ಆತ ಬೆಂಕಿ ಹಚ್ಚುವುದಂತು ಪಕ್ಕಾ; ಗೌತಮ್​ ಗಂಭೀರ್​ ಕುರಿತು ಶಾಕಿಂಗ್​ ಹೇಳಿಕೆ ಕೊಟ್ಟ ಲೆಜಂಡರಿ ಆಟಗಾರ

Gautham Gambhir
Published on

ನವದೆಹಲಿ: ಟೀಮ್​​ ಇಂಡಿಯಾವನ್ನು ಯಶಸ್ವಿಯಾಗಿ ಮುನ್ನಡೆಸಿದ ರಾಹುಲ್ ದ್ರಾವಿಡ್ ಅವರ ಉತ್ತರಾಧಿಕಾರಿಯಾಗಿ ಯಾರು ಅಧಿಕಾರ ವಹಿಸಿಕೊಳ್ಳುತ್ತಾರೆ ಎಂಬ ಕುತೂಹಲ ಕಳೆದ ಒಂದು ತಿಂಗಳಿಂದ ಎಲ್ಲರಲ್ಲೂ ಮನೆ ಮಾಡಿತ್ತು. ಅಭಿಮಾನಿಗಳ ಜೊತೆಗೆ, ಮಾಜಿ ಕ್ರಿಕೆಟಿಗರು ಮತ್ತು ಕ್ರೀಡಾ ತಜ್ಞರು ಕೂಡ ಈ ವಿಷಯದ ಬಗ್ಗೆ ತುಂಬಾ ಆಸಕ್ತಿ ತೋರಿಸಿದ್ದರು. ಕೊನೆಗೂ ಕುತೂಹಲಕ್ಕೆ ತೆರೆಬಿದ್ದಿದ್ದು, ಟೀಮ್​ ಇಂಡಿಯಾದ ಮುಖ್ಯ ಕೋಚ್ ಆಗಿ ದಿಗ್ಗಜ ಆಟಗಾರ ಗೌತಮ್ ಗಂಭೀರ್ ಅವರನ್ನು ಬಿಸಿಸಿಐ ನೇಮಕ ಮಾಡಿದೆ.

ಈ ತಿಂಗಳ ಕೊನೆಯಲ್ಲಿ ಶ್ರೀಲಂಕಾ ವಿರುದ್ಧ ಆರಂಭವಾಗುವ ಸರಣಿಯಲ್ಲಿ ಗಂಭೀರ್​ ಮುಖ್ಯ ಕೋಚ್​ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಇದಾದ ಬಳಿಕ 2025ರಲ್ಲಿ ಚಾಂಪಿಯನ್ಸ್​ ಟ್ರೋಪಿ, ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​, 2026ರಲ್ಲಿ ಟಿ20 ವಿಶ್ವಕಪ್​, 2027ರಲ್ಲಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಹಾಗೂ ಏಕದಿನ ವಿಶ್ವಕಪ್​ಗೆ ತಂಡವನ್ನು ಸಜ್ಜುಗೊಳಿಸಬೇಕಿದೆ. ಈ ನಿಟ್ಟಿನಲ್ಲಿ  ಕೆಲವೊಂದು ಬದಲಾವಣೆಗಳತ್ತ ಗಂಭೀರ್​ ಗಮನಹರಿಸಿದ್ದು,  ಟೀಮ್​ ಇಂಡಿಯಾದಲ್ಲಿ ಹೊಸ ಅಧ್ಯಾಯ ಆರಂಭಿಸಲು ಗೌತಿ ಮುಂದಾಗಿದ್ದಾರೆ. ಇದರ ನಡುವೆಯೇ ಮಾಜಿ ಆಟಗಾರರೊಬ್ಬರು ಗೌತಮ್​ ಗಂಭೀರ್​ ಕುರಿತು ನೀಡಿರುವ ಹೇಳಿಕೆ ಸಖತ್​ ವೈರಲ್​ ಆಗುತ್ತಿದೆ.

jacques kallis

ಟೀಮ್​ ಇಂಡಿಯಾ ನೂತನ ಕೋಚ್​ ಆಗಿ ಗೌತಮ್​ ಗಂಭೀರ್​ ನೇಮಕಗೊಂಡಿರುವ ಕುರಿತು ಮಾತನಾಡಿರುವ ದಕ್ಷಿಣ ಆಫ್ರಿಕಾದ ಲೆಜೆಂಡರಿ ಆಟಗಾರ ಜಾಕ್​ ಕಾಲಿಸ್​, ಕೋಚ್​ ಆಗಿ ಗೌತಮ್​ ನುತನ ಜವಾಬ್ದಾರಿಯನ್ನು ವಹಿಸಿಕೊಂಡಿರುವುದನ್ನು ನೋಡಿ ತುಂಬಾ ಖುಷಿಯಾಗುತ್ತಿದೆ. ಕ್ರಿಕೆಟ್​ ಬಗ್ಗೆ ಆತನಿಗೆ ಹೆಚ್ಚಿನ ಅರಿವಿದ್ದು, ಬೆಂಕಿ ಹಚ್ಚುತ್ತಾನೆ ಎಂಬ ನಂಬಿಕೆ ನನಗಿದೆ. ಆಟವನ್ನು ಆಕ್ರಮಣಕಾರಿಯಾಗಿ ಆಡಲು ಇಷ್ಟಪಡುವ ಗೌತಮ್​ ತಂಡಕ್ಕೆ ಹೊಸ ಸ್ಪರ್ಶ ನೀಡುತ್ತಾನೆ. ಗೌತಮ್​ ಕೋಚ್​ ಆದ ಬಳಿಕ ಆಟಗಾರರು ಆತನಿಂದ ಸಾಕಷ್ಟು ಕಲಿಯುತ್ತಾರೆ. ಭಾರತ ಕ್ರಿಕೆಟ್​ ತಂಡದ ಮೌಲ್ಯವನ್ನು ಆತ ಹೆಚ್ಚಿಸುತ್ತಾನೆ. ನನ್ನ ಪ್ರಕಾರ ಆತ ಹೊಸ ಹುರುಪು ತಂದೆ ತರುತ್ತಾನೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್​ ತಂಡದ ಲೆಜಂಡರಿ ಆಟಗಾರ ಜಾಕ್​ ಕಾಲಿಸ್​ ಅಭಿಪ್ರಾಯಪಟ್ಟಿದ್ದಾರೆ.

ಮುಖ್ಯ ಕೋಚ್​ ಮಾತ್ರ ಅಧಿಕೃತವಾಗಿ ಘೋಷಣೆಯಾಗಿದ್ದು, ಉಳಿದ ಕೋಚಿಂಗ್​ ಸ್ಟಾಫ್​​ಗೆ ಸಂಬಂಧಿಸಿದ ವಿವರಗಳು ಇನ್ನೂ ಬಾಕಿ ಉಳಿದಿವೆ. ಆದಾಗ್ಯೂ ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ಊಹಾಪೋಹಗಳು ಹರಿದಾಡುತ್ತಿವೆ. ಇದರ ನಡುವೆಯೇ ಈಗಿರುವ ಸಹಾಯಕ ಸಿಬ್ಬಂದಿಯನ್ನು ಮುಂದುವರೆಸಲು ಬಿಸಿಸಿಐ ಮುಂದಾಗಿದೆ ಎಂದು ವರದಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net