

ದುಬೈ: ಟಿ20 ವಿಶ್ವಕಪ್ ಫೈನಲ್‌ನಲ್ಲಿ 3 ವಿಕೆಟ್ ಕಬಳಿಸಿ ಮಿಂಚಿದ ಆಸೀಸ್ ವೇಗಿ ಜೋಶ್ ಹ್ಯಾಸಲ್‌ವುಡ್, ಅರಬ್ ನಾಡಿನಲ್ಲಿ ತಿಂಗಳ ಅಂತರದಲ್ಲಿ 2 ಪ್ರಮುಖ ಪ್ರಶಸ್ತಿ ಗೆದ್ದ ಸಾಧನೆ ಮಾಡಿದರು. ಹ್ಯಾಸಲ್‌ವುಡ್ ಕಳೆದ ಅಕ್ಟೋಬರ್ 15ರಂದು ದುಬೈನಲ್ಲೇ ನಡೆದ ಐಪಿಎಲ್ ಫೈನಲ್‌ನಲ್ಲಿ ಪ್ರಶಸ್ತಿ ಗೆದ್ದ ಚೆನ್ನೈ ಸೂಪರ್‌ಕಿಂಗ್ಸ್ ತಂಡದ ಭಾಗವೂ ಆಗಿದ್ದರು. ಕೆಕೆಆರ್ ಎದುರು ಅವರು 2 ಮಹತ್ವದ ವಿಕೆಟ್ ಕೂಡ ಕಬಳಿಸಿದ್ದರು.
ಅರಬ್ ನಾಡಿನಲ್ಲಿ ಹಳದಿ ಜೆರ್ಸಿಗೆ ಲಕ್!
ಅರಬ್ ನಾಡಿನಲ್ಲಿ ಕಳೆದ ಎರಡೂವರೆ ತಿಂಗಳ ಕಾಲ ನಡೆದ ಟಿ20 ಹಬ್ಬದಲ್ಲಿ ಹಳದಿ ಜೆರ್ಸಿ ಧರಿಸಿದ ತಂಡಗಳಿಗೆ ಟ್ರೋಫಿ ಒಲಿದಿರುವುದು ವಿಶೇಷವಾಗಿದೆ. ಐಪಿಎಲ್ 14ನೇ ಆವೃತ್ತಿಯ 2ನೇ ಭಾಗದಲ್ಲಿ ಚೆನ್ನೈ ಸೂಪರ್‌ಕಿಂಗ್ಸ್ ಮತ್ತು ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ‘ಯೆಲ್ಲೊ’ ಜೆರ್ಸಿ ಜತೆಗೆ ಮಿರುಗುವ ಟ್ರೋಫಿ ಎತ್ತಿಹಿಡಿದವು.
ಚೊಚ್ಚಲ ಪುರುಷರ ಟಿ20 ವಿಶ್ವಕಪ್ ಗೆಲುವಿನೊಂದಿಗೆ ಆಸ್ಟ್ರೇಲಿಯಾದ ಐಸಿಸಿ ಟ್ರೋಫಿ ಗೆಲುವಿನ ಸಂಖ್ಯೆ 19ಕ್ಕೇರಿದೆ. ಈ ಮುನ್ನ 5 ಪುರುಷರ ಏಕದಿನ ವಿಶ್ವಕಪ್, 6 ಮಹಿಳಾ ಏಕದಿನ ವಿಶ್ವಕಪ್, 5 ಮಹಿಳಾ ಟಿ20 ವಿಶ್ವಕಪ್, 2 ಪುರುಷರ ಚಾಂಪಿಯನ್ಸ್ ಟ್ರೋಫಿ ಜಯಿಸಿತ್ತು.