

ಹರಾರೆ: ಮಾರಕ ಕ್ಯಾನ್ಸರ್ ಕಾಯಿಲೆ ವಿರುದ್ಧ ಹೋರಾಡುತ್ತಿದ್ದ ಜಿಂಬಾಬ್ವೆ ಕ್ರಿಕೆಟ್ ಲೆಜೆಂಡ್ ಹೀತ್ ಸ್ಟ್ರೀಕ್ 49ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಇಂದು (ಸೆ.03) ಬೆಳಗ್ಗೆ ಕೊನೆಯುಸಿರೆಳೆದಿರುವ ಸುದ್ದಿಯನ್ನು ಸ್ವತಃ ಅವರ ಪತ್ನಿ ನಾದಿನೆ ಸ್ಟ್ರೀಕ್ ಸಾಮಾಜಿಕ ಜಾಲತಾಣ ಮೂಲಕ ಖಚಿತಪಡಿಸಿದ್ದಾರೆ.
ಇಂದು ಮುಂಜಾನೆ ಅಂದರೆ ಸೆ. 3ರ ಭಾನುವಾರದಂದು, ನನ್ನ ಜೀವನದ ಅತ್ಯಂತ ಪ್ರೀತಿಯ ವ್ಯಕ್ತಿ ಮತ್ತು ನನ್ನ ಸುಂದರ ಮಕ್ಕಳ ತಂದೆ ಸ್ಟ್ರೀಕ್ರನ್ನು ಅವರ ಮನೆಯಿಂದ ದೇವತೆಗಳ ಜೊತೆಯಲ್ಲಿರಲು ಕರೆದೊಯ್ಯಲಾಯಿತು. ಅಲ್ಲಿ ಅವರು ತಮ್ಮ ಕುಟುಂಬ ಮತ್ತು ಹತ್ತಿರದ ಪ್ರೀತಿಪಾತ್ರರು ಜತೆ ತಮ್ಮ ಕೊನೆಯ ದಿನಗಳನ್ನು ಕಳೆಯಲು ಬಯಸಿದ್ದರು. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾದಿನೆ ಸ್ಟ್ರೀಕ್ ಸಂತಾಪ ಸೂಚಿಸಿದ್ದಾರೆ.
ಮೇ ತಿಂಗಳ ಆರಂಭದಲ್ಲಿ ಸ್ಟ್ರೀಕ್ ಅವರು ಕ್ಯಾನ್ಸರ್‌ನೊಂದಿಗೆ ಹೋರಾಡುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿತ್ತು ಮತ್ತು ದಕ್ಷಿಣ ಆಫ್ರಿಕಾದ ಹೆಸರಾಂತ ಆಂಕೊಲಾಜಿಸ್ಟ್ ಒಬ್ಬರಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿತ್ತು. ಇದರ ನಡುವೆ ಕೆಲ ದಿನಗಳ ಹಿಂದೆ ಅಂದರೆ ಆಗಸ್ಟ್ 23ರಂದು ಹೀತ್ ಸ್ಟ್ರೀಕ್ ಅವರು ಸಾವಿನ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತು. ಇದಾದ ಕೆಲವೇ ಕ್ಷಣಗಳಲ್ಲಿ ಸ್ಟ್ರೀಕ್ ಇನ್ನು ಮೃತಪಟ್ಟಿಲ್ಲ ಎಂಬ ಸಂಗತಿ ಹೊರಬಿದ್ದಿತ್ತು. ಈ ಬಗ್ಗೆ ಸ್ವತಃ ಸ್ಟ್ರೀಕ್ ಹೇಳಿಕೆ ನೀಡಿದ್ದು, ನಾನಿನ್ನೂ ಮೃತಪಟ್ಟಿಲ್ಲ ಮತ್ತು ಚೆನ್ನಾಗಿದ್ದೇನೆ ಎಂದು ಹೇಳಿದ್ದರು.
