

ಜೈಪುರ: ರೈಡರ್ ವಿನಯ್ ಅವರ ಸೂಪರ್ 10 ಅಂಕಗಳ ಸಾಹಸದ ಜತೆಗೆ ಚಂದ್ರನ್ ರಂಜೀತ್ (7 ಅಂಕ) ಅವರ
ಸಮಯೋಚಿತ ಆಟದ ನೆರವಿನಿಂದ ಹರಿಯಾಣ ಸ್ಟೀಲರ್ಸ್ ಪ್ರೊ ಕಬಡ್ಡಿ ಲೀಗ್ ಹತ್ತನೇ ಆವೃತ್ತಿಯ 71ನೇ ಹಣಾಹಣಿಯಲ್ಲಿ ತಮಿಳ್
ತಲೈವಾಸ್ ತಂಡವನ್ನು 5 ಅಂಕಗಳ ಅಂತರದಿಂದ ಸೋಲಿಸಿತು.
ಎಸ್‌ಎಂಎಸ್ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಮೊದಲ ಪಂದ್ಯದ ಉಭಯ ಅವಧಿಗಳಲ್ಲಿ ಅಧಿಕಾರಯುತ ಪ್ರದರ್ಶನ
ನೀಡಿದ ಸ್ಟೀಲರ್ಸ್ 36-31 ಅಂಕಗಳ ಅಂತರದಿಂದ ತಲೈವಾಸ್‌ಗೆ ಆಘಾತ ನೀಡಿತು. ಹಿಂದಿನ ಪಂದ್ಯದಲ್ಲಿ ಮುಂಬಾ ವಿರುದ್ಧ ರೋಚಕ
ಟೈ ಸಾಧಿಸಿ ಅಂಕ ಹಂಚಿಕೊಂಡಿದ್ದ ಸ್ಟೀಲರ್ಸ್, ಈ ಪಂದ್ಯದಲ್ಲಿ ಪೂರ್ಣ ಐದು ಅಂಕಗಳನ್ನು ಕಲೆಹಾಕುವಲ್ಲಿ ಯಶಸ್ವಿಯಾಯಿತು. ಅತ್ತ
ಯೋಧಾಸ್ ವಿರುದ್ಧ ಗೆದ್ದು ಲಯಕ್ಕೆ ಮರಳಿದ ತಲೈವಾಸ್ ಆಟಗಾರರು ಸ್ಥಿರತೆ ಕಾಯ್ದುಕೊಳ್ಳುವಲ್ಲಿ ವಿಫಲಗೊಂಡರು. ಹೀಗಾಗಿ
ಟೂರ್ನಿಯಲ್ಲಿ 9ನೇ ಸೋಲಿಗೆ ತುತ್ತಾಗಬೇಕಾಯಿತು. ತಲೈವಾಸ್ ಪರ ಅಜಿಂಕ್ಯ ಪವಾರ್ ಮತ್ತು ಸಾಗರ್ ಕ್ರಮವಾಗಿ 6 ಮತ್ತು 5
ಅಂಕ ಗಳಿಸಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.
ಇದಕ್ಕೂ ಮುನ್ನ ಹತ್ತು ಅಂಕಗಳ ಮುನ್ನಡೆಯೊಂದಿಗೆ ದ್ವಿತೀಯಾರ್ಧ ಆರಂಭಿಸಿದ ಹರಿಯಾಣ ಸ್ಟೀಲರ್ಸ್, 2ನೇ ಅವಧಿಯಲ್ಲೂಅದೇ
ಲಯವನ್ನು ಕಾಯ್ದುಕೊಂಡರು. 24 ಮತ್ತು 25ನೇ ನಿಮಿಷದಲ್ಲಿಉಭಯ ತಂಡಗಳು ಡು ಆರ್ ಡೈ ಮಿಂಚಿದವು.25ನೇ ನಿಮಿಷಕ್ಕೆ
26-16ರಲ್ಲಿಅಂತರ ಕಾಪಾಡಿಕೊಂಡ ಸ್ಟೀಲರ್ಸ್, ರಕ್ಷ ಣಾತ್ಮಕ ಆಟಕ್ಕೆ ಆದ್ಯತೆ ನೀಡಿತು. ಹಾಗೆಯೇ ಹಿನ್ನಡೆ ತಗ್ಗಿಸುವ ತಲೈವಾಸ್‌ನ
ಯಾವುದೇ ಯತ್ನಗಳು ಫಲ ನೀಡದ ಕಾರಣ ಎದುರಾಳಿ ಆಟಗಾರರು ನಿಯಮಿತವಾಗಿ ಅಂಕ ಕಲೆಹಾಕುತ್ತಾ ಸಾಗಿದರು.
30 ನಿಮಿಷಕ್ಕೆ ತಂಡದ ಹಿನ್ನಡೆಯನ್ನು 19-27ಕ್ಕೆ ತಗ್ಗಿಸಿದ ತಮಿಳ್ ತಲೈವಾಸ್ ಆಟಗಾರರು, ಎದುರಾಳಿಗೆ ಹೋಲಿಸಿದರೆ ರೇಡಿಂಗ್
ಮತ್ತು ಟ್ಯಾಕಲ್‌ನಲ್ಲಿಉತ್ತಮ ಪ್ರದರ್ಶನ ನೀಡಿದರು. ಆದರೆ ಪಂದ್ಯ ಮುಕ್ತಾಯದ ಅಂತ್ಯಕ್ಕೆ ಎಚ್ಚೆತ್ತುಕೊಂಡ ಸ್ಟೀಲರ್ಸ್, ರೇಡಿಂಗ್
ಮತ್ತು ಟ್ಯಾಕಲ್ ಎರಡರಲ್ಲೂಗಮನ ಸೆಳೆದರು. ನಿಯಮಿತವಾಗಿ ಅಂಕ ಕಲೆಹಾಕುವ ಮೂಲಕ ತಂಡದ ಮುನ್ನಡೆಯನ್ನು 34-26ಕ್ಕೆ
ಹಿಗ್ಗಿಸಿದರು.
ಜನವರಿ 15ರಂದು ಬೆಂಗಾಲ್ ವಾರಿಯರ್ಸ್ ಮತ್ತು ಬೆಂಗಳೂರು ಬುಲ್ಸ್ ಹಾಗೂ ಜೈಪುರ ಪಿಂಕ್ ಪ್ಯಾಂಥರ್ಸ್ ಮತ್ತು ಯು ಮುಂಬಾ
ತಂಡಗಳು ಪೈಪೋಟಿ ನಡೆಸಲಿವೆ.