

ಪುಣೆ: ಅಂತಿಮ ಕ್ಷಣದ ಒತ್ತಡವನ್ನು ಸಮರ್ಥವಾಗಿ ನಿಭಾಯಿಸಿದ ಹರಿಯಾಣ ಸ್ಟೀಲರ್ಸ್ ತಂಡ ಪ್ರೊ ಕಬಡ್ಡಿ ಲೀಗ್ 11ನೇ ಆವೃತ್ತಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಯು.ಪಿ. ಯೋಧಾಸ್ ತಂಡದ ಸವಾಲನ್ನು ಹತ್ತಿಕ್ಕಿ ಫೈನಲ್ ಪ್ರವೇಶಿಸಿದೆ.
ಬಾಳೇವಾಡಿ ಕ್ರೀಡಾ ಸಂಕೀರ್ಣದಲ್ಲಿ ಶುಕ್ರವಾರ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ 28-25 ಅಕಗಳಿಂದ ಯೋಧಾಸ್ ತಂಡದ ಸವಾಲನ್ನು ಹತ್ತಿಕ್ಕಿತು. ಇದರೊಂದಿಗೆ ಸತತ ಎರಡನೇ ಬಾರಿ ಫೈನಲ್ ಪ್ರವೇಶಿಸುವಲ್ಲಿ ಹರಿಯಾಣ ಯಶ ಕಂಡಿತು.
ಈ ಜಯದೊಂದಿಗೆ ಹರಿಯಾಣ ಸ್ಟೀಲರ್ಸ್ ಡಿಸೆಂಬರ್ 29ರಂದು ನಡೆಯಲಿರುವ ಫೈನಲ್ ನಲ್ಲಿ 2ನೇ ಸೆಮಿಫೈನಲ್ ನಲ್ಲಿ ಎದುರಾಗಲಿರುವ ದಬಾಂಗ್ ದಿಲ್ಲಿ ಮತ್ತು ಪಟನಾ ಪೈರೇಟ್ಸ್ ನಡುವಿನ ವಿಜೇತ ತಂಡವನ್ನು ಎದುರಿಸಲಿದೆ.
11ನೇ ಆವೃತ್ತಿಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿ ಲೀಗ್ ಹಂತವನ್ನು ಮುಗಿಸಿದ ಹರಿಯಾಣ ಸ್ಟೀಲರ್ಸ್ ತಂಡ ನೇರವಾಗಿ ಸೆಮಿಫೈನಲ್ಸ್ ಪ್ರವೇಶಿಸಿದರೆ, ಯು.ಪಿ. ಯೋಧಾಸ್ ತಂಡ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು ಸೋಲಿಸಿ ನಾಲ್ಕರ ಘಟ್ಟ ತಲುಪಿತ್ತು.
ಹರಿಯಾಣ ಸ್ಟೀಲರ್ಸ್ ತಂಡದ ಪರ ಶಿವಂ ಮತ್ತು ವಿನಯ್ ಕ್ರಮವಾಗಿ 7 ಹಾಗೂ 6 ಅಂಕ ಗಳಿಸಿದರು. ರಾಹುಲ್ 3 ಅಂಕಗಳ ಕೊಡುಗೆ ನೀಡಿದರು. ಅತ್ತ ಯೋಧಾಸ್ ಪರ ಗಗನ್ ಗೌಡ ಮತ್ತು ಭವಾನಿ ರಾಜ್ ಪೂತ್ ಕ್ರಮವಾಗಿ 10 ಮತ್ತು 5 ಅಂಕ ಗಳಿಸಿ ತಂಡದ ಹೋರಾಟಕ್ಕೆ ಸಾಕ್ಷಿಯಾದರು.
ಪಂದ್ಯ ಮುಕ್ತಾಯಕ್ಕೆ 5 ನಮಿಷಗಳು ಬಾಕಿ ಇರುವಾಗ ಹರಿಯಾಣ ಸ್ಟೀಲರ್ಸ್ ತಂಡ 23 ಮತ್ತು 21ರಲ್ಲಿ ಅಂತರ ಕಾಯ್ದುಕೊಳ್ಳುವ ಮೂಲಕ ತನ್ನ ಮೇಲುಗೈಯನ್ನು ಕಾಪಾಡಿಕೊಂಡಿತು.
ಮೊದಲಾವಧಿ ಜಿದ್ದಾಜಿದ್ದಿನಿಂದ ಕೂಡಿದ ಕಾರಣ ದ್ವಿತೀಯಾರ್ಧ ಕೂಡ ಮೊದಲಾರ್ಧದಂತೆ ಇರಲಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ದ್ವಿತೀಯಾರ್ಧ ಆರಂಭವಾದ ಕೇವಲ ಎರಡು ನಿಮಿಷಗಳಲ್ಲಿ ಯೋಧಾಸ ತಂಡವನ್ನು ಮೊದಲ ಬಾರಿ ಆಲೌಟ್ ಬಲೆಗ ಬೀಳಿಸಿದ ಸ್ಟೀಲರ್ಸ್, ತಂಡದ ಮುನ್ನಡೆಯನ್ನು 18-14ಕ್ಕೆ ವಿಸ್ತರಿಸಿಕೊಳ್ಳುವ ಮೂಲಕ ಎದುರಾಳಿ ತಂಡದ ಮೇಲೆ ಒತ್ತಡ ಹೇರಿತು.
