

ನಾರ್ತ್‌ಸೌಂಡ್: ಉಪನಾಯಕ ಹಾರ್ದಿಕ್ ಪಾಂಡ್ಯ (50* ರನ್, 27 ಎಸೆತ, 4 ಬೌಂಡರಿ, 3 ಸಿಕ್ಸರ್, 32ಕ್ಕೆ 1 ವಿಕೆಟ್) ಆಲ್ರೌಂಡ್ ಆಟ ಹಾಗೂ ಕುಲದೀಪ್ ಯಾದವ್ (19ಕ್ಕೆ 3) ಬಿಗಿ ಬೌಲಿಂಗ್ ದಾಳಿಯ ನೆರವಿನಿಂದ ಟೀಮ್ ಇಂಡಿಯಾ, ಐಸಿಸಿ ಟಿ20 ವಿಶ್ವಕಪ್ ಸೂಪರ್-8 ಹಂತದ ತನ್ನ 2ನೇ ಪಂದ್ಯದಲ್ಲಿ ಬಾಂಗ್ಲಾದೇಶ ಎದುರು 50 ರನ್‌ಗಳ ಬೃಹತ್ ಗೆಲುವು ದಾಖಲಿಸಿದೆ. ಇದರೊಂದಿಗೆ ರೋಹಿತ್ ಶರ್ಮ ಪಡೆ ಅಜೇಯ ಓಟವನ್ನು 6ನೇ ಪಂದ್ಯಕ್ಕೆ ವಿಸ್ತರಿಸಿದ್ದು, ಸೆಮಿೈನಲ್ ಸನಿಹಕ್ಕೇರಿದೆ. ಭಾನುವಾರ ಅ್ಘಾನಿಸ್ತಾನ ಎದುರು ಆಸ್ಟ್ರೇಲಿಯಾ ಗೆಲುವು ದಾಖಲಿಸಿದರೆ, ಟೀಮ್ ಇಂಡಿಯಾ ಸೆಮೀಸ್ ಸ್ಥಾನ ಖಾತ್ರಿಯಾಗಲಿದೆ.
ವಿವ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಗ್ರೂಪ್-1ರ ಕಾದಾಟದಲ್ಲಿ ಟಾಸ್ ಸೋತ ಭಾರತ ಮೊದಲು ಬ್ಯಾಟಿಂಗ್‌ಗೆ ಇಳಿಯಿತು. ಅಗ್ರ ಕ್ರಮಾಂಕದ ಬ್ಯಾಟರ್‌ಗಳ ಉತ್ತಮ ಆರಂಭ ನಡುವೆಯೂ ಒಂದು ಹಂತದಲ್ಲಿ ಕುಸಿತ ಕಂಡಿತು. ಆಗ ಜತೆಯಾದ ಶಿವಂ ದುಬೆ (34) ಹಾಗೂ ಹಾರ್ದಿಕ್ ಪಾಂಡ್ಯ ನಡೆಸಿದ ಜತೆಯಾಟದ ನೆರವಿನಿಂದ 5 ವಿಕೆಟ್‌ಗೆ 196 ರನ್ ಪೇರಿಸಿತು. ಪ್ರತಿಯಾಗಿ ನಾಯಕ ನಜ್ಮೂಲ್ ಹೊಸೈನ್ ಶಾಂಟೋ (40) ಹೋರಾಟದ ನಡುವೆಯೂ ಬಾಂಗ್ಲಾದೇಶ, 8 ವಿಕೆಟ್‌ಗೆ 146 ರನ್‌ಗಳಿಸಲಷ್ಟೇ ಶಕ್ತವಾಯಿತು.
ಕುಲದೀಪ್ ಬ್ರೇಕ್: ಬೃಹತ್ ಮೊತ್ತದ ಚೇಸಿಂಗ್‌ಗೆ ಇಳಿದ ಲಿಟನ್ ದಾಸ್ (13) ಹಾಗೂ ತಂಜಿದ್ ಹಸನ್ (29) ಮೊದಲ ವಿಕೆಟ್‌ಗೆ 27 ಎಸೆತಗಳಲ್ಲಿ 35 ರನ್‌ಗಳ ಆರಂಭ ಒದಗಿಸಿದರು.ಬಳಿಕ ಶಾಂಟೋ- ತಂಜಿದ್ 2ನೇ ವಿಕೆಟ್‌ಗೆ 31 ಎಸೆತಗಳಲ್ಲಿ 31 ರನ್‌ಗಳಿಸಿ ಪ್ರತಿರೋಧ ತೋರಿದರು. ತೌಹಿದ್ ಹೃದೂಯ್ (4), ಶಕೀಬ್ (11) ವಿಕೆಟ್ ಪಡೆದ ಕುಲದೀಪ್ ಬಾಂಗ್ಲಾ ಬೆನ್ನೆಲುಬು ಮುರಿದರು. ನಿರಂತರ ವಿಕೆಟ್ ಕಳೆದುಕೊಂಡ ಬಾಂಗ್ಲಾ ಚೇಸಿಂಗ್‌ನಲ್ಲಿ ಪರದಾಡಿತು. ಕೊನೆಯಲ್ಲಿ ರಿಷದ್ ಹೊಸೈನ್ (24) ಅಂತರ ತಗ್ಗಿಸಿದರೆ, ಅರ್ಷದೀಪ್ ಸಿಂಗ್ (30ಕ್ಕೆ 2) ಹಾಗೂ ಜಸ್‌ಪ್ರೀತ್ ಬುಮ್ರಾ (13ಕ್ಕೆ 2) ಕಡಿವಾಣ ಹೇರಿದರು.