

ನವದೆಹಲಿ: ಕರ್ನಾಟಕ ಎಡಗೈ ಬ್ಯಾಟರ್ ಆರ್.ಸ್ಮರಣ್ ಐಪಿಎಲ್ 18ನೇ ಅವೃತ್ತಿಯಿಂದ ಹೊರಬಿದ್ದಿದ್ದಾರೆ. ಗಾಯಾಳು ಆಡಂ ಜಂಪಾ ಸ್ಥಾನಕ್ಕೆ ಬದಲಿ ಆಟಗಾರನಾಗಿ ಸನ್‌ರೈಸರ್ಸ್ ತಂಡ ಸೇರಿದ್ದ ಸ್ಮರಣ್ ಒಂದೂ ಪಂದ್ಯ ಆಡದೆ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದಾರೆ. ಸ್ಮರಣ್ ಬದಲಿಗೆ ವಿದರ್ಭದ ಸ್ಪಿನ್ ಬೌಲಿಂಗ್ ಆಲ್ರೌಂಡರ್ ಹರ್ಷ್ ದುಬೆ ಟೂರ್ನಿಯ ಉಳಿದ ಭಾಗಕ್ಕೆ ಸನ್‌ರೈಸರ್ಸ್ ತಂಡ ಸೇರಿದ್ದಾರೆ. ಕಳೆದ ರಣಜಿ ಟ್ರೋಫಿಯಲ್ಲಿ 476 ರನ್ ಜತೆಗೆ 69 ವಿಕೆಟ್ ಪಡೆದಿದ್ದ 22 ವರ್ಷದ ಹರ್ಷ್ ದುಬೆ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಮೂಲಬೆಲೆ ₹30 ಲಕ್ಷಕ್ಕೆ ಸನ್‌ರೈಸರ್ಸ್ ಕೂಡಿಕೊಂಡಿದ್ದಾರೆ.
ಸಿಎಸ್‌ಕೆ ತಂಡಕ್ಕೆ ಊರ್ವಿಲ್
ಚೆನ್ನೈ: ಐಪಿಎಲ್ 18ನೇ ಆವೃತ್ತಿಯಲ್ಲಿ ಐದು ಬಾರಿಯ ಚಾಂಪಿಯನ್ ಸಿಎಸ್‌ಕೆ ಗೆಲುವು ಸಾಧಿಸಿದ ಸಂಖ್ಯೆಗಿಂತ ಅಧಿಕ ಬದಲಿ ಆಟಗಾರರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ. ಇದುವರೆಗೆ 11 ಪಂದ್ಯಗಳಲ್ಲಿ 2 ಗೆಲುವು ಹೊಂದಿರುವ ಸಿಎಸ್‌ಕೆ, ಗುಜರಾತ್‌ನ ಉರ್ವಿಲ್ ಪಟೇಲ್ ಅವರನ್ನು ಗಾಯಾಳು ವಿಕೆಟ್ ಕೀಪರ್-ಬ್ಯಾಟರ್ ವಂಶ್ ಬೇಡಿ ಸ್ಥಾನಕ್ಕೆ ಬದಲಿ ಆಟಗಾರನಾಗಿ ಸೇರಿಸಿಕೊಂಡಿದೆ. ಎಡಗಾಲಿನ ಅಸ್ಥಿರಜ್ಜು ಸಮಸ್ಯೆತೆ ತುತ್ತಾಗಿರುವ ವಂಶ್ ಬೇಡಿ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ 28 ಎಸೆತಗಳಲ್ಲಿ ಶತಕ ಸಿಡಿಸಿದ್ದ 26 ವರ್ಷದ ಉರ್ವಿಲ್, ಇದುವರೆಗೆ 47 ಟಿ20ಯಲ್ಲಿ 1,162 ರನ್ ಕಲೆಹಾಕಿದ್ದಾರೆ. 2023ರ ಆವೃತ್ತಿಯಲ್ಲಿ ಗುಜರಾತ್ ತಂಡದ ಭಾಗವಾಗಿದ್ದರು. ಮೂಲಬೆಲೆ ₹30 ಲಕ್ಷಕ್ಕೆ ಸಿಎಸ್‌ಕೆ ಸೇರಿದ್ದಾರೆ. ಉರ್ವಿಲ್ ಪಟೇಗೂ ಮುನ್ನ ಆಯುಷ್ ಮಹಾತ್ರೆ, ಡಿವಾಲ್ಡ್ ಬ್ರೆವಿಸ್ ಬದಲಿ ಆಟಗಾರರಾಗಿ ಸಿಎಸ್‌ಕೆ ತಂಡ ಕೂಡಿಕೊಂಡಿದ್ದರು.