

ಕ್ಯಾನ್ಬೆರಾ: ಅಹರ್ನಿಶಿ ಅಡಿಲೇಡ್ ಟೆಸ್ಟ್ಗೆ ಪೂರ್ವಭಾವಿಯಾಗಿ ನಡೆದ ಪಿಂಕ್ಬಾಲ್ ಅಭ್ಯಾಸ ಪಂದ್ಯದಲ್ಲಿ ಭಾರತ ಪರ ವೇಗಿ ಹರ್ಷಿತ್ ರಾಣಾ (44ಕ್ಕೆ 4) ಬೌಲಿಂಗ್ನಲ್ಲಿ ಗಮನಾರ್ಹ ನಿರ್ವಹಣೆ ತೋರಿದರೆ, ಬ್ಯಾಟಿಂಗ್ನಲ್ಲಿ ಶುಭಮಾನ್ ಗಿಲ್ (50), ಯಶಸ್ವಿ ಜೈಸ್ವಾಲ್ (45), ನಿತೀಶ್ ಕುಮಾರ್ ರೆಡ್ಡಿ (42) ಮತ್ತು ವಾಷಿಂಗ್ಟನ್ ಸುಂದರ್ (42) ಉಪಯುಕ್ತ ರನ್ ಗಳಿಸಿ ಗಮನಸೆಳೆದರು.
ದ್ವಿದಿನ ಅಭ್ಯಾಸ ಪಂದ್ಯದ ಮೊದಲ ದಿನ ಮಳೆಯಿಂದಾಗಿ ಒಂದೂ ಎಸೆತ ಕಾಣದೆ ರದ್ದುಗೊಂಡಿತ್ತು. ಹೀಗಾಗಿ 2ನೇ ದಿನ ತಲಾ 50 ಓವರ್ಗಳ ಪಂದ್ಯ ಆಡಲು ನಿರ್ಧರಿಸಲಾಗಿತ್ತು. ಆದರೆ ಮಳೆ ಅಡಚಣೆಯಿಂದಾಗಿ ಪಂದ್ಯವನ್ನು ತಲಾ 46 ಓವರ್ಗಳಿಗೆ ಕಡಿತಗೊಳಿಸಲಾಯಿತು. ಮನುಕಾ ಓವಲ್ನಲ್ಲಿ ಭಾನುವಾರ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಆತಿಥೇಯ ಆಸ್ಟ್ರೆಲಿಯಾ ಪ್ರಧಾನಿ ಇಲೆವೆನ್ ತಂಡ ಆರಂಭಿಕ ಸ್ಯಾಮ್ ಕೊನ್ಸ್ಟಾಸ್ (107) ಶತಕದ ನಡುವೆ 43.2 ಓವರ್ಗಳಲ್ಲಿ 240 ರನ್ಗಳಿಗೆ ಸರ್ವಪತನ ಕಂಡಿತು. ಹರ್ಷಿತ್ಗೆ ಆಕಾಶ್ದೀಪ್ (58ಕ್ಕೆ 2) ಮತ್ತು ಇತರ ವೇಗಿಗಳು ಉತ್ತಮ ಬೆಂಬಲ ಒದಗಿಸಿದರು. ಪ್ರತಿಯಾಗಿ ಭಾರತ ನಿಗದಿತ 46 ಓವರ್ಗಳಲ್ಲಿ 5 ವಿಕೆಟ್ಗೆ 257 ರನ್ ಗಳಿಸಿ ಡ್ರಾ ಸಾಧಿಸಿತು.
ಸರ್ಫ್ರಾಜ್ ಕೀಪಿಂಗ್
ರಿಷಭ್ ಪಂತ್ ಪಂದ್ಯದ ಮೊದಲ 22.1 ಓವರ್ ವಿಕೆಟ್ ಕೀಪಿಂಗ್ ಮಾಡಿದರು. ನಂತರದಲ್ಲಿ ಸರ್ಫ್ರಾಜ್ ಖಾನ್ ವಿಕೆಟ್ ಕೀಪರ್ ಆಗಿ ಕಾರ್ಯನಿರ್ವಹಿಸಿದರು.
ಬ್ಯಾಟರ್ಗಳಿಂದ ಉತ್ತಮ ಅಭ್ಯಾಸ
4 ವರ್ಷಗಳ ಹಿಂದೆ ಆಡಿದ ಕೊನೇ ಅಹರ್ನಿಶಿ ಟೆಸ್ಟ್ನಲ್ಲಿ ಕೇವಲ 36 ರನ್ಗೆ ಆಲೌಟ್ ಆಗಿದ್ದ ಭಾರತ ತಂಡದ ಬ್ಯಾಟರ್ಗಳು ಈ ಬಾರಿ ಪಿಂಕ್ಬಾಲ್ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಜೈಸ್ವಾಲ್ ಬಿರುಸಿನ ಆಟವಾಡಿ ರಾಹುಲ್ ಜತೆ ಮೊದಲ ವಿಕೆಟ್ಗೆ 75 ರನ್ ಸೇರಿಸಿ ಔಟಾದರು. 44 ಎಸೆತಗಳಲ್ಲಿ 27 ರನ್ ಗಳಿಸಿ ಉತ್ತಮ ಲಯದಲ್ಲಿದ್ದ ರಾಹುಲ್ ಕೂಡ ಮರು ಓವರ್ ನಂತರ ಸ್ವಯಂ ನಿವೃತ್ತಿ ಹೊಂದಿದರು. ಬೆನ್ನಲ್ಲೇ ರೋಹಿತ್ ಶರ್ಮ (3) ಬೇಗನೆ ಔಟಾದರೆ, ಗಿಲ್ ಅರ್ಧಶತಕ ಬಾರಿಸಿ ಫಿಟ್ ಆಗಿರುವುದನ್ನು ಸಾಬೀತುಪಡಿಸಿ ಸ್ವಯಂ ನಿವೃತ್ತಿ ಹೊಂದಿದರು. ಬಳಿಕ ನಿತೀಶ್ಕುಮಾರ್ ರೆಡ್ಡಿ ಮತ್ತು ವಾಷಿಂಗ್ಟನ್ ಸುಂದರ್ ಕೂಡ ಪಿಂಕ್ಬಾಲ್ನಲ್ಲಿ ಬಿರುಸಿನ ಆಟವಾಡಿದರು.
