ಟೀಮ್ ಇಂಡಿಯಾ ಪಾಕ್​ ನೆಲದಲ್ಲಿ ಆಡಲಿ ಆದ್ರೆ… ಹೀಗಿದೆ 'ಬಜ್ಜಿ' ವಿಧಿಸಿದ ಆ ಒಂದು ಷರತ್ತು!

ವಿಜಯವಾಣಿ (83)
Published on

ಲಾಹೋರ್​: 2025ರಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿ ಆತಿಥ್ಯ ವಹಿಸಿಕೊಂಡಿರುವ ಪಾಕಿಸ್ತಾನ, ಟೀಮ್ ಇಂಡಿಯಾವನ್ನು ತಮ್ಮ ನೆಲಕ್ಕೆ ಕರೆಸಿಕೊಳ್ಳಲು ಒಂದಲ್ಲ ಒಂದು ರೀತಿ ಕಸರತ್ತು ನಡೆಸುತ್ತಲೇ ಇದೆ. ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ನಡೆಯಲಿರುವ ಟೂರ್ನಿಗೆ ಭಾರತ ತಂಡವನ್ನು ಕಳಿಸಿಕೊಡಿ ಎಂದು ಪಿಸಿಬಿ ಈ ಹಿಂದೆಯೇ ಬಿಸಿಸಿಐಗೆ ಒತ್ತಾಯಿಸಿತ್ತು. ಆದ್ರೆ, ಇದಕ್ಕೆ ಕಿಂಚಿತ್ತು ಆಸ್ಪದ ನೀಡದ ಭಾರತೀಯ ಕ್ರಿಕೆಟ್ ಮಂಡಳಿ, ಯಾವುದೇ ಕಾರಣಕ್ಕೂ ಟೀಮ್ ಇಂಡಿಯಾ ಅಲ್ಲಿಗೆ ಬರೋದಿಲ್ಲ ಎಂದು ಖಡಕ್ ಆಗಿ ತಿಳಿಸಿತ್ತು. ಈ ವಿಚಾರ ದೊಡ್ಡ ವಿವಾದಕ್ಕೆ ತಿರುಗಿದ್ದು, ಮೆನ್​ ಇನ್​ ಬ್ಲ್ಯೂ ಪಡೆಯನ್ನು ಲಾಹೋರ್​ಗೆ ಕರೆತರುವ ಪಾಕ್​ನ ಎಲ್ಲಾ ಪ್ರಯತ್ನವೂ ಸದ್ಯ ವಿಫಲವಾಗಿದೆ. ಬಿಸಿಸಿಐ ಒಪ್ಪಲಿಲ್ಲ ಎಂದು ನೇರವಾಗಿ ಐಸಿಸಿಗೆ ಗಾಳ ಹಾಕಿದ್ದ ಪಿಸಿಬಿ​, ಈ ಪ್ರಯತ್ನದಲ್ಲೂ ಭಾರೀ ಮುಖಭಂಗ ಅನುಭವಿಸಿತು. ಸದ್ಯ ದಿಕ್ಕು ಕಾಣದೆ ಕುಳಿತಿರುವ ಪಾಕಿಸ್ತಾನ ಒಂದೆಡೆಯಾದರೆ, ಒಂದು ಷರತ್ತಿನ ಮೇರೆಗೆ ಭಾರತ ತಂಡವನ್ನು ಪಾಕ್​ಗೆ ಕಳಿಸಿಕೊಡಬಹುದು ಎಂದು ಟೀಮ್ ಇಂಡಿಯಾದ ಮಾಜಿ ಆಟಗಾರ ಹರ್ಭಜನ್ ಸಿಂಗ್ ಹೇಳಿಕೆ ಮತ್ತೊಂದೆಡೆ.