ಸಾವಿನ ಸುದ್ದಿ ಸ್ಫೋಟಗೊಳ್ಳಲು ಜಿಂಬಾಬ್ವೆ ತಂಡದ ಮಾಜಿ ಆಟಗಾರ ಹೆನ್ರಿ ಒಲಂಗಾ ಮೂಲ ಕಾರಣವಾಗಿದ್ದರು. ಆ.23ರಂದು ಬೆಳಗ್ಗೆ ಟ್ವೀಟ್ ಮಾಡಿ ಸ್ಟ್ರೀಕ್ಸ್ ಮೃತಪಟ್ಟಿರುವುದಾಗಿ ಹೇಳಿದರು. ಇದರಿಂದಾಗಿ ಅನೇಕ ಕ್ರಿಕೆಟಿಗರು ಸಂತಾಪ ಸೂಚಿಸಿದರು ಮತ್ತು ಮಾಧ್ಯಮಗಳಲ್ಲೂ ಇದು ಭಾರೀ ಸುದ್ದಿಯಾಯಿತು. ಆದರೆ, ಅದಾದ ಕೆಲವೇ ಕ್ಷಣಗಳಲ್ಲಿ ಸ್ಟ್ರೀಕ್ ಅವರು ಇನ್ನೂ ಜೀವಂತವಾಗಿದ್ದಾರೆ. ಅವರಿಗೆ ಏನೂ ಆಗಿಲ್ಲ ಎಂಬ ಸುದ್ದಿ ಹೊರಬಿದ್ದಿತು.
ತಮ್ಮ ಹಳೆಯ ಟ್ವೀಟ್ ಅನ್ನು ಡಿಲೀಟ್ ಮಾಡಿದ ಹೆನ್ರಿ ಒಲಂಗಾ, ಮತ್ತೊಂದು ಟ್ವೀಟ್ ಮಾಡಿ, ಹೀತ್ ಸ್ಟ್ರೀಕ್ ಅವರ ನಿಧನದ ವದಂತಿಗಳು ಹೆಚ್ಚು ಉತ್ಪ್ರೇಕ್ಷಿತವಾಗಿವೆ ಎಂದು ನಾನು ದೃಢೀಕರಿಸಬಲ್ಲೆ. ಈಗಷ್ಟೇ ನಾನು ಅವರನ್ನು ಮಾತನಾಡಿಸಿದೆ. ಥರ್ಡ್ ಅಂಪೈರ್ ಅವರನ್ನು ಮತ್ತೆ ವಾಪಸ್ ಕರೆದಿದ್ದಾರೆ. ಅವರು ಜೀವಂತವಾಗಿದ್ದಾರೆ ಎಂದಿದ್ದರು. ಅಲ್ಲದೆ, ಸ್ಟ್ರೀಕ್ ಜತೆ ನಡೆಸಿರುವ ಸಂಭಾಷಣೆಯ ವಾಟ್ಸ್ಆ್ಯಪ್ ಸ್ಕ್ರೀನ್ಶಾಟ್ ಸಹ ಹಂಚಿಕೊಂಡಿದ್ದರು.
ಅಂದಹಾಗೆ ಸ್ಟ್ರೀಕ್ ಅವರು ಜಿಂಬಾಬ್ವೆ ಕ್ರಿಕೆಟ್ ಇತಿಹಾಸದಲ್ಲಿ ತಂಡದ ಶ್ರೇಷ್ಠ ಆಟಗಾರರಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ. ಸ್ಟ್ರೀಕ್ ಅವರು 2000 ದಿಂದ 2004ರವರೆಗೆ ಜಿಂಬಾಬ್ವೆ ತಂಡವನ್ನು ನಾಯಕರಾಗಿ ಮುನ್ನಡೆಸಿದ್ದಾರೆ. 12 ವರ್ಷಗಳ ಕ್ರಿಕೆಟ್ ವೃತ್ತಿ ಬದುಕಿನಲ್ಲಿ 65 ಟೆಸ್ಟ್ ಪಂದ್ಯಗಳು ಮತ್ತು 189 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅಲ್ಲದೆ, ಆ ಸಂದರ್ಭದಲ್ಲಿ ಜಿಂಬಾಬ್ವೆ ತಂಡದ ಘನತೆಯನ್ನು ಸ್ಟ್ರೀಕ್ ಎತ್ತಿಹಿಡಿದಿದ್ದಾರೆ. ಜಿಂಬಾಬ್ವೆಯಿಂದ 100 ಟೆಸ್ಟ್ ವಿಕೆಟ್‌ಗಳನ್ನು ಪಡೆದ ಏಕೈಕ ಕ್ರಿಕೆಟಿಗರಾಗಿ ಇಂದಿಗೂ ಉಳಿದುಕೊಂಡಿದ್ದಾರೆ.
