

ನವದೆಹಲಿ: ಶನಿವಾರ (ಜುಲೈ 12) ರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗರು ಅದ್ಭುತ ಪ್ರದರ್ಶನ ನೀಡುವ ಮೂಲಕ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ನಾಯಕತ್ವದಲ್ಲಿ ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ 2024 ಟ್ರೋಫಿ ಮುಡಿಗೇರಿಸಿಕೊಂಡಿತು. ಟ್ರೋಫಿ ಗೆಲ್ಲುತ್ತಿದ್ದಂತೆ ಭರ್ಜರಿ ಸಂಭ್ರಮಾಚರಣೆಯಲ್ಲಿ ತೊಡಗಿದ ಯುವರಾಜ್ ಸಿಂಗ್, ಹರ್ಭಜನ್ ಸಿಂಗ್ ಹಾಗೂ ಸುರೇಶ್ ರೈನಾ ವಿಭಿನ್ನ ರೀತಿಯಲ್ಲಿ ಕುಣಿದು ಕುಪ್ಪಳಿಸಿದ್ದರು. ಆದ್ರೆ, ಇದೇ ಈಗ ಮಾಜಿ ಕ್ರಿಕೆಟಿಗರಿಗೆ ದೊಡ್ಡ ಸಂಕಷ್ಟ ತಂದೊಡ್ಡಿದೆ.
ಹರ್ಭಜನ್ ಸಿಂಗ್, ಸುರೇಶ್ ರೈನಾ ವಿಕಲಾಂಗ ವರ್ಗವನ್ನು ತಮ್ಮ ವಿಭಿನ್ನ ನೃತ್ಯದ ಮೂಲಕ ಅವಮಾನಿಸಿದ್ದಾರೆ ಎಂದ ಪ್ಯಾರಾ ಬ್ಯಾಡ್ಮಿಂಟನ್ ಸ್ಟಾರ್ ಮಾನ್ಸಿ ಜೋಶಿ, ಯುವಿ, ಹರ್ಭಜನ್ ಸಿಂಗ್ ಮತ್ತು ಸುರೇಶ್ ರೈನಾ ವಿರುದ್ಧ ತೀವ್ರ ಕಿಡಿಕಾರಿದ್ದಾರೆ. ಈ ಡ್ಯಾನ್ಸ್ನಿಂದ ವಿಕಲಾಂಗರನ್ನು ಅವಮಾನಿಸಲಾಗಿದೆ ಎಂದು ಮಾಜಿ ಕ್ರಿಕೆಟಿಗರನ್ನು ತರಾಟೆಗೆ ತೆಗೆದುಕೊಂಡ ಅವರು, ಹಿರಿಯ ಆಟಗಾರರು ಅಂದಮೇಲೆ ಅವರಿಗೆ ಅವರದ್ದೇ ಆದ ಜವಾಬ್ದಾರಿ ಇರುತ್ತದೆ. ನಿಮ್ಮಿಂದ ಹೆಚ್ಚಿನ ಜವಾಬ್ದಾರಿ ನಿರೀಕ್ಷಿಸುತ್ತೇವೆ ಎಂದು ತಮ್ಮ ಅಸಮಾಧಾನವನ್ನು ಮುಕ್ತವಾಗಿ ಹಂಚಿಕೊಂಡರು. ಮಾನ್ಸಿ ಹೇಳಿಕೆಯ ಬೆನ್ನಲ್ಲೇ ಹರ್ಭಜನ್ ಸಿಂಗ್ ಶೇರ್ ಮಾಡಿದ್ದ ರೀಲ್ಸ್ ವಿಡಿಯೋ ವಿರುದ್ಧ ಪ್ರಕರಣ ದಾಖಲಾಗಿದೆ.
ವಿಕಲಾಂಗರ ಪರ ಮಾನ್ಸಿ ಧ್ವನಿ ಎತ್ತುತ್ತಿದ್ದಂತೆ ಅನೇಕರು ಅವರ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿ, ಹರ್ಭಜನ್ ಸಿಂಗ್ ಸೇರಿದಂತೆ ಮಾಜಿ ಕ್ರಿಕೆಟಿಗರನ್ನು ಹಿಗ್ಗಾಮುಗ್ಗಾ ಜಾಡಿಸಿದರು. ಪ್ಯಾರಾ ಬ್ಯಾಡ್ಮಿಂಟನ್ ತಾರೆ ಮಾನ್ಸಿ ಜೋಶಿ ಅವರ ಮಾತುಗಳನ್ನು ಆಲಿಸಿದ ಬೆನ್ನಲ್ಲೇ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದ ರೀಲ್ಸ್ ವಿಡಿಯೋವನ್ನು ಬಜ್ಜಿ ಡಿಲೀಟ್ ಮಾಡಿದ್ದಾರೆ. ಇದಾದ ಬಳಿಕ ಜನರನ್ನು ಕ್ಷಮೆಯಾಚಿಸಿದ ಹರ್ಭಜನ್ ಸಿಂಗ್, ಇದನ್ನೆಲ್ಲಾ ಇಲ್ಲಿಗೆ ನಿಲ್ಲಿಸಿ, ಮುಂದುವರೆಸಬೇಡಿ ಎಂದು ಹೇಳಿದರು.
"ಇಂಗ್ಲೆಂಡ್‌ನಲ್ಲಿ ಚಾಂಪಿಯನ್‌ಶಿಪ್ ಗೆದ್ದ ನಂತರ ಸಾಮಾಜಿಕ ಜಾಲತಾಣದಲ್ಲಿ 'ತೌಬಾ ತೌಬಾ' ಹಾಡಿಗೆ ನಾವು ಕುಣಿದ ರೀತಿಯನ್ನು ಹಲವರು ಖಂಡಿಸಿದ್ದೀರಿ. ಇದಕ್ಕೆ ಸಂಬಂಧಿಸಿದಂತೆ ಹಲವರು ಅಸಮಾಧಾನ ಕೂಡ ವ್ಯಕ್ತಪಡಿಸಿದ್ದೀರಾ. ನಿಮ್ಮ ಬಳಿ ಒಂದು ವಿಚಾರ ಸ್ಪಷ್ಟಪಡಿಸಲು ಬಯಸುತ್ತೇನೆ. ನಾವು ಯಾರ ಭಾವನೆಗಳನ್ನು ನೋಯಿಸಲು ಈ ವಿಡಿಯೋ ಮಾಡಿದ್ದಲ್ಲ. ನಾವು ಪ್ರತಿಯೊಬ್ಬ ವ್ಯಕ್ತಿ ಮತ್ತು ಸಮುದಾಯವನ್ನು ಗೌರವಿಸುತ್ತೇವೆ. ಇದನ್ನು ಮೀರಿಯೂ ಕೂಡ ನಮ್ಮಿಂದ ಯಾರಿಗಾದರೂ ನೋವಾಗಿದೆ ಎಂದಾದ್ದಲ್ಲಿ ಖಂಡಿತ ಕ್ಷಮೆಕೋರುತ್ತೇನೆ. ದಯವಿಟ್ಟು ಇದನ್ನೆಲ್ಲಾ ಇಲ್ಲಿಗೆ ನಿಲ್ಲಿಸಿ, ಮುಂದೇ ಸಾಗೋಣ ಎಂದು ಬಜ್ಜಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ,(ಏಜೆನ್ಸೀಸ್).