2025ರ ಚಾಂಪಿಯನ್ಸ್​ ಟ್ರೋಫಿ ಅತಿಥ್ಯ ವಹಿಸಿಕೊಂಡಿರುವ ಪಾಕಿಸ್ತಾನಕ್ಕೆ ಟೀಮ್ ಇಂಡಿಯಾವನ್ನು ಕಳಿಸಿಕೊಡಲು ಬಿಸಿಸಿಐ ಮತ್ತು ಐಸಿಸಿ ಒಪ್ಪಿಗೆ ಸೂಚಿಸಿಲ್ಲ. ಎರಡು ದೇಶಗಳ ನಡುವಿನ ರಾಜಕೀಯ ಒತ್ತಡಗಳು ಹಾಗೂ ಭದ್ರತೆ ಸಮಸ್ಯೆಗಳ ಹಿನ್ನಲೆ ಭಾರತ ತಂಡ ಅಲ್ಲಿಗೆ ಬರುವುದಿಲ್ಲ ಎಂದು ಭಾರತೀಯ ಕ್ರಿಕೆಟ್ ಮಂಡಳಿ ತಿಳಿಸಿತ್ತು. ಇನ್ನು ಈ ಮಧ್ಯೆ ಪಂದ್ಯವನ್ನು ಹೈಬ್ರಿಡ್​ ಮಾದರಿಯಲ್ಲಿ ಆಡಿಸಬೇಕೆಂಬ ಮಾತುಕತೆಗಳು ಕೂಡ ಜೋರಾಗಿಯೇ ಕೇಳಿಬಂದಿದೆ. ಇದೆಲ್ಲದರ ಕುರಿತು ಐಸಿಸಿ ಆಧ್ಯಕ್ಷ ಸ್ಥಾನಕ್ಕೆ ನೂತನವಾಗಿ ಆಯ್ಕೆಯಾಗಿರುವ ಜಯ್ ಷಾ ಏನು ಹೇಳಲಿದ್ದಾರೆ ಎಂಬುದು ಸದ್ಯ ಕುತೂಹಲ ಮೂಡಿಸಿದೆ.

ಇನ್ನು ಕ್ರಿಕೆಟ್ ಲೋಕದಲ್ಲಿ ಸದಾ ವಿವಾದಗಳಿಂದಲೇ ಮುನ್ನೆಲೆಗೆ ಬರುವ ಹರ್ಭಜನ್ ಸಿಂಗ್​, "ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡ ಪಾಕಿಸ್ತಾನಕ್ಕೆ ಹೋಗಬಾರದು. ಹೋಗುವುದಾದರೆ ಒಂದೇ ಒಂದು ಕಂಡೀಷನ್ ಮೇರೆಗೆ ಹೋಗಲಿ" ಎಂದಿದ್ದಾರೆ. "ಟೀಮ್ ಇಂಡಿಯಾಗೆ ಸಂಪೂರ್ಣ ಭದ್ರತೆ ನೀಡಲು ಪಾಕಿಸ್ತಾನ ಒಪ್ಪುವುದಾದರೆ ಮಾತ್ರ ನಮ್ಮವರನ್ನು ಅಲ್ಲಿಗೆ ಕಳುಹಿಸಿಕೊಡಬೇಕು. ಇಲ್ಲದಿದ್ದರೆ ಬೇಡ. ಈ ವಿಷಯವನ್ನು ಸರ್ಕಾರಕ್ಕೆ ಬಿಡಬೇಕು. ಅವರ ದೃಷ್ಟಿಕೋನ ಬೇರೆ, ನಮ್ಮ ದೃಷ್ಟಿಕೋನ ಬೇರೆ. ಈ ವಿಷಯದಲ್ಲಿ ಪಿಸಿಬಿ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡರೆ ಮಾತ್ರ ಕಳಿಸಿಕೊಡುವುದು ಸೂಕ್ತ. ನೀವು ಎಲ್ಲಿಯಾದರೂ ಕ್ರಿಕೆಟ್ ಆಡಿ, ಆದ್ರೆ ಭದ್ರತೆ ಮುಖ್ಯ" ಎಂದು ಬಜ್ಜಿ ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net