

ಡರ್ಬನ್: ವೇಗಿ ಜೋಶ್ ಹ್ಯಾಸಲ್ವುಡ್ (49ಕ್ಕೆ 6) ಪ್ರದರ್ಶಿಸಿದ ಜೀವನಶ್ರೇಷ್ಠ ಬೌಲಿಂಗ್ ನಿರ್ವಹಣೆಯ ಬಲದಿಂದ ಆಸ್ಟ್ರೆಲಿಯಾ ತಂಡ ಆತಿಥೇಯ ಹಾಗೂ ವಿಶ್ವ ಚಾಂಪಿಯನ್ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 214 ರನ್ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಪ್ಯಾಟ್ ಕಮ್ಮಿನ್ಸ್ ಪಡೆ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಕಿಂಗ್ಸ್ಮೀಡ್ನಲ್ಲಿ ಮಂಗಳವಾರ ಮುಕ್ತಾಯಗೊಂಡ ಪಂದ್ಯದಲ್ಲಿ, 421 ರನ್ ಸವಾಲಿಗೆ ಪ್ರತಿಯಾಗಿ 4 ವಿಕೆಟ್ಗೆ 102 ರನ್ಗಳಿಂದ 5ನೇ ಹಾಗೂ ಅಂತಿಮ ದಿನದಾಟ ಆರಂಭಿಸಿದ ದ. ಆಫ್ರಿಕಾ, ಭೋಜನ ವಿರಾಮದ ಬಳಿಕ 86.5 ಓವರ್ಗಳಲ್ಲಿ 206 ರನ್ಗಳಿಗೆ ಆಲೌಟ್ ಆಯಿತು. ಏಡನ್ ಮಾರ್ಕ್ರಮ್ (75) ಹೋರಾಟ ಹರಿಣಗಳ ಸೋಲಿನ ಅಂತರವನ್ನಷ್ಟೇ ತಗ್ಗಿಸಿತು. ಆಸೀಸ್ 2ನೇ ಹೊಸ ಚೆಂಡು ತೆಗೆದುಕೊಂಡ ಬಳಿಕ ಟೆಂಬಾ ಬವುಮಾ ಪಡೆ 5 ರನ್ ಅಂತರದಲ್ಲಿ ಕೊನೇ 4 ವಿಕೆಟ್ ಕಳೆದುಕೊಂಡು ಶರಣಾಯಿತು. ಸರಣಿಯ 2ನೇ ಪಂದ್ಯ ಅಕ್ಟೋಬರ್ 18ರಿಂದ ಗೆರ್ಬಹದಲ್ಲಿ ನಡೆಯಲಿದೆ. ಹ್ಯಾಸಲ್ವುಡ್ ಟೆಸ್ಟ್ನಲ್ಲಿ 15ನೇ ಬಾರಿ 5 ವಿಕೆಟ್ ಗೊಂಚಲು ಪಡೆದರು.
ಆಸ್ಟ್ರೆಲಿಯಾ: 390 ಮತ್ತು 6 ವಿಕೆಟ್ಗೆ 314 ಡಿಕ್ಲೇರ್, ದಕ್ಷಿಣ ಆಫ್ರಿಕಾ: 284 ಮತ್ತು 86.5 ಓವರ್ಗಳಲ್ಲಿ 206 (ಮಾರ್ಕ್ರಮ್ 76, ಮುಲ್ಡರ್ 29, ಯಾನ್ಸೆನ್ 35, ಹ್ಯಾಸಲ್ವುಡ್ 49ಕ್ಕೆ 6, ರೆನ್ಶಾ 30ಕ್ಕೆ 2, ಸ್ಟಾರ್ಕ್ 33ಕ್ಕೆ 1, ಕಮ್ಮಿನ್ಸ್ 34ಕ್ಕೆ 1), ಪಂದ್ಯಶ್ರೇಷ್ಠ: ಮ್ಯಾಟ್ ರೆನ್ಶಾ.