

ನವದೆಹಲಿ: ಟಿ20 ವಿಶ್ವಕಪ್ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ ಟೀಮ್ ಇಂಡಿಯಾದ ಉಪನಾಯಕ ಹಾರ್ದಿಕ್ ಪಾಂಡ್ಯ ಬುಧವಾರ ಪ್ರಕಟಗೊಂಡ ಪರಿಷತ ಐಸಿಸಿ ಟಿ20 ರ್ಯಾಂಕಿಂಗ್ನ ಆಲ್ರೌಂಡರ್ಸ್ ವಿಭಾಗದಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಅವರು ಈ ಸಾಧನೆ ಮಾಡಿದ ಮೊದಲ ಭಾರತೀಯರೆನಿಸಿದ್ದಾರೆ.
30 ವರ್ಷದ ಹಾರ್ದಿಕ್ ಕಳೆದ ಶನಿವಾರ ಬ್ರಿಜ್ಟೌನ್ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಅಮೂಲ್ಯವಾದ ಹೆನ್ರಿಕ್ ಕ್ಲಾಸೆನ್ ಮತ್ತು ಡೇವಿಡ್ ಮಿಲ್ಲರ್ ವಿಕೆಟ್ ಕಬಳಿಸಿದ್ದರು. ಜತೆಗೆ ಅಂತಿಮ ಓವರ್ನಲ್ಲಿ 16 ರನ್ ಬೇಕಾಗಿದ್ದಾಗ ಕೇವಲ 8 ರನ್ ಬಿಟ್ಟುಕೊಟ್ಟು ಗೆಲುವಿನ ರೂವಾರಿ ಎನಿಸಿದ್ದರು. ವಿಶ್ವಕಪ್ನಲ್ಲಿ ಅವರು 1 ಅರ್ಧಶತಕ ಸಹಿತ 144 ರನ್ ಬಾರಿಸಿದ್ದರು. ಜತೆಗೆ 11 ವಿಕೆಟ್ ಕಬಳಿಸಿದ್ದರು. ಶ್ರೀಲಂಕಾದ ವಾನಿಂದು ಹಸರಂಗ ಅವರನ್ನು ಹಿಂದಿಕ್ಕಿ ಹಾರ್ದಿಕ್ ಪಾಂಡ್ಯ ವಿಶ್ವ ನಂ. 1 ಪಟ್ಟಕ್ಕೇರಿದ್ದಾರೆ.
ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ನಾಯಕರಾಗಿ ವೈಲ್ಯ ಕಂಡ ಬಳಿಕ ಕ್ರಿಕೆಟ್ ಪ್ರೇಮಿಗಳಿಂದ ತೀವ್ರ ನಿಂದನೆಗಳನ್ನು ಎದುರಿಸಿದ್ದ ಹಾರ್ದಿಕ್ ಇದೀಗ ಟಿ20 ವಿಶ್ವಕಪ್ ಯಶಸ್ಸಿನೊಂದಿಗೆ ಎಲ್ಲರಿಗೂ ದಿಟ್ಟ ಉತ್ತರವನ್ನೇ ನೀಡಿದಂತಾಗಿದೆ.
ಆಲ್ರೌಂಡರ್ ರ್ಯಾಂಕಿಂಗ್ನಲ್ಲಿ ಮಾರ್ಕಸ್ ಸ್ಟೋಯಿನಿಸ್, ಸಿಕಂದರ್ ರಾಜಾ, ಶಕೀಬ್ ಅಲ್ ಹಸನ್ ಕೂಡ ತಲಾ 1 ಸ್ಥಾನ ಮೇಲೇರಿ ಕ್ರಮವಾಗಿ 3, 4, 5ನೇ ಸ್ಥಾನಕ್ಕೇರಿದ್ದರೆ, ವಿಶ್ವಕಪ್ಗೆ ಮುನ್ನ ಅಗ್ರಸ್ಥಾನದಲ್ಲಿದ್ದ ಮೊಹಮದ್ ನಬಿ 6ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಟಿ20 ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ ಹೆಚ್ಚಿನ ಏರುಪೇರಾಗಿಲ್ಲ. ಟ್ರಾವಿಸ್ ಹೆಡ್ ಮತ್ತು ಸೂರ್ಯಕುಮಾರ್ ಯಾದವ್ ಮೊದಲ 2 ಸ್ಥಾನಗಳಲ್ಲಿ ಮುಂದುವರಿದಿದ್ದಾರೆ. ಯಶಸ್ವಿ ಜೈಸ್ವಾಲ್ 7ನೇ ಸ್ಥಾನದಲ್ಲೇ ಉಳಿದಿದ್ದಾರೆ. ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಕ್ರಮವಾಗಿ 36 ಮತ್ತು 40ನೇ ಸ್ಥಾನದೊಂದಿಗೆ ಟಿ20 ಕ್ರಿಕೆಟ್ನಿಂದ ನಿರ್ಗಮಿಸಿದಂತಾಗಿದೆ.
