

ಬ್ರಿಜ್ಟೌನ್: ಕಳೆದ ಒಂದು ದಶಕದಿಂದ ಸತತ 5 ಐಸಿಸಿ ಫೈನಲ್ಗಳಲ್ಲಿ ಸೋತಿರುವ ಭಾರತ ಮತ್ತು ಕಳೆದ 3 ದಶಕಗಳಿಂದ ಐಸಿಸಿ ವಿಶ್ವಕಪ್ಗಳಲ್ಲಿ ನಾಕೌಟ್ ಹಂತದಲ್ಲಿ ಮುಗ್ಗರಿಸಿರುವ ದಕ್ಷಿಣ ಆಫ್ರಿಕಾ ತಂಡಗಳು ಇದೀಗ 9ನೇ ಆವೃತ್ತಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಜೇಯವಾಗಿ ಪ್ರಶಸ್ತಿ ಸುತ್ತಿಗೇರಿವೆ. ಕೆರಿಬಿಯನ್ ನೆಲದಲ್ಲಿ ಶನಿವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಉಭಯ ತಂಡಗಳ ಪೈಕಿ ಒಂದು ಮಾತ್ರ, ಬಹುಕಾಲದ ಕನಸು ನನಸಾಗಿಸಿಕೊಳ್ಳಲಿದೆ. ಭಾರತ ತಂಡ 17 ವರ್ಷಗಳ ಬಳಿಕ ಮತ್ತು ಎರಡನೇ ಬಾರಿಗೆ ಟಿ20 ವಿಶ್ವಕಪ್ ಜಯಿಸುವ ಉತ್ಸಾಹದಲ್ಲಿದ್ದರೆ, ದ. ಆಫ್ರಿಕಾ ಚೊಚ್ಚಲ ಐಸಿಸಿ ವಿಶ್ವಕಪ್ ಗೆಲುವಿನ ಹಂಬಲದಲ್ಲಿದೆ. ಉಭಯ ತಂಡಗಳು ಫೈನಲ್ ಗೆದ್ದರೆ ಬರೆಯಬಹುದಾದ ದಾಖಲೆಗಳು ಇಲ್ಲಿವೆ...
ಭಾರತ ಗೆದ್ದರೆ...
*ಎರಡನೇ ಬಾರಿ ಮತ್ತು 17 ವರ್ಷಗಳ ಬಳಿಕ ಟಿ20 ವಿಶ್ವ ಚಾಂಪಿಯನ್.
*11 ವರ್ಷಗಳ ಐಸಿಸಿ ಟ್ರೋಫಿ, 13 ವರ್ಷಗಳ ಐಸಿಸಿ ವಿಶ್ವಕಪ್ ಬರ ನೀಗಲಿದೆ.
*ವೆಸ್ಟ್ ಇಂಡೀಸ್, ಇಂಗ್ಲೆಂಡ್ ನಂತರ ಭಾರತ 2 ಟಿ20 ವಿಶ್ವಕಪ್ ಗೆದ್ದ 3ನೇ ತಂಡ.
*ಭಾರತ 4ನೇ ಐಸಿಸಿ ವಿಶ್ವಕಪ್ (2 ಏಕದಿನ, 2 ಟಿ20) ಗೆಲುವಿನ ಸಾಧನೆ.
*ಧೋನಿ ನಂತರ ಟಿ20 ವಿಶ್ವಕಪ್ ಗೆದ್ದ 2ನೇ ನಾಯಕ ರೋಹಿತ್ ಶರ್ಮ.
*ರೋಹಿತ್ ಶರ್ಮ 2 ಟಿ20 ವಿಶ್ವಕಪ್ ಗೆದ್ದ ಮೊದಲ ಭಾರತೀಯ.
*ಕಪಿಲ್ ದೇವ್, ಸೌರವ್ ಗಂಗೂಲಿ, ಧೋನಿ ಬಳಿಕ ರೋಹಿತ್ ಐಸಿಸಿ ಟ್ರೋಫಿ ಗೆದ್ದ 4ನೇ ಭಾರತೀಯ ನಾಯಕ.
