

ಬೆಂಗಳೂರು: ಸೋಫಿ ಎಕ್ಲೆಸ್ಟೋನ್ (20ಕ್ಕೆ 3) ಬಿಗಿ ಸ್ಪಿನ್ ದಾಳಿ ಮತ್ತು ಗ್ರೇಸ್ ಹ್ಯಾರಿಸ್ (60*ರನ್, 33 ಎಸೆತ, 9 ಬೌಂಡರಿ, 2 ಸಿಕ್ಸರ್) ಬಿರುಸಿನ ಅರ್ಧಶತಕದ ಬಲದಿಂದ ಯುಪಿ ವಾರಿಯರ್ಸ್ ತಂಡ ವುಮೆನ್ಸ್ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) 2ನೇ ಆವೃತ್ತಿಯಲ್ಲಿ ಗುಜರಾತ್ ಜೈಂಟ್ಸ್ ಎದುರು 6 ವಿಕೆಟ್ಗಳಿಂದ ಗೆಲುವು ದಾಖಲಿಸಿದೆ. ಅಲಿಸ್ಸಾ ಹೀಲಿ ಬಳಗ ಸತತ 2ನೇ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದ್ದರೆ, ಗುಜರಾತ್ ಜೈಂಟ್ಸ್ ಸತತ 3ನೇ ಸೋಲಿನೊಂದಿಗೆ ಕೊನೇ ಸ್ಥಾನದಲ್ಲೇ ಉಳಿದಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಗುಜರಾತ್ ತಂಡ 5 ವಿಕೆಟ್ಗೆ 142 ರನ್ ಪೇರಿಸಿತು. ಪ್ರತಿಯಾಗಿ ಯುಪಿ ತಂಡ ಗ್ರೇಸ್ ಹ್ಯಾರಿಸ್ ಆಸರೆಯಲ್ಲಿ 15.4 ಓವರ್ಗಳಲ್ಲಿ 4 ವಿಕೆಟ್ಗೆ 143 ರನ್ ಗಳಿಸಿ ಗೆಲುವಿನ ದಡ ಸೇರಿತು. ನಾಯಕಿ ಅಲಿಸ್ಸಾ ಹೀಲಿ (33) ಯುಪಿಗೆ ಉತ್ತಮ ಆರಂಭ ಒದಗಿಸಿದರು.
ಜೈಂಟ್ಸ್ಗೆ ಎಕ್ಲೆಸ್ಟೋನ್ ಕಡಿವಾಣ
ನಾಯಕಿ ಬೆತ್ ಮೂನಿ (16) ಮತ್ತು ಲೌರಾ ವೊಲ್ವಾರ್ಡ್ (28) ಮೊದಲ ವಿಕೆಟ್ಗೆ 32 ಎಸೆತಗಳಲ್ಲಿ 40 ರನ್ ಸೇರಿಸುವ ಮೂಲಕ ಗುಜರಾತ್ಗೆ ಬಿರುಸಿನ ಆರಂಭ ಒದಗಿಸಿದರು. ಪಂದ್ಯದ 6ನೇ ಓವರ್ನಲ್ಲಿ ಈ ಜೋಡಿಯನ್ನು ಬೇಧಿಸಿದ ಎಡಗೈ ಸ್ಪಿನ್ನರ್ ಸೋಫಿ ಎಕ್ಲೆಸ್ಟೋನ್ ಗುಜರಾತ್ ರನ್ಗತಿಗೂ ಬ್ರೇಕ್ ಹಾಕಿದರು. ಹರ್ಲೀನ್ ಡಿಯೋಲ್ (18) ಕನ್ನಡತಿ ರಾಜೇಶ್ವರಿ ಗಾಯಕ್ವಾಡ್ಗೆ ವಿಕೆಟ್ ಒಪ್ಪಿಸಿದರು. ನಂತರದಲ್ಲಿ ೋಬ್ ಲಿಚ್ಫೀಲ್ಡ್ (35) ಮತ್ತು ಆಶ್ಲೆ ಗಾರ್ಡ್ನರ್ (30) 4ನೇ ವಿಕೆಟ್ಗೆ 31 ಎಸೆತಗಳಲ್ಲಿ 52 ರನ್ ಸೇರಿಸುವ ಮೂಲಕ ಗುಜರಾತ್ ತಂಡವನ್ನು ಸ್ಪರ್ಧಾತ್ಮಕ ಮೊತ್ತದತ್ತ ಮುನ್ನಡೆಸಿದರು. ಈ ಜೋಡಿಯನ್ನು ಮತ್ತೆ ಎಕ್ಲೆಸ್ಟೋನ್ ಬೇರ್ಪಡಿಸಿದರು.
ಗುಜರಾತ್ ಜೈಂಟ್ಸ್: 5 ವಿಕೆಟ್ಗೆ 142 (ವೊಲ್ವಾರ್ಡ್ 28, ಮೂನಿ 16, ಹರ್ಲೀನ್ 18, ಲಿಚ್ಫೀಲ್ಡ್ 35, ಗಾರ್ಡ್ನರ್ 30, ಎಕ್ಲೆಸ್ಟೋನ್ 20ಕ್ಕೆ 3, ರಾಜೇಶ್ವರಿ ಗಾಯಕ್ವಾಡ್ 33ಕ್ಕೆ 1). ಯುಪಿ ವಾರಿಯರ್ಸ್: 15.4 ಓವರ್ಗಳಲ್ಲಿ 4 ವಿಕೆಟ್ಗೆ 143 (ಅಲಿಸ್ಸಾ 33, ಚಾಮರಿ 17, ಗ್ರೇಸ್ ಹ್ಯಾರಿಸ್ 60*, ದೀಪ್ತಿ 17*, ತನುಜಾ 23ಕ್ಕೆ 2, ಮೇನಾ 39ಕ್ಕೆ 1).