

Toughest Bowler: ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಐದನೇ ಹಾಗೂ ಅಂತಿಮ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 6 ವಿಕೆಟ್ಗಳ ಹೀನಾಯ ಸೋಲು ಕಂಡಿದ್ದು ಸದ್ಯ ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ಬೇಸರ ತಂದಿದೆ. ಈ ಸೋಲಿನೊಂದಿಗೆ ಕ್ಯಾಪ್ಟನ್ ರೋಹಿತ್ ಶರ್ಮ ಪಡೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್‌ನಿಂದ ಹೊರಗುಳಿದಿದೆ. ಭಾರತ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ ಆಸ್ಟ್ರೇಲಿಯಾ ತಂಡ, ಇದೀಗ ಡಬ್ಲ್ಯೂಟಿಸಿ ಫೈನಲ್ನಲ್ಲಿ ಸೆಣಸಾಡಲು ಸಜ್ಜಾಗಿದೆ. ಗೆಲುವಿನ ಸಂದರ್ಭದಲ್ಲಿ ಮಾತನಾಡಿದ ಆಸೀಸ್ ಓಪನರ್ ಉಸ್ಮಾನ್ ಖವಾಜಾ, ತಾವು ಎದುರಿಸಿದ ಕಠಿಣ ಬೌಲರ್ ಯಾರೆಂದು ಇಲ್ಲಿ ತಿಳಿಸಿದ್ದಾರೆ.
"ಇಲ್ಲಿಯವರೆಗೂ ಆಡಿರುವ ಕ್ರಿಕೆಟ್ನಲ್ಲಿ ನನಗೆ ಅತ್ಯಂತ ಕಠಿಣ ವೇಗಿ ಅನಿಸಿದ್ದು ಟೀಮ್ ಇಂಡಿಯಾದ ಜಸ್ಪ್ರೀತ್ ಬುಮ್ರಾ. ನನ್ನ ವೃತ್ತಿಜೀವನದಲ್ಲಿ ಎದುರಿಸಿದ ಅತ್ಯಂತ ಕಠಿಣ ಬೌಲರ್ ಅವರೇ" ಎಂದು ತಿಳಿಸಿದರು. ಐದು ಟೆಸ್ಟ್‌ಗಳ ಸರಣಿಯಲ್ಲಿ ಬುಮ್ರಾ ಆರು ಬಾರಿ ಖವಾಜಾರ ವಿಕೆಟ್ ಪಡೆದು, ಅವರನ್ನು ಹೆಚ್ಚು ರನ್ ಗಳಿಸಲು ಬಿಡದೆ ಕಾಡಿದ್ದಾರೆ. 13.06 ಸರಾಸರಿಯಲ್ಲಿ 32 ವಿಕೆಟ್‌ಗಳನ್ನು ಪಡೆದ ಜಸ್ಪ್ರೀತ್ ಬುಮ್ರಾಗೆ ಸರಣಿ ಶ್ರೇಷ್ಠ ಪ್ರಶಸ್ತಿ ಲಭಿಸಿತು.
"ಗಾಯದಿಂದ ಬಳಲುತ್ತಿದ್ದ ಬುಮ್ರಾ ಅವರು ತಂಡದಿಂದ ಹೊರಗುಳಿದಿದ್ದು ನಿಜಕ್ಕೂ ನಮಗೆ ಲಾಭವಾಯಿತು. ಇದು ಟೀಮ್ ಇಂಡಿಯಾಗೆ ಮೈನಸ್ ಆದ್ರೆ, ಆಸೀಸ್ಗೆ ಪ್ಲಸ್ ಆಯಿತು. ಅವರ ಅನುಪಸ್ಥಿತಿ ಆಸ್ಟ್ರೇಲಿಯಾ ಗೆಲುವನ್ನು ಮತ್ತಷ್ಟು ಸುಲಭಗೊಳಿಸಿತು. ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಖಂಡಿತ ಅವರನ್ನು ಎದುರಿಸುವುದು ಕಠಿಣವಾಗ್ತಿತ್ತು. ಆದರೆ, ಮೈದಾನಕ್ಕೆ ಬುಮ್ರಾ ಬಾರದೇ ಇದ್ದದ್ದು ನಮ್ಮ ಆಡುವ ಅವಕಾಶವನ್ನು ಹೆಚ್ಚಿಸಿತು. ನನ್ನ ವೃತ್ತಿಜೀವನದಲ್ಲಿ ನಾನು ಎದುರಿಸಿದ ಅತ್ಯಂತ ಕಠಿಣ ಬೌಲರ್ ಅವರೇ" ಎಂದು ಖವಾಜಾ ಹೇಳಿದ್ದಾರೆ,(ಏಜೆನ್ಸೀಸ್).