

ಬೆಂಗಳೂರು: ಆಸ್ಟ್ರೇಲಿಯಾ ಪ್ರವಾಸದ ಸೀಮಿತ ಓವರ್ ಸರಣಿಯಲ್ಲಿ ಟೀಮ್ ಇಂಡಿಯಾ ಪರ ಭರ್ಜರಿ ಬ್ಯಾಟಿಂಗ್ ನಿರ್ವಹಣೆ ತೋರಿದ ಹಾರ್ದಿಕ್ ಪಾಂಡ್ಯ ತವರಿಗೆ ಮರಳಿದ ಬೆನ್ನಲ್ಲೇ 4 ತಿಂಗಳ ಪುತ್ರ ಅಗಸ್ತ್ಯನ ಆರೈಕೆಯಲ್ಲಿ ತೊಡಗಿಕೊಂಡಿದ್ದಾರೆ. ಪುತ್ರನಿಗೆ ಬಾಟಲಿ ಮೂಲಕ ಹಾಲುಣಿಸುತ್ತಿರುವ ಚಿತ್ರದೊಂದಿಗೆ ಹಾರ್ದಿಕ್ ಪಾಂಡ್ಯ, ‘ರಾಷ್ಟ್ರೀಯ ತಂಡದ ಸೇವೆಯಿಂದ ತಂದೆಯ ಕರ್ತವ್ಯ ನಿರ್ವಹಿಸಲು ಬಂದಿರುವೆ’ ಎಂದು ಟ್ವೀಟಿಸಿದ್ದರು. ಇದಕ್ಕಾಗಿ ಈಗ ಹಾರ್ದಿಕ್ ಪಾಂಡ್ಯ ಅವರು ಮೆಚ್ಚುಗೆಗಳಿಗಿಂತ ಹೆಚ್ಚಾಗಿ ಟೀಕೆಗಳಿಗೆ ಗುರಿಯಾಗಿದ್ದಾರೆ. ಅದಕ್ಕೆ ಕಾರಣವೇನೆಂದು ತಿಳಿಯಬೇಕಾದರೆ ಮುಂದೆ ಓದಿ...
ಹಾರ್ದಿಕ್ ಪಾಂಡ್ಯ ಮಗುವಿಗೆ ಹಾಲುಣಿಸುವ ಮೂಲಕ ಪತ್ನಿ ನತಾಶಾ ಸ್ಟಾಂಕೋವಿಕ್‌ಗೆ ಮಗುವಿನ ಆರೈಕೆಗೆ ನೆರವಾಗಿರುವುದು ಉತ್ತಮ ಅಂಶವಾಗಿದ್ದರೂ, ಅವರು ಬಾಟಲಿ ಹಾಲುಣಿಸಿರುವುದು ಹಲವು ಪೌಷ್ಟಿಕತೆ ತಜ್ಞರು, ಮಕ್ಕಳ ವೈದ್ಯರು, ಮಕ್ಕಳ ಹಕ್ಕು ಪರ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿದೆ.
‘ಭಾರತೀಯ ಕಾನೂನಿನ ಪ್ರಕಾರ ಮಗುವಿಗೆ ಬಾಟಲಿ ಮೂಲಕ ಹಾಲುಣಿಸುವುದು ಅಪರಾಧ. ಮಗುವಿಗೆ ಬಾಟಲಿ ಹಾಲುಣಿಸುವುದನ್ನು ಮತ್ತು ಇಂಥ ಚಿತ್ರಗಳನ್ನು ಪೋಸ್ಟ್ ಮಾಡುವುದನ್ನು ನಿಲ್ಲಿಸಿ. ಇದು ಹಾರ್ದಿಕ್ ಪಾಂಡ್ಯ ಅವರಿಗೆ ನನ್ನ ಕಳಕಳಿಯ ಮನವಿ, ಸಮಾಜಕ್ಕೆ ಕೆಟ್ಟ ಸಂದೇಶವನ್ನು ನೀಡಬೇಡಿ. ಬಾಟಲಿಗಳು ಮಗುವನ್ನು ಕೊಲ್ಲುವ ಯಂತ್ರಗಳು. ಮಗುವಿನ ತಾಯಿ ಇರುವಾಗ ಎದೆಹಾಲನ್ನೇ ಉಣಿಸಬೇಕು’ ಎಂದು ಪೌಷ್ಟಿಕತೆ ತಜ್ಞೆ ಅಂಬಿಕಾ ದತ್ ಎಂಬವರು ಟ್ವೀಟಿಸಿದ್ದಾರೆ.