ಅಡಿಲೇಡ್ನಲ್ಲೂ ಮಧ್ಯಮ ಕ್ರಮಾಂಕಕ್ಕೆ ರೋಹಿತ್?
ಅಡಿಲೇಡ್ ಟೆಸ್ಟ್ಗೆ ಭಾರತ ತಂಡದ ಬ್ಯಾಟಿಂಗ್ ಕ್ರಮಾಂಕವನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ಮಹತ್ವದ್ದಾಗಿದ್ದ ಅಭ್ಯಾಸ ಪಂದ್ಯದಲ್ಲಿ ಪರ್ತ್ ಟೆಸ್ಟ್ನಂತೆ ಜೈಸ್ವಾಲ್ ಜತೆ ಕೆಎಲ್ ರಾಹುಲ್ ಇನಿಂಗ್ಸ್ ಆರಂಭಿಸಿದರೆ, ಶುಭಮಾನ್ ಗಿಲ್ 3 ಮತ್ತು ನಾಯಕ ರೋಹಿತ್ ಶರ್ಮ 4ನೇ ಕ್ರಮಾಂಕದಲ್ಲಿ ಆಡಿದರು. ಇದರಿಂದ ಅಡಿಲೇಡ್ ಟೆಸ್ಟ್ನಲ್ಲೂ ರೋಹಿತ್ ಆರಂಭಿಕನ ಸ್ಥಾನವನ್ನು ರಾಹುಲ್ಗೆ ಬಿಟ್ಟುಕೊಟ್ಟು ಮಧ್ಯಮ ಕ್ರಮಾಂಕದಲ್ಲೇ ಆಡುವ ನಿರೀಕ್ಷೆ ಹರಡಿದೆ.
ಬ್ಯಾಟ್ ಹಿಡಿಯದ ಕೊಹ್ಲಿ, ಪಂತ್
ಅಭ್ಯಾಸ ಪಂದ್ಯದಲ್ಲಿ ಭಾರತ ತಂಡದ ಎಲ್ಲ ಬ್ಯಾಟರ್ಗಳು ಬ್ಯಾಟಿಂಗ್ ಮಾಡುವ ಅವಕಾಶವಿದ್ದರೂ, ಪರ್ತ್ ಟೆಸ್ಟ್ ಶತಕವೀರ ವಿರಾಟ್ ಕೊಹ್ಲಿ ಮತ್ತು ಕೀಪರ್-ಬ್ಯಾಟರ್ ರಿಷಭ್ ಪಂತ್ ಬ್ಯಾಟಿಂಗ್ಗೆ ಇಳಿಯಲಿಲ್ಲ. ಇದೇ ರೀತಿ ಪಂತ್ ಟೆಸ್ಟ್ ಬೌಲಿಂಗ್ ಹೀರೋ ಜಸ್ಪ್ರೀತ್ ಬುಮ್ರಾ ಮತ್ತು ಅನುಭವಿ ಸ್ಪಿನ್ನರ್ ಆರ್. ಅಶ್ವಿನ್ ಬೌಲಿಂಗ್ ಮಾಡಲಿಲ್ಲ.
ಆಸೀಸ್ ಪ್ರಧಾನಿ ಇಲೆವೆನ್: 43.2 ಓವರ್ಗಳಲ್ಲಿ 240 (ಕಾನ್ಸ್ಟಾಸ್ 107, ರೆನ್ಷಾ 5, ಕ್ಲಿಂಟನ್ 40, ಜೇಕಬ್ಸ್ 61, ಹರ್ಷಿತ್ 44ಕ್ಕೆ 4, ಆಕಾಶ್ದೀಪ್ 58ಕ್ಕೆ 2, ಸಿರಾಜ್ 18ಕ್ಕೆ 1, ಪ್ರಸಿದ್ಧಕೃಷ್ಣ 37ಕ್ಕೆ 1, ವಾಷಿಂಗ್ಟನ್ 38ಕ್ಕೆ 1, ಜಡೇಜಾ 32ಕ್ಕೆ 1). ಭಾರತ: 46 ಓವರ್ಗಳಲ್ಲಿ 5 ವಿಕೆಟ್ಗೆ 257 (ಜೈಸ್ವಾಲ್ 45, ರಾಹುಲ್ 27, ಗಿಲ್ 50, ನಿತೀಶ್ 42, ವಾಷಿಂಗ್ಟನ್ 42*, ಜಡೇಜಾ 27, ಸರ್ಫ್ರಾಜ್ 1, ಪಡಿಕ್ಕಲ್ 4*, ಚಾರ್ಲಿ ಆಂಡರ್ಸನ್ 30ಕ್ಕೆ 2, ರೇನ್ಷಾ 13ಕ್ಕೆ 1).