

Team India : ಆತಿಥೇಯ ಭಾರತ ತಂಡ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟಿ20 ಪಂದ್ಯವನ್ನು ನಿರ್ವಹಿಸಿದ ರೀತಿಗೆ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಟೀಕೆ ಮಾಡಿದ್ದಾರೆ.
ಶಿವಂ ದುಬೆ ಬದಲಿಗೆ ಹರ್ಷಿತ್ ರಾಣಾ ಅವರನ್ನು ಕನ್ಕ್ಯುಶನ್ ಬದಲಿಯಾಗಿ ಕಳುಹಿಸುವುದು ಐಸಿಸಿ ನಿಯಮಗಳಿಗೆ ವಿರುದ್ಧವಾಗಿದೆ. ಈ ಮೂಲಕ ಭಾರತ ತಂಡವು ಹನ್ನೆರಡು ಆಟಗಾರರೊಂದಿಗೆ ಪುಣೆಯಲ್ಲಿ ಆಡಿದೆ ಎಂದು ಚೋಪ್ರಾ ಅವರು ಕಟುವಾದ ಟೀಕೆಗಳನ್ನು ಮಾಡಿದ್ದಾರೆ.
ಟೀಮ್ ಇಂಡಿಯಾ ಪ್ರಸ್ತುತ ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ಐದು ಪಂದ್ಯಗಳ ಟಿ20 ಸರಣಿಯನ್ನು ಆಡುತ್ತಿದೆ. ಇದರ ಭಾಗವಾಗಿ, ಕೋಲ್ಕತ್ತ ಮತ್ತು ಚೆನ್ನೈನಲ್ಲಿ ನಡೆದ ಪಂದ್ಯಗಳಲ್ಲಿ ಗೆಲುವು ದಾಖಲಿಸಿದ ಸೂರ್ಯಕುಮಾರ್ ಸೇನೆ, ರಾಜ್ಕೋಟ್ನಲ್ಲಿ ನಡೆದ ಮೂರನೇ ಟಿ20ಯಲ್ಲಿ ಸೋಲನ್ನು ಅನುಭವಿಸಿತು. ಇದಾದ ಬಳಿಕ ಶುಕ್ರವಾರ ಪುಣೆಯಲ್ಲಿ ಉಭಯ ತಂಡಗಳ ನಡುವೆ ನಾಲ್ಕನೇ ಟಿ20 ಪಂದ್ಯ ನಡೆಯಿತು.
ಇಂಗ್ಲೆಂಡ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಇಂಗ್ಲೆಂಡ್ ವೇಗಿ ಸಾಕಿಬ್ ಮಹಮೂದ್ ಉತ್ತಮವಾಗಿ ಬೌಲಿಂಗ್ ಮಾಡುವ ಮೂಲಕ ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ (1), ಒನ್ ಡೌನ್ ಬ್ಯಾಟ್ಸ್ಮನ್ ತಿಲಕ್ ವರ್ಮಾ (0) ಮತ್ತು ನಾಯಕ ಸೂರ್ಯಕುಮಾರ್ ಯಾದವ್ (0) ಅವರನ್ನು ಔಟ್ ಮಾಡಿ ಟೀಮ್ ಇಂಡಿಯಾಕ್ಕೆ ಹಾನಿ ಮಾಡಿದರು.
ಅಭಿಷೇಕ್ ಶರ್ಮ (29) ಹಾಗೂ ರಿಂಕು ಸಿಂಗ್ (30) ಸ್ವಲ್ಪ ಹೊತ್ತು ಕ್ರೀಸ್ನಲ್ಲಿ ನೆಲೆ ನಿಂತರು. ಆದರೆ, ನಿರೀಕ್ಷತ ಪ್ರದರ್ಶನ ತೋರಲಿಲ್ಲ. ಆಲ್ರೌಂಡರ್ಗಳಾದ ಶಿವಂ ದುಬೆ ಮತ್ತು ಹಾರ್ದಿಕ್ ಪಾಂಡ್ಯ ಆಗಮನದೊಂದಿಗೆ ಪಂದ್ಯದ ದಿಕ್ಕೇ ಬದಲಾಯಿತು. ದುಬೆ 34 ಎಸೆತಗಳಲ್ಲಿ 53 ರನ್ ಗಳಿಸಿದರೆ, ಪಾಂಡ್ಯ 30 ಎಸೆತಗಳಲ್ಲಿ 53 ರನ್ ಗಳಿಸಿದರು. ಇಬ್ಬರ ಅದ್ಭುತ ಇನ್ನಿಂಗ್ಸ್ನಿಂದಾಗಿ, ಟೀಮ್ ಇಂಡಿಯಾ ನಿಗದಿತ ಇಪ್ಪತ್ತು ಓವರ್ಗಳಲ್ಲಿ ಒಂಬತ್ತು ವಿಕೆಟ್ಗಳ ನಷ್ಟಕ್ಕೆ 181 ರನ್ ಗಳಿಸಿತು.