ಹಿನ್ನಡೆಯಿಂದ ಒತ್ತಡಕ್ಕೆ ಸಿಲುಕಿದ ಯೋಧಾಸ್ ಆಟಗಾರರು ಸಮನ್ವತೆಯ ಎದುರಿಸಿದರು. ಇದರ ಸಂಪೂರ್ಣ ಲಾಭವನ್ನು ಹರಿಯಾಣ ತನ್ನದಾಗಿಸಿಕೊಂಡಿತು. 25ರಿಂದ 30 ನಿಮಿಷಗಳ ಅವಧಿಯಲ್ಲಿ ಪುಟಿದೇಳುವ ಸಾಹಸ ಮಾಡಿದ ಯೋಧಾಸ್, ತಂಡದ ಹಿನ್ನಡೆಯನ್ನು 18-21ಕ್ಕೆ ತಗ್ಗಿಸಿ ಪ್ರತಿರೋಧ ಒಡ್ಡುವ ಮುನ್ಸೂಚನೆ ನೀಡಿತು.
ಟಾಸ್ ಗೆದ್ದ ಹರಿಯಾಣ ಸ್ಟೀಲರ್ಸ್ ತಂಡ ಕೋರ್ಟ್ ಆಯ್ಕೆ ಮಾಡಿಕೊಂಡಿತು. ಮೊದಲ ರೇಡಿಂಗ್ ನಡೆಸಿ ಯೋಧಾಸ ತಂಡದ ವಿನಯ್ , ಮಹೇಂದ್ರ ಸಿಂಗ್ ಅವರನ್ನು ಔಟ್ ಮಾಡುವ ಮೂಲಕ ಯೋಧಾಸ್ ಪರ ಖಾತೆ ತೆರೆದರು. ಮೊದಲೆರಡು ನಿಮಿಷ ಉಭಯ ತಂಡಗಳು 2-2ರಲ್ಲಿ ಸಮಬಲ ಸಾಧಿಸಿದವು. ಆದರೆ ಕರ್ನಾಟಕದ ಮೂಲಗ ಗಗನ್ ಗೌಡ ಮತ್ತು ಹಿತೇಶ್ ಅವರ ಅದ್ಭುತ ರೇಡಿಂಗ್ ನಿಂದ ಯೋಧಾಸ್ ತಂಡ ಮೊದಲ ಐದು ನಿಮಿಷಗಳ ಆಟದಲ್ಲಿ 5-3ರಲ್ಲಿ ಮೇಲುಗೈ ಸಾಧಿಸಿತು. ಹರಿಯಾಣ ಕೂಡ ಇದಕ್ಕೆ ತಿರುಗೇಟು ನೀಡಿತ ಪರಿಣಾಮ 4-5ರಲ್ಲಿ ಜಿದ್ದಾಜಿದ್ದಿನ ಹೋರಾಟ ಮುಂದುವರಿಯಿತು.
ಮೊದಲ ಹತ್ತು ನಿಮಿಷಗಳ ಹೋರಾಟದ ಮುಕ್ತಾಯಕ್ಕೆ ಹರಿಯಾಣ ಮತ್ತು ಯೋಧಾಸ್ 5-6 ಅಂಕಗಳಲ್ಲಿ ಹೋರಾಟ ಕಾಯ್ದುಕೊಳ್ಳುವ ಮೂಲಕ ಪ್ರೇಕ್ಷಕರಲ್ಲಿ ತೀವ್ರ ಕುತೂಹಲವನ್ನು ಮೂಡಿಸಿದವು. ಆದರೆ ಎರಡು ಬಾರಿಯ ಡು ಆರ್ ಡೈ ವೇಳೆ ಹಾಗೂ ವಿನಯ್ ಅವರ ಅಮೋಘ ರೇಡಿಂಗ್ ನಲ್ಲಿ ಪಾಯಿಂಟ್ಸ್ ಕಲೆಹಾಕಿದ ಹರಿಯಾಣ 8ನೇ ನಿಮಿಷದ ವೇಳೆಗ 7-6ರಲ್ಲಿ ಮೊದಲ ಬಾರಿ ಮೇಲುಗೈ ಸಾಧಿಸಿತು. ನಂತರ ಉಭಯ ತಂಡಗಳ ಪೈಪೋಟಿ 7-7ರಲ್ಲಿ ಸಮಬಲಗೊಂಡಿತು.
ನಂತರವು ಉಬಯ ತಂಡಗಳು ಮುನ್ನಡೆಗಾಗಿ ಇನ್ನಿಲ್ಲದ ಹರಸಾಹಸ ನಡೆಸಿದವು. ಹೀಗಾಗಿ ಪಂದ್ಯದ ಮೊದಲಾರ್ಧದ ಮುಕ್ತಾಯಕ್ಕೆ ಹರಿಯಾಣ ತಂಡ 12-11ರಲ್ಲಿ ಅಲ್ಪ ಮುನ್ನಡೆ ಸಾಧಿಸಲಷ್ಟೇ ಶಕ್ತಗೊಂಡಿತು.