

ನವದೆಹಲಿ: ಪಾಕಿಸ್ತಾನದ ಜಾವೆಲಿನ್ ಎಸೆತಗಾರ ಅರ್ಷದ್ ನದೀಮ್ ಪ್ರತಿಷ್ಠಿತ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿರುವುದು ಎಲ್ಲರಿಗೂ ಗೊತ್ತೇ ಇದೆ. 100 ವರ್ಷಗಳ ಒಲಿಂಪಿಕ್ಸ್ ಇತಿಹಾಸದಲ್ಲಿ ಹೊಸ ದಾಖಲೆಯನ್ನು ಬರೆದಿದ್ದಾರೆ. 92.97 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ಹೊಸ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಈ ಸಾಧನೆಯಿಂದ ಇಡೀ ಪಾಕಿಸ್ತಾನವೇ ಅರ್ಷದ್ ನದೀಮ್ರನ್ನು ಕೊಂಡಾಡುತ್ತಿದೆ. ಆದರೆ, ಈ ಸಾಧನೆ ಹಿಂದಿರುವ ನೋವು ಅನೇಕರಿಗೆ ತಿಳಿದಿಲ್ಲ.
ಒಲಿಂಪಿಕ್ ಇತಿಹಾಸದಲ್ಲೇ ದಾಖಲೆ ನಿರ್ಮಿಸಿದ ಅರ್ಷದ್ ನದೀಮ್, ಹಲವು ಸಂಕಷ್ಟಗಳನ್ನು ಎದುರಿಸಿದ್ದಾರೆ. ಸಾಕಷ್ಟು ಕಷ್ಟಗಳನ್ನು ಮೆಟ್ಟಿ ನಿಂತು ಈ ಮಟ್ಟಕ್ಕೆ ತಲುಪಿದ್ದಾರೆ. ನದೀಮ್ ಅವರು ಚಿನ್ನದ ಪದಕ ಗೆದ್ದು ಚಾಂಪಿಯನ್ ಆಗಲಿಲ್ಲ, ಜೀವನದಲ್ಲಿ ಗೆದ್ದ ನಂತರವೇ ಚಿನ್ನದ ಪದಕವನ್ನು ಗೆದ್ದಿದ್ದಾರೆ. ನಮ್ಮ ಸಾಂಪ್ರದಾಯಿಕ ಎದುರಾಳಿ ರಾಷ್ಟ್ರವಾಗಿರುವ ಪಾಕಿಸ್ತಾನದಲ್ಲಿ ಹುಟ್ಟಿದ್ದರೂ ತನ್ನ ಪ್ರತಿಭೆಯಿಂದ ಅದೆಷ್ಟೋ ಜನರಿಗೆ ಸ್ಪೂರ್ತಿಯಾಗಿರುವ ಅರ್ಷದ್ ನದೀಮ್ ಅವರ ಜೀವನಗಾಥೆಯ ಬಗ್ಗೆ ನಾವೀಗ ತಿಳಿಯೋಣ.
ಅರ್ಷದ್ ನದೀಮ್ ಅವರು 1997, ಜನವರಿ 2ರಂದು ಪಾಕಿಸ್ತಾನದ ಪಂಜಾಬ್ ಪ್ರದೇಶದ ಖಾನೇವಾಲ್ ಎಂಬ ಹಳ್ಳಿಯಲ್ಲಿ ಜನಿಸಿದರು. ನದೀಮ್ ತನ್ನ ಹೆತ್ತವರ ಏಳು ಮಕ್ಕಳಲ್ಲಿ ಮೂರನೆಯವನು. ತಂದೆ ಮೊಹಮ್ಮದ್ ಅಶ್ರಫ್ ಕೂಲಿ ಕಾರ್ಮಿಕ. ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದಾರೆ. ಅಶ್ರಫ್ ತನ್ನ ಕುಟುಂಬವನ್ನು ಪೋಷಿಸಲು ಕಷ್ಟಪಟ್ಟು ಕೆಲಸ ಮಾಡುತ್ತಿದ್ದರು. ಹೀಗಿದ್ದರೂ ದೊಡ್ಡ ಸಂಸಾರ ನಡೆಸುವುದು ಕಷ್ಟವಾಗಿತ್ತು. ಕೆಲವೊಮ್ಮೆ ತಿನ್ನುವುದಕ್ಕೂ ತೊಂದರೆಯಾಗುತ್ತಿತ್ತು. ಅವರು ಕೆಲವೊಮ್ಮೆ ದಿನಕ್ಕೆ ಒಂದು ಬಾರಿ ಮಾತ್ರ ತಿನ್ನುತ್ತಿದ್ದರು.
