

ವಿಶಾಖಪಟ್ಟಣ: ನಾಯಕಿ ಅಲಿಸ್ಸಾ ಹೀಲಿ (142 ರನ್, 107 ಎಸೆತ, 21 ಬೌಂಡರಿ, 3 ಸಿಕ್ಸರ್) ಶತಕದ ಅಬ್ಬರದ ಎದುರು ಮಂಕಾದ ಆತಿಥೇಯ ಭಾರತ ತಂಡ ಐಸಿಸಿ ಮಹಿಳೆಯರ ಏಕದಿನ ವಿಶ್ವಕಪ್ನ ತನ್ನ 4ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೆಲಿಯಾ ಎದುರು 3 ವಿಕೆಟ್ಗಳ ವೀರೋಚಿತ ಸೋಲು ಕಂಡಿದೆ. ಟೂರ್ನಿಯಲ್ಲಿ ಮೂರನೇ ಗೆಲುವು ಕಂಡ ಆಸೀಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡರೆ, ಸತತ 2ನೇ ಸೋಲುಂಡ ಹರ್ಮಾನ್ಪ್ರೀತ್ ಪಡೆಯ ಸೆಮೀಸ್ ಹಾದಿ ಕಠಿಣಗೊಂಡಿದೆ.
ವೈಎಸ್ಆರ್ ರೆಡ್ಡಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಕಾದಾಟದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಭಾರತಕ್ಕೆ ಸ್ಮೃತಿ ಮಂದನಾ (80 ರನ್, 66 ಎಸೆತ, 9 ಬೌಂಡರಿ, 3 ಸಿಕ್ಸರ್) ಹಾಗೂ ಪ್ರತಿಕಾ ರಾವಲ್ (75 ರನ್, 96 ಎಸೆತ, 10 ಬೌಂಡರಿ, 1 ಸಿಕ್ಸರ್) ಉತ್ತಮ ಅಡಿಪಾಯ ಹಾಕಿದರು. 294 ರನ್ಗಳಿಸಿ ಸುಸ್ಥಿತಿಯಲ್ಲಿದ್ದ ಭಾರತ ಅನ್ನಾಬೆಲ್ ಸುದರ್ಲ್ಯಾಂಡ್ (40ಕ್ಕೆ 5) ದಾಳಿಗೆ ನಲುಗಿ 48.5 ಓವರ್ಗಳಲ್ಲಿ 330 ರನ್ಗಳಿಗೆ ಆಲೌಟ್ ಆಯಿತು. ಕೊನೇ ಆರು ವಿಕೆಟ್ಗಳನ್ನು ಕೇವಲ 36 ರನ್ ಅಂತರದಲ್ಲಿ ಕೈಚೆಲ್ಲಿದ ನಡುವೆಯೂ ಭಾರತ ವಿಶ್ವಕಪ್ನಲ್ಲಿ ತನ್ನ ಗರಿಷ್ಠ ಮೊತ್ತ ಪೇರಿಸಿತು. ಪ್ರತಿಯಾಗಿ ಅಲಿಸ್ಸಾ ಹೀಲಿ ಶತಕದ ಸಾಹಸದಿಂದ ಆಸ್ಟ್ರೆಲಿಯಾ 39 ಓವರ್ಗಳಲ್ಲಿ 4 ವಿಕೆಟ್ಗೆ 265 ರನ್ಗಳಿಸಿ ಗೆಲುವಿನತ್ತ ಸಾಗಿತು. ಅಂತಿಮವಾಗಿ 49 ಓವರ್ಗಳಲ್ಲಿ 7 ವಿಕೆಟ್ಗೆ 331 ರನ್ಗಳಿಸಿ ಮಹಿಳಾ ಏಕದಿನದಲ್ಲಿ ಗರಿಷ್ಠ ರನ್ಗಳ ಯಶಸ್ವಿ ಚೇಸಿಂಗ್ ನಡೆಸಿತು. ದ. ಆಫ್ರಿಕಾ ಎದುರು ಶ್ರೀಲಂಕಾ 302 ರನ್ಗಳಿಸಿದ್ದು ಹಿಂದಿನ ದಾಖಲೆ.
ಭಾರತ: 48.5 ಓವರ್ಗಳಲ್ಲಿ 330 (ಪ್ರತಿಕಾ 75, ಸ್ಮೃತಿ ಮಂದನಾ 80, ಹರ್ಲೀನ್ 38, ಹರ್ಮಾನ್ಪ್ರೀತ್ 22, ಜೆಮೀಮಾ 33, ರಿಚಾ ಘೋಷ್ 32, ಅಮನ್ಜೋತ್ 16, ದೀಪ್ತಿ 1, ಸ್ನೇಹಾ 8, ಅನ್ನಾಬೆಲ್ 40ಕ್ಕೆ 5, ಮೂಲಿನೆಕ್ಸ್ 75ಕ್ಕೆ 3). ಆಸ್ಟ್ರೆಲಿಯಾ: 49 ಓವರ್ಗಳಲ್ಲಿ 7 ವಿಕೆಟ್ಗೆ 331 (ಅಲಿಸ್ಸಾ ಹೀಲಿ 142, ಲಿಚ್ಛೀಫಿಲ್ಡ್ 40, ಎಲ್ಲಿಸ್ ಪೆರ್ರಿ 47*, ಬೆಥ್ ಮೂನಿ 4, ಅನ್ನಾಬೆಲ್ 0, ಆಶ್ಲೇ ಗಾರ್ಡನರ್ 45, ಮೆಕ್ಗ್ರಾತ್ 12, ಮೂಲಿನೆಕ್ಸ್ 18, ಕಿಮ್ ಗಾರ್ತ್ 14*, ಶ್ರೀ ಚರಣಿ 41ಕ್ಕೆ 3, ದೀಪ್ತಿ 52ಕ್ಕೆ2).