*ವಿರಾಟ್ ಕೊಹ್ಲಿ ಏಕದಿನ-ಟಿ20 ವಿಶ್ವಕಪ್ ಗೆಲುವಿನ ಸಾಧನೆ.
*ಮುಖ್ಯ ಕೋಚ್ ರಾಹುಲ್ ದ್ರಾವಿಡ್ಗೆ ಗೆಲುವಿನ ವಿದಾಯ.
*ದ್ರಾವಿಡ್ ಕೋಚ್ ಆಗಿ ಜೂನಿಯರ್&ಸೀನಿಯರ್ ವಿಭಾಗದಲ್ಲಿ ಐಸಿಸಿ ಟ್ರೋಫಿ ಗೆಲುವು.
*ಸತತ 5 ಐಸಿಸಿ ಟೂರ್ನಿಗಳ ಫೈನಲ್ ಸೋಲಿನ ಬಳಿಕ ಗೆಲುವಿನ ಸಾಧನೆ.
ದಕ್ಷಿಣ ಆಫ್ರಿಕಾ ಗೆದ್ದರೆ...
*ಚೊಚ್ಚಲ ಐಸಿಸಿ ವಿಶ್ವಕಪ್ ಗೆಲುವಿನ ಸಾಧನೆ.
*ಟಿ20 ವಿಶ್ವಕಪ್ ಗೆದ್ದ 7ನೇ ತಂಡವೆನಿಸಲಿದೆ.
*1998ರ ನಾಕೌಟ್ ಟ್ರೋಫಿ ಬಳಿಕ 2ನೇ ಐಸಿಸಿ ಪ್ರಶಸ್ತಿ ಜಯ.
*ಏಡನ್ ಮಾರ್ಕ್ರಮ್ ಕಿರಿಯರ-ಹಿರಿಯರ ಐಸಿಸಿ ವಿಶ್ವಕಪ್ ಗೆದ್ದ ನಾಯಕ.
*ಸತತ 9ನೇ ಜಯದೊಂದಿಗೆ ಅಜೇಯವಾಗಿ ಚಾಂಪಿಯನ್ ಪಟ್ಟದ ಸಾಧನೆ.
*ಅಜೇಯವಾಗಿ ಟಿ20 ವಿಶ್ವಕಪ್ ಗೆದ್ದ ಮೊದಲ ತಂಡವೆನಿಸಲಿದೆ.
*ನಾಕೌಟ್ನಲ್ಲಿ ಸೋಲುವುದಕ್ಕೆ ಅಂಟಿರುವ "ಚೋಕರ್ಸ್' ಹಣೆಪಟ್ಟಿ ಕಳಚಲಿದೆ.
ಮುರಿಯುವುದೇ ಫೈನಲ್ ಸೋಲಿನ ಸರಣಿ?
ಭಾರತ ತಂಡ 2013ರ ಚಾಂಪಿಯನ್ಸ್ ಟ್ರೋಫಿ ಗೆಲುವಿನ ಬಳಿಕ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ. ನಂತರದಲ್ಲಿ 5 ಬಾರಿ ಐಸಿಸಿ ಟೂರ್ನಿಯ ಫೈನಲ್ಗೇರಿದರೂ ನಿರಾಸೆ ಅನುಭವಿಸಿದೆ. 2014ರ ಟಿ20 ವಿಶ್ವಕಪ್, 2017ರ ಚಾಂಪಿಯನ್ಸ್ ಟ್ರೋಫಿ, 2021 ಮತ್ತು 2023ರ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್, 2023ರ ಏಕದಿನ ವಿಶ್ವಕಪ್ ಫೈನಲ್ಗಳಲ್ಲಿ ಭಾರತ ತಂಡ ಮುಗ್ಗರಿಸಿತ್ತು. ಈ ಫೈನಲ್ ಸೋಲಿನ ಸರಪಳಿ ಮುರಿಯಲು ಇದು ಉತ್ತಮ ಅವಕಾಶವೆನಿಸಿದೆ.