ನಾನು ಈವರೆಗೂ ಎದುರಿಸಿದ ಭಯಾನಕ ವೇಗದ ಬೌಲರ್​ ಈತನೇ... ಆಡೋದು ತುಂಬಾ ಕಷ್ಟ ಅಂದ್ರು ಕೊಹ್ಲಿ! Virat Kohli

Virat Kohli
Published on

Virat Kohli : ಟೀಮ್ ಇಂಡಿಯಾ ಸೂಪರ್‌ಸ್ಟಾರ್ ವಿರಾಟ್ ಕೊಹ್ಲಿ, ಭಾರತದ ವೇಗಿ ಜಸ್​ಪ್ರೀತ್​ ಬುಮ್ರಾ ಅವರನ್ನು ಮನಸಾರೆ ಶ್ಲಾಘಿಸಿದ್ದಾರೆ. ಕ್ರಿಕೆಟ್​ನ ಮೂರು ಸ್ವರೂಪಗಳಲ್ಲಿ ಪ್ರಸ್ತುತ ವಿಶ್ವದ ಅತ್ಯುತ್ತಮ ಬೌಲರ್ ಎಂದು ಹೊಗಳಿದ್ದಾರೆ. ತಾನು ಈವರೆಗೆ ಎದುರಿಸಿದ ಅತ್ಯಂತ ಕಠಿಣ ಬೌಲರ್ ಬುಮ್ರಾ ಎಂದು ಕೊಹ್ಲಿ ಬಹಿರಂಗಪಡಿಸಿದ್ದಾರೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿ-2025ರಲ್ಲಿ ತಮ್ಮ ಶಕ್ತಿ ಪ್ರದರ್ಶನ ನೀಡಿದ್ದ ಕೊಹ್ಲಿ, ಪ್ರಸ್ತುತ ಐಪಿಎಲ್-2025 ಗಾಗಿ ಸಿದ್ಧತೆಗಳಲ್ಲಿ ತೊಡಗಿಕೊಂಡಿದ್ದಾರೆ. ಇದರ ಭಾಗವಾಗಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಸಾಮಾಜಿಕ ಜಾಲತಾಣದಲ್ಲಿ ಸಂವಹನ ನಡೆಸಿದ ಕೊಹ್ಲಿ, ಹಲವು ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ನಿಮ್ಮ ವೃತ್ತಿಜೀವನದಲ್ಲಿ ನೀವು ಎದುರಿಸಿದ ಅತ್ಯಂತ ಕಠಿಣ ಬೌಲರ್ ಯಾರು ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ಏಕದಿನ, ಟೆಸ್ಟ್ ಮತ್ತು ಟಿ20 ಸ್ವರೂಪಗಳಲ್ಲಿ ಪ್ರಸ್ತುತ ವಿಶ್ವದ ಅತ್ಯುತ್ತಮ ಬೌಲರ್ ಜಸ್​ಪ್ರೀತ್​ ಬುಮ್ರಾ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹೇಳಿದರು. ಐಪಿಎಲ್‌ನಲ್ಲಿ ಬುಮ್ರಾ ಅವರು ನನ್ನನ್ನು ಕೆಲವು ಸಂದರ್ಭಗಳಲ್ಲಿ ಔಟ್ ಮಾಡಿದ್ದಾರೆ. ಆದಾಗ್ಯೂ, ನಾನು ಅವರ ಮೇಲೆ ಹೆಚ್ಚು ಮೇಲುಗೈ ಸಾಧಿಸಿದ್ದೇನೆ. ಆದಾಗ್ಯೂ, ನಮ್ಮ ನಡುವಿನ ಸ್ಪರ್ಧೆ ತುಂಬಾ ಆಸಕ್ತಿದಾಯಕ ಮತ್ತು ಮೋಜಿನ ಸಂಗತಿಯಾಗಿದೆ. ನಾನು ಪ್ರತಿ ಚೆಂಡನ್ನು ಹೊಡೆಯಲು ಪ್ರಯತ್ನಿಸುತ್ತೇನೆ. ಆತ ನನ್ನನ್ನು ತಡೆದು ನಿಲ್ಲಿಸಲು ಪ್ರಯತ್ನಿಸುತ್ತಾನೆ. ಇಬ್ಬರ ನಡುವಿನ ಸ್ಪರ್ಧೆ ಉತ್ತುಂಗಕ್ಕೇರಿದಾಗ, ಯಾರೂ ನಿಧಾನಿಸದೇ ಹಾಗೇ ಮುಂದೆ ಸಾಗದಿದ್ದರೆ ಖುಷಿಯಾಗುತ್ತದೆ. ನಾನೀಗ ನೆಟ್ಸ್‌ನಲ್ಲಿ ಅಭ್ಯಾಸ ಮಾಡುವಾಗ, ನಾನು ನಿಯಮಿತವಾಗಿ ಬುಮ್ರಾ ಅವರ ಬೌಲಿಂಗ್ ಅನ್ನು ಎದುರಿಸುತ್ತೇನೆ. ಅದು ನನಗೆ ಇಷ್ಟವಾದ ಮತ್ತು ಆನಂದಿಸುವ ಕ್ಷಣ. ಅಷ್ಟೇ ಅಲ್ಲ, ಅದು ಕಠಿಣ ಸವಾಲು ಕೂಡ ಎಂದು ವಿರಾಟ್ ಕೊಹ್ಲಿ ಹೇಳಿದರು.