ಹಾರ್ದಿಕ್ ಪಾಂಡ್ಯರ ಪೋಸ್ಟ್‌ಗೆ ಹಲವರು ನೇರವಾಗಿ ಪ್ರತಿಕ್ರಿಯೆಯನ್ನೂ ಹಾಕಿದ್ದು, ‘ಮಗು ಜುಲೈ 30ರಂದು ಜನಿಸಿದೆ. ಅಂದರೆ ಮಗುವಿಗೆ ಇನ್ನೂ 6 ತಿಂಗಳು ಪೂರ್ಣಗೊಂಡಿಲ್ಲ. ಹೀಗಾಗಿ ಮಗುವಿಗೆ ಈ ಸಮಯದಲ್ಲಿ ಎದೆಹಾಲಿನ ಹೊರತಾಗಿ ಬೇರೆನನ್ನೂ ನೀಡಬಾರದು. ಜನರು ನಿಮ್ಮನ್ನು ಹಿಂಬಾಲಿಸುತ್ತಾರೆ. ಹೀಗಾಗಿ ತಂದೆಯ ಕರ್ತವ್ಯವನ್ನು ಸರಿಯಾಗಿಯೇ ನಿರ್ವಹಿಸಿ’ ಎಂದು ಬುದ್ದಿಮಾತು ಹೇಳಿದ್ದಾರೆ.
ಸೆಲೆಬ್ರಿಟಿ ಕ್ರಿಕೆಟಿಗರಾಗಿರುವ ನೀವು 6 ತಿಂಗಳು ಒಳಗಿನ ಮಗುವಿಗೆ ಎದೆಹಾಲಿಗೆ ಬದಲಾಗಿ ಬಾಟಲಿ ಹಾಲುಣಿಸುವುದನ್ನು ಪ್ರೇರೇಪಿಸಬಾರದು. ಇತರ ಹೆತ್ತವರೂ ನಿಮ್ಮನ್ನು ಅನುಸರಿಸಿದರೆ ಮಕ್ಕಳು ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಇನ್ನು ಕೆಲವರು ಹಾರ್ದಿಕ್ ಪಾಂಡ್ಯರನ್ನು ದೂರಿದ್ದಾರೆ.
‘ನಿಮ್ಮ ಮಗುವಿಗೆ ಸಾಧ್ಯವಾದಷ್ಟು ತಾಯಿಯ ಎದೆಹಾಲು ಸಿಗುವಂತೆ ಮಾಡಿ. ಪ್ರತಿ ಮಗುವಿಗೆ ತಾಯಿಯ ಹಾಲು ಪ್ರಮುಖವಾದುದು’ ಎಂದು ಇನ್ನೂ ಕೆಲವರು ಕಿವಿಮಾತು ಹೇಳಿದ್ದಾರೆ.
‘ಡಿಯರ್ ಹಾರ್ದಿಕ್ ಪಾಂಡ್ಯ ಮಗುವಿಗೆ ಬಾಟಲಿ ಹಾಲುಣಿಸುವುದು ಆರೋಗ್ಯಕ್ಕೆ ಹಾನಿಕರ. ಇದು ಸರಿಯಾದ ಮಾಹಿತಿ ಅಲ್ಲ ಎನಿಸಿದರೆ, ಬೇರೆಡೆಯಿಂದ ಖಚಿತ ಮಾಡಿಕೊಳ್ಳಿ. ಮಗು ತಾಯಿಯ ಹಾಲು ಕುಡಿಯುವಂತೆ ಮಾಡುವುದು ತಂದೆಯ ನಿಜವಾದ ಕರ್ತವ್ಯ’ ಎಂದು ಡಾ. ಸತೀಶ್ ತಿವಾರಿ ಎಂಬವರು ಕಾಮೆಂಟ್ ಹಾಕಿದ್ದಾರೆ.
ಇನ್ನು ಕೆಲವರು ಹಾರ್ದಿಕ್ ಪಾಂಡ್ಯ ಪತ್ನಿಯನ್ನೂ ದೂರಿದ್ದು, ‘ನಿಮ್ಮ ಪತ್ನಿಯ ಫಿಗರ್ ಕಾಪಾಡಿಕೊಳ್ಳುವ ಸಲುವಾಗಿ ಬಾಟಲಿ ಹಾಲು ನೀಡಬೇಡಿ. ಇದು ನಿಜಕ್ಕೂ ಉತ್ತಮ ನಡೆಯಲ್ಲ’ ಎಂದಿದ್ದಾರೆ. ಇನ್ನು ಕೆಲವರು ಬಾಟಲಿಗೆ ಬದಲಾಗಿ ಸ್ಪೂನ್ ಮೂಲಕ ಹಾಲುಣಿಸಿ. ಇದು ಕಷ್ಟಕರವಾದರೂ, ಬಾಟಲಿ ಹಾಲಿಗಿಂತ ಉತ್ತಮವಾದುದು ಎಂದಿದ್ದಾರೆ.