ಅಂದು ಗೇಲಿ, ಇಂದು ಕೇಕೆ!: ವಾಂಖೆಡೆಯಲ್ಲಿ ಹಾರ್ದಿಕ್‌ಗೆ ಮುಂಬೈ ಫ್ಯಾನ್ಸ್ ಬೆಂಬಲ

New Project (1)
Published on

ಮುಂಬೈ: ಐಪಿಎಲ್ 17ನೇ ಆವೃತ್ತಿಗೂ ಮುನ್ನ ಗುಜರಾತ್ ಟೈಟಾನ್ಸ್‌ನಿಂದ ವರ್ಗಾವಣೆಗೊಂಡ ಬಳಿಕ ಮುಂಬೈ ಇಂಡಿಯನ್ಸ್ ತಂಡದ ತವರಿನ ಅಂಗಣದಲ್ಲಿ ಸಾಕಷ್ಟು ಗೇಲಿಗೆ ಒಳಗಾಗಿದ್ದರು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ. ಆದರೆ ಈ ಬಾರಿ ಅದೇ ವಾಂಖೆಡೆ ಅಂಗಣದಲ್ಲಿ ಅಭಿಮಾನಿಗಳಿಂದ ಬಹುಪರಾಕ್ ಪಡೆದುಕೊಂಡಿದ್ದಾರೆ.

2023ರ ಏಕದಿನ ವಿಶ್ವಕಪ್ ಲೀಗ್ ಪಂದ್ಯದಲ್ಲಿ ಇಂಜುರಿಗೆ ತುತ್ತಾದ ಹಾರ್ದಿಕ್ ನಂತರ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಮರಳಿದರು. ಆದರೆ ಮುಂಬೈ ಇಂಡಿಯನ್ಸ್ ತಂಡ 17ನೇ ಆವೃತ್ತಿಯ ಅಂಕಪಟ್ಟಿಯಲ್ಲಿ ಕೊನೇ ಸ್ಥಾನಕ್ಕೆ ತೃಪ್ತಿಪಟ್ಟಿತು. ಜತೆಗೆ ಹಾರ್ದಿಕ್ ನಾಯಕತ್ವವನ್ನು ರೋಹಿತ್ ಶರ್ಮ ಅವರಿಂದ ಕಿತ್ತುಕೊಂಡಿದ್ದಾರೆ ಎಂಬ ಅಭಿಮಾನಿಗಳ ಆಕ್ರೋಶದ ಜತೆಗೆ ತುಂಬಿದ ಕ್ರೀಡಾಂಗಣದಲ್ಲಿ ನಿಂದನೆ ಎದುರಿಸಿದರು. ಆದರೆ ಈ ಬಾರಿ ವಾಂಖೆಡೆಯಲ್ಲಿ ಮುಂಬೈ ಆಡಿದ ಮೊದಲ ಪಂದ್ಯದಲ್ಲಿ ನಾಯಕ ಹಾರ್ದಿಕ್‌ಗೆ ಜೈಕಾರ ಮೊಳಗಿತು. ಮುಂಬೈ-ಕೆಕೆಆರ್ ಪಂದ್ಯದ ಟಾಸ್‌ಗೆ ಹಾರ್ದಿಕ್ ಆಗಮಿಸಿದಾಗ ಮೈದಾನದಲ್ಲಿ ‘ಹಮಾರ ಕ್ಯಾಪ್ಟನ್ ಕೈಸೆ ಹೋ? (ನಮ್ಮ ನಾಯಕ ಯಾರ ತರ ಇರಬೇಕು?), ಹಾರ್ದಿಕ್ ಪಾಂಡ್ಯ ಜೈಸ ಹೋ’ (ಹಾರ್ದಿಕ್ ರೀತಿ ಇರಬೇಕು) ಎಂಬ ೋಷಣೆಯ ಸ್ವಾಗತ ದೊರೆಯಿತು. ಇದರೊಂದಿಗೆ ನಾಯಕನಾಗಿ ಹಾರ್ದಿಕ್ ಅವರನ್ನು ಒಪ್ಪಿಕೊಂಡಿದ್ದೇವೆ ಎಂಬುದನ್ನು ಮುಂಬೈ ಅಭಿಮಾನಿಗಳು ಖಾತ್ರಿಪಡಿಸಿದರು.

ಅಭಿಮಾನಿಗಳ ಈ ಬದಲಾವಣೆಗೆ ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾ ಪರ ನೀಡಿದ ಪ್ರದರ್ಶನ ಜತೆಗೆ ಮೈದಾನದಲ್ಲಿ ಬದಲಾಗಿರುವ ಅವರ ವರ್ತನೆಗಳು ಕಾರಣ ಎಂದರೆ ತಪ್ಪಲ್ಲ. ಐಸಿಸಿ ಟಿ20 ವಿಶ್ವಕಪ್ ಹಾಗೂ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಹಾರ್ದಿಕ್ ತೋರಿದ ಪ್ರದರ್ಶನ ಸಾಕಷ್ಟು ಕ್ರೀಡಾಭಿಮಾನಿಗಳ ಮನಗೆದ್ದಿತು. ವೈಯಕ್ತಿಕ ಕೌಟುಂಬಿಕ ಸಮಸ್ಯೆಯ ನಡುವೆಯೂ ಹಾರ್ದಿಕ್ ರಾಷ್ಟ್ರೀಯ ತಂಡದ ಪರ ನೀಡಿದ ಕೊಡುಗೆ, ್ರಾಂಚೈಸಿ ಲೀಗ್‌ನ ಅಪಹಾಸ್ಯ, ನಿಂದನೆಗಳನ್ನು ಜೈಕಾರವಾಗಿ ಬದಲಾಯಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net