ಮಹಿಳೆಯರ ಏಕೈಕ ಟೆಸ್ಟ್​ನಲ್ಲಿ ಐತಿಹಾಸಿಕ ಗೆಲುವಿನತ್ತ ಭಾರತ

womens web
Published on

ಮುಂಬೈ: ನಾಯಕಿ ಹರ್ಮಾನ್​ಪ್ರೀತ್​ ಕೌರ್​ (23ಕ್ಕೆ 2) ಬೌಲಿಂಗ್​ನಲ್ಲಿ ಮಿಂಚುವುದರೊಂದಿಗೆ ಭಾರತ ತಂಡ ಮಹಿಳೆಯರ ಏಕೈಕ ಟೆಸ್ಟ್​ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೆಲಿಯಾ ವಿರುದ್ಧ ಐತಿಹಾಸಿಕ ಗೆಲುವು ದಾಖಲಿಸುವ ನಿರೀಕ್ಷೆಯಲ್ಲಿದೆ. ಇನಿಂಗ್ಸ್​ ಸೋಲಿನ ಭೀತಿಯಿಂದ ಪಾರಾದ ಆಸೀಸ್​ ಸದ್ಯ 46 ರನ್​ ಮುನ್ನಡೆಯಲ್ಲಿದ್ದು, 4ನೇ ಹಾಗೂ ಅಂತಿಮ ದಿನದಾಟದಲ್ಲಿ ಗೆಲುವು ಒಲಿಸಿಕೊಳ್ಳುವ ಅತ್ಯುತ್ತಮ ಅವಕಾಶ ಭಾರತದ ಮುಂದಿದೆ.

ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಶನಿವಾರ 7 ವಿಕೆಟ್​ಗೆ 376 ರನ್​ಗಳಿಂದ 3ನೇ ದಿನದಾಟ ಮುಂದುವರಿಸಿದ ಭಾರತ, 406 ರನ್​ಗಳಿಗೆ ಆಲೌಟ್​ ಆಗಿ ಮೊದಲ ಇನಿಂಗ್ಸ್​ನಲ್ಲಿ 187 ರನ್​ಗಳ ಭಾರಿ ಮುನ್ನಡೆ ಸಾಧಿಸಿತು. ಪ್ರತಿಯಾಗಿ 2ನೇ ಇನಿಂಗ್ಸ್​ನಲ್ಲಿ ದಿಟ್ಟ ಹೋರಾಟವನ್ನೇ ಪ್ರದರ್ಶಿಸಿದ ಆಸ್ಟ್ರೆಲಿಯಾ ಇನಿಂಗ್ಸ್​ ಸೋಲಿನ ಭೀತಿಯಿಂದ ಪಾರಾಯಿತು. ಆದರೂ, ದಿನದ ಕೊನೆಯಲ್ಲಿ ಹರ್ಮಾನ್​ಪ್ರೀತ್​ ತ್ವರಿತಗತಿಯಲ್ಲಿ 2 ವಿಕೆಟ್​ ಕಬಳಿಸುವುದರೊಂದಿಗೆ ಆಸೀಸ್​ಗೆ ಕಡಿವಾಣ ಹಾಕಿದ್ದಾರೆ. ದಿನದಂತ್ಯಕ್ಕೆ 5 ವಿಕೆಟ್​ಗೆ 233 ರನ್​ ಪೇರಿಸಿರುವ ಆಸೀಸ್​, ಎಲ್ಲ ಪ್ರಮುಖ ಬ್ಯಾಟರ್​ಗಳ ವಿಕೆಟ್​ ಕಳೆದುಕೊಂಡಿದ್ದು, ಕೊನೇ ದಿನ ಸೋಲು ತಪ್ಪಿಸಿಕೊಳ್ಳಲು ಬಾಲಂಗೋಚಿಗಳನ್ನೇ ನೆಚ್ಚಿಕೊಂಡಿದೆ.

ಆಸೀಸ್​ ವಿರುದ್ಧ ಈ ಹಿಂದೆ ಆಡಿರುವ 10 ಟೆಸ್ಟ್​ಗಳಲ್ಲಿ, 4ರಲ್ಲಿ ಸೋತು, 6ರಲ್ಲಿ ಡ್ರಾ ಸಾಧಿಸಿರುವ ಭಾರತ ಮೊಟ್ಟಮೊದಲ ಗೆಲುವಿನ ಹಂಬಲದಲ್ಲಿದೆ. ಅಂತಿಮ ದಿನ ಆಸ್ಟ್ರೆಲಿಯಾವನ್ನು ಬೇಗನೆ ಕಟ್ಟಿಹಾಕಿದರೆ, ಭಾರತ ಸುಲಭ ಗುರಿಯನ್ನು ಯಶಸ್ವಿಯಾಗಿ ಚೇಸಿಂಗ್​ ಮಾಡಬಹುದಾಗಿದೆ. ಭಾರತ ಮೊದಲ ಇನಿಂಗ್ಸ್​ನಲ್ಲಿ ಪೇರಿಸಿದ 406 ರನ್​, ಆಸೀಸ್​ ವಿರುದ್ಧ ಇದುವರೆಗೆ ಆಡಿದ 11 ಟೆಸ್ಟ್​ಗಳಲ್ಲಿ ಗರಿಷ್ಠ ಮೊತ್ತವಾಗಿದೆ. ದೀಪ್ತಿ ಶರ್ಮ-ಪೂಜಾ ವಸ್ತ್ರಾಕರ್​ ಪೇರಿಸಿದ 122 ರನ್​, ಮಹಿಳೆಯರ ಟೆಸ್ಟ್​ನಲ್ಲಿ ಭಾರತ ಪರ 8ನೇ ವಿಕೆಟ್​ಗೆ ಭಾರತ ಪರ ಗರಿಷ್ಠ ಜತೆಯಾಟವಾಗಿದೆ.

ಆಸ್ಟ್ರೆಲಿಯಾ: 219 ಮತ್ತು 90 ಓವರ್​ಗಳಲ್ಲಿ 5 ವಿಕೆಟ್​ಗೆ 233 (ಬೆತ್​ ಮೂನಿ 33, ಪೆರ್ರಿ 45, ತಹ್ಲಿಯಾ 73, ಅಲಿಸ್ಸಾ ಹೀಲಿ 32, ಸುದರ್​ಲ್ಯಾಂಡ್​ 12*, ಗಾರ್ಡ್​ನರ್​ 7*, ಸ್ನೇಹಾ 54ಕ್ಕೆ 2, ಹರ್ಮಾನ್​ಪ್ರೀತ್​ 23ಕ್ಕೆ 2). ಭಾರತ: 126.3 ಓವರ್​ಗಳಲ್ಲಿ 406 (ದೀಪ್ತಿ 78, ಪೂಜಾ 47, ಗಾರ್ಡ್​ನರ್​ 100ಕ್ಕೆ 4, ಗಾರ್ತ್​ 58ಕ್ಕೆ 2, ಸುದರ್​ಲ್ಯಾಂಡ್​ 41ಕ್ಕೆ 2).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net