ರಾಷ್ಟ್ರೀಯ ಕುಸ್ತಿ ಕೊನೇ ದಿನವೂ ಹರಿಯಾಣ ಪ್ರಾಬಲ್ಯ; ಐವರು ಕನ್ನಡತಿಯರಿಗೆ ತಪ್ಪಿದ ಕಂಚು!

web wres
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಹರಿಯಾಣದ ಮಹಿಳಾ ಕುಸ್ತಿಪಟುಗಳು ಮೊಟ್ಟಮೊದಲ ಬಾರಿಗೆ ಉದ್ಯಾನನಗರಿಯ ಆತಿಥ್ಯದಲ್ಲಿ ನಡೆದ ರಾಷ್ಟ್ರೀಯ ಸೀನಿಯರ್​ ಕುಸ್ತಿ ಚಾಂಪಿಯನ್​ಷಿಪ್​ನ ಕೊನೇ ದಿನ 7 ಸ್ವರ್ಣ ಪದಕಗಳನ್ನು ಗೆದ್ದು ಪ್ರಾಬಲ್ಯ ಸಾಧಿಸಿದರು. ಇದರೊಂದಿಗೆ ಹರಿಯಾಣ ಮಹಿಳಾ ವಿಭಾಗದಲ್ಲಿ 235 ಅಂಕಗಳೊಂದಿಗೆ ಚಾಂಪಿಯನ್​ ಪಟ್ಟ ಅಲಂಕರಿಸಿದರೆ, ಮಹಾರಾಷ್ಟ್ರ (150) ದ್ವೀತಿಯ ಮತ್ತು ದೆಹಲಿ (106) ತೃತೀಯ ಸ್ಥಾನ ಪಡೆಯಿತು. ಇದಕ್ಕೆ ಮುನ್ನ ಪುರುಷರ ಫ್ರೀಸ್ಟೈಲ್​ ಕುಸ್ತಿಯಲ್ಲೂ ಅಗ್ರಸ್ಥಾನ ಅಲಂಕರಿಸಿದ್ದ ಹರಿಯಾಣ, ಗ್ರೀಕೋರೋಮನ್​ ವಿಭಾಗದಲ್ಲಿ ರನ್ನರ್​ಅಪ್​ ಎನಿಸಿತ್ತು. ಗ್ರೀಕೋರೋಮನ್​ನಲ್ಲಿ ಸರ್ವೀಸಸ್​ ಪ್ರಶಸ್ತಿ ಗೆದ್ದುಕೊಂಡಿತು.

ಕೋರಮಂಗಲ ಒಳಾಂಗಣ ಸ್ಟೇಡಿಯಂನಲ್ಲಿ ಭಾನುವಾರ ಮುಕ್ತಾಯಗೊಂಡ 3 ದಿನಗಳ ಕೂಟದ ಮಹಿಳಾ ವಿಭಾಗದಲ್ಲಿ ಪಣಕ್ಕಿದ್ದ ಒಟ್ಟು 10ರಲ್ಲಿ 8 ಸ್ವರ್ಣ ಪದಕಗಳನ್ನು ಹರಿಯಾಣವೇ ಬಾಚಿಕೊಂಡಿತು. ಅಂತಿಮ ದಿನದ ಸ್ಪರ್ಧೆಗಳಲ್ಲಿ ಹರಿಯಾಣದ ಜ್ಯೋತಿ (53 ಕೆಜಿ), ಮೀನಾ (55), ತಪಸ್ಯ (57), ಅಂಜಲಿ (59), ಮನಿಷಾ (65), ರಾಧಿಕಾ (68), ಪ್ರಿಯಾಂಕಾ (72) ಮತ್ತು ಪ್ರಿಯಾ (76) ಚಿನ್ನದ ಪದಕ ಜಯಿಸಿದರು. ಮಹಾರಾಷ್ಟ್ರದ ಭಾಗ್ಯಶ್ರೀ 62 ಕೆಜಿ ವಿಭಾಗದಲ್ಲಿ ಚಿನ್ನ ಜಯಿಸಿದರು. 50 ಕೆಜಿ ವಿಭಾಗದ ಫೈನಲ್​ನಲ್ಲಿ ಮಧ್ಯಪ್ರದೇಶದ ಶಿವಾನಿ ಪವಾರ್​ ಹರಿಯಾಣದ ವಿನಿತಾಗೆ 12&4ರಿಂದ ಸೋಲುಣಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.

