ಹಾರ್ದಿಕ್​ ಪಾಂಡ್ಯ-ತಿಲಕ್​ ವರ್ಮ ಜಟಾಪಟಿ; ಮುಂಬೈ ಇಂಡಿಯನ್ಸ್​ಗೆ ಮುಗಿಯದ ಸಂಕಷ್ಟ!

web hardik tilak
Published on

ಮುಂಬೈ: ಹಾಲಿ ಐಪಿಎಲ್​ನಲ್ಲಿ ಐದು ಬಾರಿಯ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ತಂಡದ ಕಳಪೆ ನಿರ್ವಹಣೆಯ ನಡುವೆ ಡ್ರೆಸ್ಸಿಂಗ್​ ರೂಮ್​ನಲ್ಲೂ ಬಿಕ್ಕಟ್ಟು ನಿರ್ಮಾಣವಾಗಿರುವ ಬಗ್ಗೆ ಆಗಾಗ ಸುದ್ದಿಗಳು ಹರಿದಾಡುತ್ತಲೇ ಇವೆ. ತಂಡದೊಳಗೆ ಎರಡು ಬಣಗಳಿವೆ ಎಂಬ ಸುದ್ದಿಯ ನಡುವೆ ಇದೀಗ ನಾಯಕ ಹಾರ್ದಿಕ್​ ಪಾಂಡ್ಯ ಮತ್ತು ಬ್ಯಾಟರ್​ ತಿಲಕ್​ ವರ್ಮ ನಡುವೆ ಜಟಾಪಟಿ ನಡೆದಿರುವುದಾಗಿ ವರದಿಗಳು ಹರಡಿವೆ.

ಡೆಲ್ಲಿ ವಿರುದ್ಧದ ಸೋಲಿನ ಬಳಿಕ ಹಾರ್ದಿಕ್​ ಪಾಂಡ್ಯ, ಬಹಿರಂಗವಾಗಿಯೇ ತಿಲಕ್​ ವರ್ಮರನ್ನು ಟೀಕಿಸಿದ್ದರು. ಎಡಗೈ ಸ್ಪಿನ್ನರ್​ ಅಕ್ಷರ್​ ಪಟೇಲ್​ ವಿರುದ್ಧ ಎಡಗೈ ಬ್ಯಾಟರ್​ ತಿಲಕ್​ ವರ್ಮ ಹೆಚ್ಚು ಆಕ್ರಮಣಕಾರಿಯಾಗಿ ಆಡಬೇಕಾಗಿತ್ತು. ಅವರು ಹಾಗೆ ಆಡದಿದ್ದುದೇ ಸೋಲಿಗೆ ಕಾರಣವಾಯಿತು ಎಂದು ದೂರಿದ್ದರು. ಬಳಿಕ ಹಾರ್ದಿಕ್​-ತಿಲಕ್​ ನಡುವೆ ವಾಗ್ವಾದ ನಡೆದಾಗ ರೋಹಿತ್​ ಶರ್ಮ ಮತ್ತು ತಂಡದ ಮಾಲೀಕರು ಮಧ್ಯಪ್ರವೇಶಿಸಿ ಇಬ್ಬರನ್ನೂ ತಣ್ಣಗಾಗಿಸಿದ್ದರು ಎಂದು ವರದಿಯಾಗಿದೆ. ತಿಲಕ್​ ವರ್ಮ ಮುಂಬೈ ಇದುವರೆಗೆ ಆಡಿರುವ 11 ಪಂದ್ಯಗಳಲ್ಲಿ 3 ಅರ್ಧಶತಕಗಳ ಸಹಿತ 347 ರನ್​ ಬಾರಿಸಿ ತಂಡದ ಸರ್ವಾಧಿಕ ಸ್ಕೋರರ್​ ಎನಿಸಿದ್ದಾರೆ.

ರೋಹಿತ್​ ಶರ್ಮ ನಾಯಕತ್ವವನ್ನು ಹಾರ್ದಿಕ್​ ಪಡೆದುಕೊಂಡ ಬಳಿಕ ಪ್ರೇಕ್ಷಕರಿಂದಲೂ ನಿಂದನೆಗಳಿಗೆ ಗುರಿಯಾಗಿದ್ದರು. ಈ ಮುನ್ನ ಹಾರ್ದಿಕ್​ ಮತ್ತು ತಂಡದ ಬೌಲಿಂಗ್​ ಕೋಚ್​ ಲಸಿತ್​ ಮಾಲಿಂಗ ನಡುವೆಯೂ ಜಗಳ ಏರ್ಪಟ್ಟಿರುವುದಾಗಿಯೂ ವರದಿಯಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net