ಕೊನೆಯ ಓವರ್ನಲ್ಲಿ ಜೇಮೀ ಓವರ್ಟನ್ ಬೌಲಿಂಗ್ನಲ್ಲಿ ಚೆಂಡು ದುಬೆ ಅವರ ಹೆಲ್ಮೆಟ್ಗೆ ಬಲವಾಗಿ ಬಡಿಯಿತು. ಫಿಸಿಯೋ ಬಂದು ಅವರನ್ನು ಪರೀಕ್ಷಿಸಿ, ಏನು ಆಗಿಲ್ಲ ಎಂದು ಹೇಳಿದ ಬಳಿಕ ದುಬೆ ಬ್ಯಾಟಿಂಗ್ ಮುಂದುವರಿಸಿದರು. ಆದರೆ, ನಂತರ ದುಬೆ ಅವರು ಫೀಲ್ಡಿಂಗ್ಗೆ ಬರಲಿಲ್ಲ. ಇಂಗ್ಲೆಂಡ್ ಇನ್ನಿಂಗ್ಸ್ ಆರಂಭದ ಎರಡು ಓವರ್ಗಳ ನಂತರ, ಮ್ಯಾನೇಜ್ಮೆಂಟ್ ಹರ್ಷಿತ್ ರಾಣಾ ಅವರನ್ನು ಮೈದಾನಕ್ಕೆ ಕಳುಹಿಸಿತು.
ಟಿ20ಗೆ ಪಾದಾರ್ಪಣೆ ಮಾಡಿದ ಹರ್ಷಿತ್ ರಾಣಾ, ಇಂಗ್ಲೆಂಡ್ ವಿರುದ್ಧ ಅದ್ಭುತ ಬೌಲಿಂಗ್ (3/33) ಮಾಡುವ ಮೂಲಕ ಟೀಮ್ ಇಂಡಿಯಾದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಆದಾಗ್ಯೂ, ಆಲ್ರೌಂಡರ್ ದುಬೆ ಬದಲಿಗೆ ಸ್ಪೆಷಲಿಸ್ಟ್ ವೇಗದ ಬೌಲರ್ನನ್ನು ಕನ್ಕ್ಯುಶನ್ ಸಬ್ ಆಗಿ ಕಳುಹಿಸಿದ್ದು ಟೀಕೆಗೆ ಕಾರಣವಾಯಿತು.
ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಭಾರತದ ಮಾಜಿ ಆರಂಭಿಕ ಆಟಗಾರ ಮತ್ತು ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾ, ಐಸಿಸಿ ನಿಯಮಗಳ ಪ್ರಕಾರ, ಬೌಲರ್ಗೆ ಬದಲಿಯಾಗಿ ಬೌಲರ್, ಬ್ಯಾಟರ್ಗೆ ಬದಲಿಯಾಗಿ ಬ್ಯಾಟರ್ ಮತ್ತು ಆಲ್-ರೌಂಡರ್ಗೆ ಬದಲಿಯಾಗಿ ಆಲ್-ರೌಂಡರ್ ಆಟಗಾರನನ್ನು ಕನ್ಕ್ಯುಶನ್ ಸಬ್ ಆಗಿ ಕಳುಹಿಸಬೇಕು. ಇದನ್ನು ಐಸಿಸಿ ನಿಯಮ ಪುಸ್ತಕದಲ್ಲಿ ಸ್ಪಷ್ಟವಾಗಿ ಬರೆಯಲಾಗಿದೆ. ಉದಾಹರಣೆಗೆ ಇಂಗ್ಲೆಂಡ್ ಆಟಗಾರ ಬೆಕ್ ಡಕೆಟ್ ತಲೆಗೆ ಗಾಯವಾಗಿದ್ದರೆ ಆತ ಫೀಲ್ಡಿಂಗ್ ಮಾಡುವಾಗ ಅವರ ಸ್ಥಾನದಲ್ಲಿ ಮತ್ತೊಬ್ಬ ಬ್ಯಾಟರ್ ಅನ್ನು ಕಳುಹಿಸಬೇಕು. ಆದರೆ ಬೌಲರ್ ಅನ್ನು ಕಳುಹಿಸಬಾರದು. ಏಕೆಂದರೆ, ಅವರು ಬೌಲಿಂಗ್ ಮಾಡಲು ಸಾಧ್ಯವಿಲ್ಲ ಎಂದರು.