ಕರ್ನಾಟಕಕ್ಕೆ 5 ಕಂಚಿನ ಹೋರಾಟದಲ್ಲಿ ನಿರಾಸೆ: ಕಳೆದ ಏಪ್ರಿಲ್​ನಲ್ಲಿ ಏಷ್ಯನ್​ ಕುಸ್ತಿ ಚಾಂಪಿಯನ್​ಷಿಪ್​ನಲ್ಲಿ ಬೆಳ್ಳಿ ಗೆದ್ದಿದ್ದ 23 ವರ್ಷದ ರಾಧಿಕಾ 68 ಕೆಜಿ ವಿಭಾಗದ ಸೆಮಿಫೈನಲ್​ನಲ್ಲಿ ಕರ್ನಾಟಕದ ಲೀನಾ ಆಂಥೋನಿಗೆ ಸೋಲುಣಿಸಿದರು. ಕಳೆದ ವರ್ಷ ಏಷ್ಯನ್​ ಗೇಮ್ಸ್​ನಲ್ಲೂ ಸ್ಪರ್ಧಿಸಿದ್ದ ರಾಧಿಕಾ ಫೈನಲ್​ನಲ್ಲಿ ದೆಹಲಿಯ ಸೃಷ್ಟಿ ವಿರುದ್ಧ ಒಂದೂ ಅಂಕಬಿಟ್ಟುಕೊಡದೆ ಗೆದ್ದರು. ಲೀನಾ ನಂತರ ಕಂಚಿನ ಪದಕದ ಹೋರಾಟದಲ್ಲಿ ಸೋನಿಕಾ ಕುಮಾರ್​ ವಿರುದ್ಧ ಸೋಲು ಕಂಡರು. 65 ಕೆಜಿ ವಿಭಾಗದಲ್ಲಿ ರಾಜ್ಯದ ಪ್ರಿನ್ಸಿತಾ ಪೆಡ್ರು ಸಿದ್ದಿ ಮೊದಲ ಸುತ್ತಿನಲ್ಲೇ ಸೋತರೂ ನಂತರ ರಿಪಷಾಷ್​ ವಿಭಾಗದಲ್ಲಿ ಸತತ 2 ಪಂದ್ಯ ಗೆದ್ದರು. ಆದರೆ ಕಂಚಿನ ಪದಕದ ಹೋರಾಟದಲ್ಲಿ ಪ್ರಿನ್ಸಿತಾ ಪಂಜಾಬ್​ನ ಜಸ್​ಪ್ರೀತ್​ ಕೌರ್​ ಎದುರು ಸೋಲು ಕಂಡು ನಿರಾಸೆ ಅನುಭವಿಸಿದರು.

57 ಕೆಜಿ ವಿಭಾಗದಲ್ಲಿ ರಾಜ್ಯದ ಶಾಲಿನಾ ಸಾಯೆರ್​ ಸಿದ್ದಿ ಕಂಚಿನ ಪದಕ ಹೋರಾಟದಲ್ಲಿ ಚಂಡೀಗಢದ ನೀತು ವಿರುದ್ಧ ಪರಾಭವಗೊಂಡರು. 53 ಕೆಜಿ ವಿಭಾಗದಲ್ಲಿ ರಾಜ್ಯದ ಗೋಪವ್ವ ಮಂಜುನಾಥ್​ ಖೋಡ್ಕಿ ಕ್ವಾರ್ಟರ್​ಫೈನಲ್​ ಸೋಲಿನ ಬಳಿಕ ರಿಪಷಾಷ್​ನಲ್ಲಿ ಕಂಚಿನ ಪದಕದ ಸನಿಹ ಬಂದರೂ, ದೆಹಲಿಯ ಸುಷ್ಮಾ ಶೋಕ್​ ವಿರುದ್ಧ ಸೋತು ನಿರಾಸೆ ಅನುಭವಿಸಿದರು. 50 ಕೆಜಿ ವಿಭಾಗದಲ್ಲಿ ರಾಜ್ಯದ ಶ್ವೇತಾ ಸಂಜು ಅಣ್ಣಿಕೇರಿ ಸೆಮೀಸ್​ನಲ್ಲಿ ಮಧ್ಯಪ್ರದೇಶದ ಶಿವಾನಿ ಪವಾರ್​ ಎದುರು ಸೋತರು. ನಂತರ ಕಂಚಿನ ಹೋರಾಟದಲ್ಲಿ ಪಂಜಾಬ್​ನ ಪ್ರೀತಿ ಎದುರು ಪರಾಭವಗೊಂಡು ಪದಕವಂಚಿತರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net