Jasprit Bumrah

ಅಂದಹಾಗೆ ಐಪಿಎಲ್​ ವಿಚಾರಕ್ಕೆ ಬಂದರೆ, ಕೊಹ್ಲಿ ಮತ್ತು ಬುಮ್ರಾ ನಡುವೆ ಒಂದು ಸಾಮ್ಯತೆ ಇದೆ. ಅದೇನೆಂದರೆ, ಈ ಕ್ಯಾಶ್​ ರಿಚ್​ ಲೀಗ್​ (2008) ಆರಂಭದಿಂದಲೂ ಕೊಹ್ಲಿ ಆರ್‌ಸಿಬಿಯಲ್ಲಿದ್ದರೆ, ಬುಮ್ರಾ ತಮ್ಮ ವೃತ್ತಿಜೀವನದ ಆರಂಭದಿಂದಲೂ ಮುಂಬೈ ಇಂಡಿಯನ್ಸ್‌ನಲ್ಲಿದ್ದಾರೆ.

ಕೊಹ್ಲಿ ಬೌಂಡರಿ, ಬುಮ್ರಾ ಔಟ್​

2013, ಏಪ್ರಿಲ್ 4 ರಂದು ಆರ್‌ಸಿಬಿ ವಿರುದ್ಧ ಮುಂಬೈ ಪರ ಬುಮ್ರಾ ಐಪಿಎಲ್‌ಗೆ ಪಾದರ್ಪಣೆ ಮಾಡಿದರು. ಆ ದಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ, ಬುಮ್ರಾ ನಾಲ್ಕು ಓವರ್‌ಗಳನ್ನು ಎಸೆದು 32 ರನ್‌ಗಳನ್ನು ಬಿಟ್ಟುಕೊಟ್ಟ ನಂತರ ಮೂರು ವಿಕೆಟ್‌ಗಳನ್ನು ಪಡೆದರು. ಕೊಹ್ಲಿ ತಮ್ಮ ಆರಂಭಿಕ ಓವರ್‌ನ ಮೊದಲ, ಎರಡನೇ ಮತ್ತು ನಾಲ್ಕನೇ ಎಸೆತಗಳಲ್ಲಿ ಬೌಂಡರಿ ಬಾರಿಸಿದರು ಆದರೆ, ಬುಮ್ರಾ ಐದನೇ ಎಸೆತದಲ್ಲಿ ಗೆಲುವು ಸಾಧಿಸಿದರು. ಆ ಸಮಯದಲ್ಲಿ 19 ವರ್ಷ ವಯಸ್ಸಿನವರಾಗಿದ್ದ ಬುಮ್ರಾ, ತಮ್ಮ ಅದ್ಭುತ ಕೌಶಲ್ಯದಿಂದ ಕೊಹ್ಲಿಯನ್ನು ಔಟ್​ ಮಾಡಿ, ತಮ್ಮ ಮೊದಲ ವಿಕೆಟ್ ಪಡೆದರು.

ಬುಮ್ರಾ ಇದುವರೆಗೆ 133 ಪಂದ್ಯಗಳಲ್ಲಿ 165 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಮುಂಬೈ ತಂಡದ ಐದು ಪ್ರಶಸ್ತಿ ಗೆಲುವಿನಲ್ಲಿ ಅವರು ಭಾಗವಾಗಿದ್ದಾರೆ. ಮತ್ತೊಂದೆಡೆ ಕೊಹ್ಲಿ ತಂಡ ಆರ್‌ಸಿಬಿ ಇಲ್ಲಿಯವರೆಗೆ ಒಮ್ಮೆಯೂ ಟ್ರೋಫಿಗೆ ಮುತ್ತಿಕ್ಕಲು ಸಾಧ್ಯವಾಗಿಲ್ಲ. ಈ ಬಾರಿ ಆ ಕನಸು ನನಸಾಗುತ್ತೆ ಅನ್ನೋ ಆಸೆ ಇದೆ. ಇನ್ನು ಕೊಹ್ಲಿ-ಬುಮ್ರಾ ಟೀಮ್ ಇಂಡಿಯಾ ಪರ ಒಟ್ಟಿಗೆ ಆಡುವುದು ಎಲ್ಲರಿಗೂ ತಿಳಿದಿರುವ ವಿಷಯ. ಬುಮ್ರಾ ಅವರು ಕೊಹ್ಲಿ ನಾಯಕತ್ವದಲ್ಲಿ ಆಡಿದ್ದರೆ, ಕೊಹ್ಲಿ ಅವರು ಬುಮ್ರಾ ನಾಯಕತ್ವದಲ್ಲಿ ಹಲವು ಬಾರಿ ಆಡಿದ್ದಾರೆ. ಇಬ್ಬರ ನಡುವೆ ಒಳ್ಳೆಯ ಸ್ನೇಹ ಕೂಡ ಇದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net