

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್ಸಿಬಿ (RCB) ಹಾಗೂ ಮುಂಬೈ ಇಂಡಿಯನ್ಸ್ (Mumbai Indians) ನಡುವಿನ ವುಮೆನ್ಸ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಸ್ಮೃತಿ ಮಂದಾನ ಪಡೆಯ ಜಯದ ಓಟಕ್ಕೆ ಹರ್ಮಾನ್ಪ್ರೀತ್ ಬಳಗ ಬ್ರೇಕ್ ಹಾಕಿದ್ದು, 4 ವಿಕೆಟ್ಗಳ ಜಯ ಸಾಧಿಸಿದೆ.
ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಆಗಮನಕ್ಕಾಗಿ ಕಾದು ಕುಳಿತಿದ್ದ ಅಭಿಮಾನಿಗಳು ತವರಿನಲ್ಲಿ ವನಿತೆಯರಿಗೆ ಭರ್ಜರಿ ಸ್ವಾಗತವನ್ನು ನೀಡಿದ್ದಾರೆ. ಮೊದಲ ಬಾಲ್ನಿಂದಲೇ ತಂಡವನ್ನು ಹುರಿದುಂಬಿಸಿದ ಅಭಿಮಾನಿಗಳು ಎಲ್ಲಿಸ್ ಪೆರ್ರಿ (81 ರನ್, 43 ಎಸೆತ, 11 ಬೌಂಡರಿ, 2 ಸಿಕ್ಸರ್) ಅರ್ಭಟಿಸುತ್ತಿದ್ದಂತೆ ಅವರ ಹರ್ಷೋದ್ಗಾರ ಮತ್ತಷ್ಟು ಹೆಚ್ಚಾಯಿತು.
ಒಂದು ಕ್ಷಣದಲ್ಲಿ ಎಲ್ಲಿಸ್ ಪೆರ್ರಿ ಸ್ಫೋಟಕ ವ್ಯಾಟಿಂಗ್ನಿಂದಾಗಿ ಕಂಗೆಟ್ಟಿದ್ದ ಮುಂಬೈ ಇಂಡಿಯನ್ಸ್ ತಂಡಕ್ಕೆ ಆರ್ಸಿಬಿ ಅಭಿಮಾನಿಗಳು ದೊಡ್ಡ ತಲೆನೋವಾಗಿ ಪರಿಣಮಿಸಿದರು. ಅದು ಎಷ್ಟರಮಟ್ಟಿಗೆ ಎಂದರೆ ಮುಂಬೈ ತಂಡದ ನಾಯಕಿ ಹರ್ಮಾನ್ಪ್ರೀತ್ ಕೌರ್ ಕೆಲಕ್ಷಣ ಕಿವಿಯನ್ನು ಮುಚ್ಚಿಕೊಂಡಿದ್ದು, ಕ್ಯಾಮರಾದಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, 2.7 ಮಿಲಿಯನ್ವೀವ್ಸ್ ಪಡೆದುಕೊಂಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ತಂಡವು ಎಲ್ಲಿಸ್ ಪೆರ್ರಿ (81 ರನ್, 43 ಎಸೆತ, 11 ಬೌಂಡರಿ, 2 ಸಿಕ್ಸರ್) ಅರ್ಧಶತಕರ ಫಲವಾಗಿ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 167 ರನ್ಗಳಿಸಿತು. ಆರ್ಸಿಬಿ ನೀಡಿದ ಗುರಿ ಬೆನ್ನಟ್ಟಿದ ಮುಂಬೈ ತಂಡವು ನ್ಯಾಟ್ ಸಿವರ್-ಬ್ರಂಟ್ (42 ರನ್, 21 ಎಸೆತ, 9 ಬೌಂಡರಿ), ಹರ್ಮನ್ಪ್ರೀತ್ ಕೌರ್ (50 ರನ್, 38 ಎಸೆತ, 8 ಬೌಂಡರಿ, 1 ಸಿಕ್ಸರ್), ಅಮನ್ಜೋತ್ ಕೌರ್ (34 ರನ್, 27 ಎಸೆತ, 2 ಬೌಂಡರಿ, 2 ಸಿಕ್ಸರ್) ಜವಾಬ್ದಾರಿಯುತ ಆಟದ ಫಲವಾಗಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಮೂಲಕ ಸ್ಮೃತಿ ಪಡೆಗೆ ಹ್ಯಾಟ್ರಿಕ್ ಜಯವನ್ನು ಮುಂಬೈ ತಪ್ಪಿಸಿತು.