ಕಡು ಬಡತನದಲ್ಲೂ ಅರ್ಷದ್ ನದೀಮ್ಗೆ ಜಾವೆಲಿನ್ ಎಸೆತದ ಮೇಲೆ ಆಸಕ್ತಿ ಹುಟ್ಟಿಕೊಂಡಿತು. ನಿಧಾನವಾಗಿ ಅದರಲ್ಲಿ ತರಬೇತಿಯನ್ನೂ ಪಡೆದರು. ಆದರೆ, ಬಡತನದ ಕಾರಣ ಅರ್ಷದ್ ನದೀಮ್ ಸ್ಪರ್ಧೆಗಳಲ್ಲಿ ಭಾಗವಹಿಸಲು ಹಣ ಹೊಂದಿರಲಿಲ್ಲ. ಈತನ ಪ್ರತಿಭೆಯನ್ನು ಗುರುತಿಸಿದ ಗ್ರಾಮಸ್ಥರೇ ನದೀಮನನ್ನು ಬೇರೆಡೆ ಸ್ಪರ್ಧೆಗಳಿಗೆ ಕಳುಹಿಸಿದ್ದರು. ಅವರ ನಂಬಿಕೆಯನ್ನು ಉಳಿಸಿಕೊಂಡು, ಅರ್ಷದ್ ನದೀಮ್ ಹಂತ ಹಂತವಾಗಿ ಬೆಳೆದರು.
ಪ್ಯಾರಿಸ್ ಒಲಿಂಪಿಕ್ಸ್‌ಗೆ ಪಾಕಿಸ್ತಾನದಿಂದ ಏಳು ಕ್ರೀಡಾಪಟುಗಳು ಮಾತ್ರ ಬಂದಿದ್ದರು. ಅವರಲ್ಲಿ ಅರ್ಷದ್ ನದೀಮ್ ಕೂಡ ಒಬ್ಬರು. ಆದಾಗ್ಯೂ, ಸುಮಾರು 32 ವರ್ಷಗಳ ನಂತರ ಅವರು ಪಾಕಿಸ್ತಾನಕ್ಕೆ ಚಿನ್ನದ ಪದಕವನ್ನು ತಂದುಕೊಟ್ಟಿದ್ದಾರೆ. ಇದು ವೈಯಕ್ತಿಕ ವಿಭಾಗದಲ್ಲಿ ಪಾಕಿಸ್ತಾನದ ಮೊದಲ ಚಿನ್ನದ ಪದಕವಾಗಿದೆ. ಅದಕ್ಕೂ ಮುನ್ನ 2023ರಲ್ಲಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. 2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು.
ಸದಾ ಆರ್ಥಿಕ ಬಿಕ್ಕಟ್ಟು, ಭಯೋತ್ಪಾದಕರ ದಾಳಿ ಹಾಗೂ ಬಡತನದ ಸುಳಿಯಲ್ಲಿ ಸಿಲುಕಿರುವ ಪಾಕಿಸ್ತಾನಕ್ಕೆ ಇಂದು ಚಿನ್ನದ ಪದಕ ನೀಡುವ ಮೂಲಕ ಅರ್ಷದ್ ನದೀಮ್ ಹೀರೋ ಆಗಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಜಾವೆಲಿನ್ ಎಸೆತದಲ್ಲಿ ಪಾಕಿಸ್ತಾನ ಅರ್ಷದ್ ನದೀಮ್ ಚಿನ್ನದ ಪದಕ ಗೆದ್ದರೆ, ಫೈನಲ್‌ನಲ್ಲಿ ಭಾರತದ ನೀರಜ್ 89.45 ಮೀಟರ್ ಎಸೆಯುವ ಮೂಲಕ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ನೀರಜ್ ಅವರು ಕಳೆದ ಟೊಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು. (ಏಜೆನ್ಸೀಸ್)