

ನವದೆಹಲಿ: ಸದ್ಯದಲ್ಲೇ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಭಾರತದ ಏಕದಿನ ಹಾಗೂ ಟಿ20 ತಂಡದ ನಾಯಕತ್ವ ವಹಿಸುವ ಸಾಧ್ಯತೆ ಹೆಚ್ಚಿದೆ ಎಂಬ ಲೆಕ್ಕಾಚಾರ ಇದೀಗ ಕ್ರಿಕೆಟ್ ಅಂಗಳದಲ್ಲಿ ಆರಂಭವಾಗಿದೆ. ಕಳೆದ ಜೂನ್ನಲ್ಲಿ ಪಾಂಡ್ಯಾ ಟಿ-20 ನಾಯಕತ್ವಕ್ಕೆ ಪಾದಾರ್ಪಣೆ ಮಾಡಿದರು. ಇದಾಗಿ ಇತ್ತೀಚೆಗೆ ಟಿ-20 ವಿಶ್ವಕಪ್ ಟೂರ್ನಿ ಮುಕ್ತಾಯವಾಗುತ್ತಿದ್ದಂತೆ ಟಿ-20 ತಂಡಕ್ಕೆ ಹಾರ್ದಿಕ್ ಪಾಂಡ್ಯಾಗೆ ನಾಯಕತ್ವದ ಜವಾಬ್ದಾರಿ ನೀಡಬೇಕು ಎಂಬ ಚರ್ಚೆ ಹೆಚ್ಚಾಗಿತ್ತು.
ಟೀಂ ಇಂಡಿಯಾದ ಹಾಲಿ ನಾಯಕ ರೋಹಿತ್ ಶರ್ಮಾ ಬ್ಯಾಟ್ ಮಂಕಾಗಿದೆ. ಫಿಟ್ನೆಸ್ ಹಾಗೂ ಸತತ ಬ್ಯಾಟಿಂಗ್ ವೈಫಲ್ಯದಿಂದ ರೋಹಿತ್ ಟೀಕೆಗೂ ಗುರಿಯಾಗಿದ್ದಾರೆ. ಸದ್ಯ ಇಂಜುರಿಯಿಂದ ಬಾಂಗ್ಲಾ ನಡುವಿನ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ. ಇತ್ತೀಚಿನ ಇನ್ನಿಂಗ್ಸ್ಗಳಲ್ಲಿ ರೋಹಿತ್ ಬ್ಯಾಟಿಂಗ್ನಿಂದ ನಿರೀಕ್ಷಿತ ಫಲಿತಾಂಶ ಬರುತ್ತಿಲ್ಲ. ಇದು ಕಳೆದ ಟಿ-20 ವಿಶ್ವಕಪ್ನಲ್ಲಿ ಸಮಸ್ಯೆಯಾಗಿ ಕಂಡಿತ್ತು. ರೋಹಿತ್ ವೈಫಲ್ಯದಿಂದ ಆರಂಭಿಕ ವಿಕೆಟ್ನಲ್ಲಿ ದೊಡ್ಡ ಮೊತ್ತದ ಜೊತೆಯಾಟಕ್ಕೆ ಹೊಡೆತ ಬಿದ್ದಿತ್ತು.
ಕಳೆದ ಐಪಿಎಲ್ನಲ್ಲಿ ಗುಜರಾತ್ ಟೈಟಾನ್ಸ್ ತಂಡದ ನಾಯಕತ್ವ ವಹಿಸಿಕೊಂಡ ಚೊಚ್ಚಲ ವರ್ಷದಲ್ಲೇ ಪಾಂಡ್ಯಾ ತಂಡವನ್ನು ಚಾಂಪಿಯನ್ ಆಗಿಸಿದ್ದರು. ಈ ಮೂಲಕ ತನ್ನ ನಾಯಕತ್ವ ಗುಣವನ್ನು ಸಾಬೀತುಪಡಿಸಿದ್ದರು. ಹೀಗಾಗಿ ಪಾಂಡ್ಯಾಗೆ ಭಾರತ ತಂಡದ ನಾಯಕತ್ವ ವಹಿಸುವುದು ಸೂಕ್ತ ಎಂಬಂತಹ ಚರ್ಚೆಗಳು ಬಿಸಿಸಿಐ ಅಂಗಳದಲ್ಲಿ ನಡೆದಿದೆ ಎನ್ನಲಾಗಿದೆ. ವರದಿಯ ಪ್ರಕಾರ ಬಿಸಿಸಿಐನ ಉನ್ನತ ಅಧಿಕಾರಿಗಳು ಏಕದಿನ ಮತ್ತು ಟಿ-20 ತಂಡದ ನಾಯಕತ್ವ ವಹಿಸಿಕೊಳ್ಳುವಂತೆ ಪಾಂಡ್ಯಾ ಬಳಿ ಕೇಳಿಕೊಂಡಿದ್ದಾರೆ. ಈ ಬಗ್ಗೆ ಯೋಚಿಸಲು ಇನ್ನಷ್ಟು ಸಮಯ ಬೇಕು ಎಂದು ಪಾಂಡ್ಯಾ ಹೇಳಿದ್ದಾರೆ ಎನ್ನಲಾಗಿದೆ.
ರೋಹಿತ್ ಶರ್ಮಾ 2023ರ ವಿಶ್ವಕಪ್ವರೆಗೆ ಏಕದಿನ ಮತ್ತು ಟೆಸ್ಟ್ ತಂಡದ ನಾಯಕರಾಗು ಮುಂದುವರಿಯುವ ನಿಶ್ಚಿತ. ಮುಂಬರುವ ಟಿ-20 ವಿಶ್ವಕಪ್ ದೃಷ್ಟಿಯಿಂದ ಪಾಂಡ್ಯಾ ಟಿ-20 ನಾಯಕತ್ವವನ್ನು ವಹಿಸಕೊಳ್ಳುವುದು ಬಹುತೇಕ ಖಚಿತವಾಗಿದೆ. 2024ರ ಟಿ-20 ವಿಶ್ವಕಪ್ಗೆ ಟೀಂ ಇಂಡಿಯಾ ಈಗಿನಿಂದಲೇ ಸಿದ್ಧತೆ ಆರಂಭಿಸಿದ್ದು, ಆಟಗಾರರ ಪ್ರದರ್ಶನದ ಬಗ್ಗೆ ಆಯ್ಕೆ ಸಮಿತಿ ಕಣ್ಣಿಟ್ಟಿದೆ. (ಏಜೆನ್ಸೀಸ್)