ಸ್ಟ್ರೀಕ್ ಅವರು ತಮ್ಮ ಬೌಲಿಂಗ್ ಸ್ಕಿಲ್ ಮೂಲಕ ಪ್ರಾಥಮಿಕವಾಗಿ ಗುರುತಿಸಿಕೊಂಡರು ಸಹ ಅವರು ಬ್ಯಾಟಿಂಗ್ನಲ್ಲೂ ಹಿಂದುಳಿದಿರಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಮೈದಾನಕ್ಕೆ ಇಳಿಯುತ್ತಿದ್ದ ಸ್ಟ್ರೀಕ್, ಅದ್ಭುರ ಬ್ಯಾಟಿಂಗ್ ಮಾಡುತ್ತಿದ್ದರು. ಅವರ ವೃತ್ತಿಜೀವನದಲ್ಲಿ 1990 ಟೆಸ್ಟ್ ರನ್ ಮತ್ತು 2943 ಏಕದಿನ ರನ್ಗಳನ್ನು ಗಳಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಹರಾರೆಯಲ್ಲಿ ಅಜೇಯರಾಗಿ ಗಳಿಸಿದ 127 ರನ್ ಅವರ ಏಕೈಕ ಟೆಸ್ಟ್ ಶತಕವಾಗಿದೆ.
ಸ್ಟ್ರೀಕ್ ಅವರ ವೃತ್ತಿಜೀವನವು 1993ರಲ್ಲಿ ಪಾಕಿಸ್ತಾನದ ವಿರುದ್ಧ ಚೊಚ್ಚಲ ಪ್ರವೇಶದೊಂದಿಗೆ ಪ್ರಾರಂಭವಾಯಿತು. ರಾವಲ್ಪಿಂಡಿಯಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಎಂಟು ವಿಕೆಟ್‌ಗಳನ್ನು ಪಡೆಯುವ ಮೂಲಕ ತ್ವರಿತವಾಗಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು. 2006ರಲ್ಲಿ ಎರಡು ವರ್ಷಗಳ ಒಪ್ಪಂದದ ಅಡಿಯಲ್ಲಿ ವಾರ್ವಿಕ್‌ಷೈರ್ ತಂಡದ ನಾಯಕನಾಗಿ ಆಯ್ಕೆಯಾದರು. ಆದರೆ, ಅವರ ಅವಧಿಯಲ್ಲಿ ಫಾರ್ಮ್ ಸಮಸ್ಯೆಗಳಿಂದ ಅರ್ಧದಲ್ಲಿ ಒಪ್ಪಂದ ಕೊನೆಗೊಂಡ ಬಳಿಕ 2005ರಲ್ಲಿ ನಿವೃತ್ತಿಯನ್ನು ಆರಿಸಿಕೊಂಡರು.
ನಿವೃತ್ತಿಯ ನಂತರವೂ ಸ್ಟ್ರೀಕ್, ಜಿಂಬಾಬ್ವೆ, ಸ್ಕಾಟ್ಲೆಂಡ್, ಬಾಂಗ್ಲಾದೇಶ, ಗುಜರಾತ್ ಲಯನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್‌ನೊಂದಿಗೆ ಕೋಚಿಂಗ್ ಪಾತ್ರಗಳನ್ನು ವಹಿಸಿಕೊಳ್ಳುವ ಮೂಲಕ ಕ್ರೀಡೆಯೊಂದಿಗೆ ತಮ್ಮ ಸಂಪರ್ಕವನ್ನು ಮುಂದುವರಿಸಿದರು. ಭ್ರಷ್ಟಾಚಾರ ವಿರೋಧಿ ಉಲ್ಲಂಘನೆಗಾಗಿ ಐಸಿಸಿ ಎಂಟು ವರ್ಷಗಳ ನಿಷೇಧವನ್ನು ವಿಧಿಸಿದಾಗ ಸ್ಟ್ರೀಕ್ ಅವರ ವೃತ್ತಿಜೀವನಕ್ಕೆ ಮಸಿ ಬಳಿದಂತಾಯಿತು. (ಏಜೆನ್ಸೀಸ್)