ಹಾರ್ದಿಕ್​ ಪಾಂಡ್ಯಗೆ ಯಾಕೋ ತಲೆ ಸರಿ ಇಲ್ಲ ಅನ್ನಿಸುತ್ತೆ; ಮಾಜಿ ಕ್ರಿಕೆಟಿಗ ಹೀಗಂದಿದ್ಯಾಕೆ

Hardik Pandya
Published on

ನವದೆಹಲಿ: ಇಲ್ಲಿನ ಅರುಣ್​ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ ಪಂದ್ಯದಲ್ಲಿ ಆಲ್ರೌಂಡ್​ ಪ್ರದರ್ಶನದ ಫಲವಾಗಿ ಡೆಲ್ಲಿ ಕ್ಯಾಪಿಟಲ್ಸ್​ ತಂಡವು ಮುಂಬೈ ಇಂಡಿಯನ್ಸ್ ಎದುರು 10 ರನ್​ಗಳ ಜಯ ಸಾಧಿಸಿದ್ದು, ಹಾರ್ದಿಕ್​ ಪಾಂಡ್ಯ ಪಡೆಗೆ ತೀವ್ರ ಮುಖಭಂಗವಾಗಿದೆ. ಇತ್ತ ಮುಂಬೈ ಸೋಲಿನ ಬೆನ್ನಲ್ಲೇ ಹಲವರು ಹಾರ್ದಿಕ್​ ನಾಯಕತ್ವದ ಕುರಿತು ಅಪಸ್ವರ ತೆಗೆದಿದ್ದು, ಈ ಬಗ್ಗೆ ಕಿಡಿಕಾರಿದ್ದಾರೆ.

ಮುಂಬೈ ಸೋಲಿನ ಕುರಿತು ಮಾತನಾಡಿರುವ ಮಾಜಿ ಕ್ರಿಕೆಟಿಗ ಮೊಹಮ್ಮದ್​ ಕೈಫ್​, ನನಗೆ ತಿಳಿದಿರುವ ಮಟ್ಟಿಗೆ ಹಾರ್ದಿಕ್​ ಪಾಂಡ್ಯ ಅವರ ಮೆದುಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದುಕೊಂಡಿದ್ದೇನೆ. ಏಕೆಂದರೆ ಕೆಲವೊಮ್ಮೆ ಅವರು ಮೊದಲ ಓವರ್ ಮತ್ತು ಕೆಲವೊಮ್ಮೆ 5 ನೇ ಓವರ್ ಬೌಲ್ ಮಾಡಲು ಬರುತ್ತಾರೆ.

ವಾಸ್ತವವಾಗಿ ಹಾರ್ದಿಕ್ ತಂಡವನ್ನು ಮುನ್ನಡೆಸಲು ಯಾವುದೇ ಯೋಜನೆಯನ್ನು ರೂಪಿಸಿದಂತೆ ಕಾಣುತ್ತಿಲ್ಲ. ಬೌಲಿಂಗ್​ನಲ್ಲಿ ಆಗುತ್ತಿರುವ ಬದಲಾವಣೆಗಳು ಹಾರ್ದಿಕ್​ನಲ್ಲಿ ಗೊಂದಲ ಮೂಡಿಸಿವೆ. ಆತ ಏನು ಮಾಡುತ್ತಿದ್ದಾನೆ ಎಂಬುದು ತಿಳಿಯುತ್ತಿಲ್ಲ. ತಂಡದ ಹಿತದೃಷ್ಠಿಯಿಂದ ಮುಂದಿನ ದಿನಗಳಲ್ಲಿ ಉತ್ತಮ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ ಎಂದು ಮೊಹಮ್ಮದ್​ ಕೈಫ್​ ಅಭಿಪ್ರಾಯಪಟ್ಟಿದ್ದಾರೆ.

Mohammad Kaif

ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಮೊದಲು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಯುವ ಆರಂಭಿಕ ದಾಂಡಿಗ ಜೇಕ್ ಫ್ರೇಸರ್ ಮೆಕ್​ಗುರ್ಕ್​ (84) ಸ್ಪೋಟಕ ಆರಂಭ ಒದಗಿಸಿದ್ದರು. ಅಂತಿಮ ಓವರ್​ಗಳಲ್ಲಿ ಟ್ರಿಸ್ಟನ್ ಸ್ಟಬ್ಸ್ ಸ್ಫೋಟಕ ಆಟದ ಫಲವಾಗಿ 20 ಓವರ್​ಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ 4 ವಿಕೆಟ್​ ನಷ್ಟಕ್ಕೆ 257 ರನ್​ ಗಳಿಸಿತ್ತು.

258 ರನ್​ಗಳ ಕಠಿಣ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್  ತಿಲಕ್​ ವರ್ಮಾ (63 ರನ್) ಪ್ರತಿರೋಧದ ಹೊರತಾಗಿಯೂ 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 247 ರನ್​​ಗಳಿಸಲಷ್ಟೇ ಶಕ್ತವಾಯಿತು. ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್​ ತಂಡವು 10ರನ್​ಗಳ ಜಯ ಸಾಧಿಸಿ ಗೆಲುವಿನ ನಗೆ ಬೀರಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net