ಬೌಲರ್ ಗಾಯಗೊಂಡರೆ, ಅವರ ಸ್ಥಾನದಲ್ಲಿ ಮತ್ತೊಬ್ಬ ಬೌಲರ್ ಅನ್ನು ಕಳುಹಿಸಬೇಕು. ಆದರೆ, ಈ ಪಂದ್ಯದಲ್ಲಿ 20ನೇ ಓವರ್ನಲ್ಲಿ ಶಿವಂ ದುಬೆ ತಲೆಗೆ ಗಾಯವಾದಾಗ ಹರ್ಷಿತ್ ರಾಣಾ ಅವರನ್ನು ಕನ್ಕ್ಯುಶನ್ ಬದಲಿಯಾಗಿ ಕರೆತರಲಾಯಿತು. ಆದರೆ, ಹರ್ಷಿತ್ ರಾಣಾ ಅವರ ಕೌಶಲ್ಯಗಳು ಹಾಗೂ ಶಿವಂ ದುಬೆ ಅವರ ಕೌಶಲ್ಯಗಳಿಗೆ ಹೊಂದಿಕೆಯಾಗುವುದಿಲ್ಲ. ದುಬೆ ಹೆಚ್ಚಾಗಿ ಬ್ಯಾಟಿಂಗ್ ಮಾಡುತ್ತಾರೆ. ಸಾಂದರ್ಭಿಕವಾಗಿ ಅವರು ಗಂಟೆಗೆ 115 ರಿಮದ 120 ಕಿಲೋಮೀಟರ್ ವೇಗದಲ್ಲಿ ಮಾತ್ರ ಬೌಲಿಂಗ್ ಮಾಡುತ್ತಾರೆ. ಆದರೆ, ಹರ್ಷಿತ್ ರಾಣಾ ಸಂಪೂರ್ಣ ವೇಗದ ಬೌಲರ್. ಅವರು ಗಂಟೆಗೆ 140 ರಿಂದ 145 ಕಿಲೋಮೀಟರ್ ವೇಗದಲ್ಲಿ ಬೌಲಿಂಗ್ ಮಾಡುತ್ತಾರೆ. ಯಾರು ಏನೇ ಹೇಳಿದರೂ ಇದೇ ಸತ್ಯ ಎಂದರು.
ಇಂದು ಶಿವಂ ದುಬೆ 53 ರನ್ ಗಳಿಸಿದರು. ಹರ್ಷಿತ್ ರಾಣಾ ತಮ್ಮ ನಾಲ್ಕು ಓವರ್ಗಳ ಕೋಟಾವನ್ನು ಪೂರ್ಣಗೊಳಿಸಿದರು ಮತ್ತು ಪ್ರಮುಖ ವಿಕೆಟ್ಗಳನ್ನು ಪಡೆದರು. ಭಾರತ ಗೆದ್ದಿತು. ವಾಸ್ತವವಾಗಿ, ಇಂದು ನಾವು 12 ಆಟಗಾರರೊಂದಿಗೆ ಆಟವಾಡಿ ಗೆದ್ದಿದ್ದೇವೆ ಎಂದು ಆಕಾಶ್ ಚೋಪ್ರಾ ಟೀಕಿಸಿದರು. (ಏಜೆನ್ಸೀಸ್)