

ನವದೆಹಲಿ: ನಾಯಕಿ ಹರ್ಮಾನ್ಪ್ರೀತ್ ಕೌರ್ (95*ರನ್, 48 ಎಸೆತ, 10 ಬೌಂಡರಿ, 5 ಸಿಕ್ಸರ್) ಬ್ಯಾಟಿಂಗ್ ಆರ್ಭಟದ ಬಲದಿಂದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ವುಮೆನ್ಸ್ ಪ್ರೀಮಿಯರ್ ಲೀಗ್ 2ನೇ ಆವೃತ್ತಿಯ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ 7 ವಿಕೆಟ್ಗಳಿಂದ ಗೆಲುವು ದಾಖಲಿಸಿದೆ. ಟೂರ್ನಿಯಲ್ಲಿ ಕಂಡ 5ನೇ ಜಯದೊಂದಿಗೆ ಮುಂಬೈ ಪ್ಲೇಆಫ್ ಪ್ರವೇಶ ಖಚಿತಪಡಿಸಿಕೊಂಡಿದ್ದರೆ, ಗುಜರಾತ್ ಪ್ರಶಸ್ತಿ ರೇಸ್ನಿಂದ ಬಹುತೇಕ ಹೊರಬಿದ್ದಿದೆ.
ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದ ಗುಜರಾತ್ ತಂಡ ದಯಾಲನ್ ಹೇಮಲತಾ (74 ರನ್, 40 ಎಸೆತ, 9 ಬೌಂಡರಿ, 2 ಸಿಕ್ಸರ್) ಮತ್ತು ನಾಯಕಿ ಬೆತ್ ಮೂನಿ (66 ರನ್, 35 ಎಸೆತ, 8 ಬೌಂಡರಿ, 3 ಸಿಕ್ಸರ್) ಜೋಡಿ 2ನೇ ವಿಕೆಟ್ಗೆ 62 ಎಸೆತಗಳಲ್ಲಿ 121 ರನ್ ಜತೆಯಾಟವಾಡಿದ ನೆರವಿನಿಂದ 7 ವಿಕೆಟ್ಗೆ 190 ರನ್ ಪೇರಿಸಿತು. ಪ್ರತಿಯಾಗಿ ಮುಂಬೈ 19.5 ಓವರ್ಗಳಲ್ಲಿ 3 ವಿಕೆಟ್ಗೆ 191 ರನ್ ಗಳಿಸಿ ಗೆದ್ದಿತು. ಹರ್ಮಾನ್ಪ್ರೀತ್-ಅಮೆಲಿಯ ಕೆರ್ ಮುರಿಯದ 4ನೇ ವಿಕೆಟ್ಗೆ 38 ಎಸೆತಗಳಲ್ಲಿ 93 ರನ್ ಕಸಿಯಿತು. ಇದರಲ್ಲಿ 76 ರನ್ ಹರ್ಮಾನ್ ಒಬ್ಬರೇ ಸಿಡಿಸಿದರು.
ಗುಜರಾತ್ ಜೈಂಟ್ಸ್: 7 ವಿಕೆಟ್ಗೆ 190 (ವೊಲ್ವಾರ್ಡ್ 13, ಮೂನಿ 66, ಹೇಮಲತಾ 74, ಲಿಚ್ಫೀಲ್ಡ್ 3, ಗಾರ್ಡ್ನರ್ 1,ಫುಲ್ಮಲಿ 21*, ಸೈಕಾ ಇಶಾಕ್ 31ಕ್ಕೆ 2, ಶಬ್ನಿಮ್ 30ಕ್ಕೆ 1, ಹ್ಯಾಲಿ 22ಕ್ಕೆ 1, ಪೂಜಾ 45ಕ್ಕೆ 1).
ಮುಂಬೈ ಇಂಡಿಯನ್ಸ್: 19.5 ಓವರ್ಗಳಲ್ಲಿ 3 ವಿಕೆಟ್ಗೆ 191 (ಯಸ್ತಿಕಾ 49, ಹರ್ಮಾನ್ಪ್ರೀತ್ 95*, ಕೆರ್ 12*, ತನುಜಾ 21ಕ್ಕೆ 1).