ಬುಮ್ರಾಗೆ ಭಾರಿ ಬಡ್ತಿ
ಐಸಿಸಿ ಟಿ20 ಬೌಲಿಂಗ್ ರ್ಯಾಂಕಿಂಗ್ನಲ್ಲಿ ಜಸ್ಪ್ರೀತ್ ಬುಮ್ರಾ ಭಾರಿ ಪ್ರಗತಿ ಕಂಡಿದ್ದಾರೆ. ಒಟ್ಟು 15 ವಿಕೆಟ್ ಕಬಳಿಸುವ ಮೂಲಕ ಸರಣಿಶ್ರೇಷ್ಠ ಪ್ರಶಸ್ತಿಗೂ ಭಾಜನರಾದ ಬುಮ್ರಾ 12 ಸ್ಥಾನಕ್ಕೇರಿ ಅಗ್ರ 10ರ ಸನಿಹ ತಲುಪಿದ್ದಾರೆ. ಟೂರ್ನಿಗೆ ಮುನ್ನ ಅವರು ಅಗ್ರ 40ರಿಂದಲೂ ಹೊರಗಿದ್ದರು. ಇಂಗ್ಲೆಂಡ್ನ ಆದಿಲ್ ರಶೀದ್ ಈಗಲೂ ನಂ. 1 ಬೌಲರ್ ಆಗಿದ್ದರೆ, ದಣ ಆಫ್ರಿಕಾದ ವೇಗಿ ಅನ್ರಿಚ್ ನೋಕಿಯಾ ಬರೋಬ್ಬರಿ 7 ಸ್ಥಾನ ಬಡ್ತಿ ಪಡೆದು 2ನೇ ಸ್ಥಾನಕ್ಕೇರಿದ್ದಾರೆ. 7ನೇ ಸ್ಥಾನದಲ್ಲಿರುವ ಅಕ್ಷರ್ ಪಟೇಲ್ ಟಿ20ಯಲ್ಲಿ ಅಗ್ರ ಶ್ರೇಯಾಂಕಿತ ಭಾರತೀಯ ಬೌಲರ್ ಆಗಿದ್ದಾರೆ. ಕುಲದೀಪ್ ಯಾದವ್ ಜಂಟಿ 8ನೇ ಸ್ಥಾನದಲ್ಲಿದ್ದಾರೆ. ಅರ್ಷದೀಪ್ ಸಿಂಗ್ 13ನೇ ಸ್ಥಾನದಲ್ಲಿದ್ದಾರೆ.
ಭಾರತದ 3ನೇ ವಿಶ್ವ ನಂ.1
ಹಾರ್ದಿಕ್ ಪಾಂಡ್ಯ ಹಾಲಿ ಐಸಿಸಿ ರ್ಯಾಂಕಿಂಗ್ನಲ್ಲಿ ವಿಶ್ವ ನಂ. 1 ಪಟ್ಟ ಅಲಂಕರಿಸಿರುವ 3ನೇ ಭಾರತೀಯರಾಗಿದ್ದಾರೆ. ಟೆಸ್ಟ್ ಆಲ್ರೌಂಡರ್ ರ್ಯಾಂಕಿಂಗ್ನಲ್ಲಿ ರವೀಂದ್ರ ಜಡೇಜಾ ಮತ್ತು ಟೆಸ್ಟ್ ಬೌಲಿಂಗ್ ರ್ಯಾಂಕಿಂಗ್ನಲ್ಲಿ ಆರ್. ಅಶ್ವಿನ್ ಈಗಾಗಲೆ ನಂ. 1 ಪಟ್ಟದಲ್ಲಿದ್ದಾರೆ. ಟಿ20 ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ ಸೂರ್ಯಕುಮಾರ್ ಇತ್ತೀಚೆಗಷ್ಟೇ ನಂ. 1 ಪಟ್ಟ ಕಳೆದುಕೊಂಡಿದ್ದರೆ, ಶುಭಮಾನ್ ಗಿಲ್ ಏಕದಿನ ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನದ ಸನಿಹ 2ನೇ ಸ್ಥಾನದಲ್ಲಿದ್ದಾರೆ. ಭಾರತ ತಂಡ ಏಕದಿನ ಮತ್ತು ಟಿ20 ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನದಲ್ಲಿದೆ.