದೂಡಿಕೆ ಆಗುತ್ತಿದೆ ವಿನಃ ಅಧಿಕೃತ ಘೋಷಣೆ ಹತ್ತಿರವಾಗುತ್ತಿಲ್ಲ.

ಪ್ರಸ್ತುತ ಜಿಂಬಾಬ್ವೆ ಟೂರ್​ ಕೈಗೊಂಡಿರುವ ಶುಭಮನ್ ಗಿಲ್ ನೇತೃತ್ವದ ಭಾರತ ತಂಡಕ್ಕೆ ಮಾಜಿ ಕ್ರಿಕೆಟಿಗ ವಿವಿಎಸ್​ ಲಕ್ಷಣ್​ ತಾತ್ಕಾಲಿಕ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಟಿ20 ವಿಶ್ವಕಪ್​ ಟೂರ್ನಿ ಮುಗಿದ ಬಳಿಕ ರಾಹುಲ್ ದ್ರಾವಿಡ್​ ಹೆಡ್​ ಕೋಚ್ ಸ್ಥಾನಕ್ಕೆ ರಾಜೀನಾಮೆ ಘೋಷಿಸುತ್ತಾರೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆ ಕೋಚ್ ಹುದ್ದೆಗೆ ಮತ್ತೊಬ್ಬರ ಹುಡುಕಾಟದಲ್ಲಿ ತೊಡಗಿದ ಬಿಸಿಸಿಐ, ಗೌತಮ್ ಗಂಭೀರ್ ಮತ್ತು ಡಬ್ಲ್ಯೂವಿ ಲಕ್ಷಣ್​ರನ್ನು ಸಂದರ್ಶನ ಮಾಡಿತ್ತು. ಇವರಿಬ್ಬರ ಪೈಕಿ ಗಂಭೀರ್​ ಕೋಚ್​ ಸ್ಥಾನ ಅಲಂಕರಿಸುವುದು ಪಕ್ಕಾ ಎಂದೇ ಹೇಳಲಾಗಿತ್ತು. ಆದ್ರೆ, ಈಗ ಅದು ಡೌಟ್​ ಎಂಬಂತೆ ತೋರುತ್ತಿದೆ.

ಹೆಡ್​ ಕೋಚ್ ಹುದ್ದೆಗೆ ಗಂಭೀರ್​ ಅವರೇ ಬಹುತೇಕ ಖಚಿತ ಎಂದು ಹೇಳಲಾಗಿದ್ದು, ಬಿಸಿಸಿಐ ಮಾತ್ರ ಅಧಿಕೃತ ಘೋಷಣೆ ಹೊರಡಿಸಲು ಮೀನಮೇಷ ಎಣಿಸುತ್ತಿದೆ. ಇದಕ್ಕೆ ಕಾರಣವೇನು ಎಂಬುದು ಸದ್ಯ ಅನೇಕರಲ್ಲಿ ಗೊಂದಲ ಸೃಷ್ಟಿಸಿದೆ. ಈಗಾಗಲೇ ಬಿಸಿಸಿಐ ಹೇಳಿರುವಂತೆ ಶ್ರೀಲಂಕಾ ಸರಣಿಗೂ ಮುನ್ನವೇ ಹೊಸ ಕೋಚ್​​ ಅನ್ನು ಅಧಿಕೃತವಾಗಿ ಘೋಷಿಸಲಾಗುವುದು ಎಂಬುದನ್ನು ಖಚಿತಪಡಿಸಿದೆ. ಗೌತಮ್ ಗಂಭೀರ್​ ಮತ್ತು ಭಾರತೀಯ ಕ್ರಿಕೆಟ್ ಮಂಡಳಿ ನಡುವೆ ಸದ್ಯ ಯಾಕೋ ಯಾವುದು ಸರಿಯಿಲ್ಲ ಎಂಬ ಅನುಮಾನಗಳು ಕಾಡಲಾರಂಭಿಸಿವೆ.

ಇತ್ತೀಚಿನ ವರದಿ ಪ್ರಕಾರ, ಹೆಡ್​ ಕೋಚ್ ಹುದ್ದೆಗೆ ಗೌತಮ್ ಗಂಭೀರ್ ಹೆಚ್ಚಿನ ಸಂಭಾವನೆ ಕೇಳಿದ್ದಾರೆ ಎನ್ನಲಾಗಿದೆ. ಈ ವಿಷಯದಲ್ಲಿ ಬಿಸಿಸಿಐ ಮತ್ತು ಗಂಭೀರ್ ನಡುವೆ ಮಾತುಕತೆ ನಡೆಯುತ್ತಿದ್ದು, ಇದು ಅಧಿಕೃತ ಘೋಷಣೆ ವಿಳಂಬಕ್ಕೆ ಕಾರಣವಾಗಿದೆ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net