ಕ್ರಿಕೆಟ್ ತಾರೆಯರಿಗೆ ಹೊಸ ವರ್ಷದ ಹರ್ಷ

sports new year
Published on

ನವದೆಹಲಿ: ಟಿ20 ವಿಶ್ವಕಪ್​ನಂಥ ಮಹತ್ವದ ಟೂರ್ನಿಗಳಿಗೆ ವೇದಿಕೆಯಾಗಲಿರುವ 2020ಕ್ಕೆ ಭಾರತದ ಕ್ರಿಕೆಟಿಗರಿಂದ ಸಂಭ್ರಮದ ಸ್ವಾಗತ ದೊರೆತಿದೆ. ವರ್ಷಾರಂಭದಲ್ಲಿ ಕ್ರಿಕೆಟ್ ಚಟುವಟಿಕೆಗಳಿಂದ ಬಿಡುವು ಪಡೆದುಕೊಂಡಿರುವ ಆಟಗಾರರು, ಕುಟುಂಬ ಸದಸ್ಯರು ಮತ್ತು ಆಪ್ತರೊಂದಿಗೆ 2020ರ ಆರಂಭವನ್ನು ಆನಂದಿಸಿದ್ದಾರೆ.

ಜ. 5ರಿಂದ ಶ್ರೀಲಂಕಾ ವಿರುದ್ಧದ ಟಿ20 ಸರಣಿಯೊಂದಿಗೆ ಹೊಸ ವರ್ಷದ ಸವಾಲಿಗೆ ಸಜ್ಜಾಗಲಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಸ್ವಿಜರ್ಲೆಂಡ್​ನಲ್ಲಿ ಪತ್ನಿ ಅನುಷ್ಕಾ ಶರ್ಮ ಜತೆಗೆ ವಿಶ್ರಾಂತಿಯ ದಿನಗಳನ್ನು ಕಳೆದಿದ್ದಾರೆ. ಹೀಗಾಗಿ ಅನುಷ್ಕಾ ಜತೆಗಿರುವ ಚಿತ್ರದೊಂದಿಗೆ ಕೊಹ್ಲಿ ಟ್ವಿಟರ್​ನಲ್ಲಿ ಹೊಸ ವರ್ಷದ ಶುಭಾಶಯ ಹೇಳಿದ್ದಾರೆ. ರಣಜಿ ಟ್ರೋಫಿ ಪಂದ್ಯದಿಂದಲೂ ವಿಶ್ರಾಂತಿ ಪಡೆದಿರುವ ಟೆಸ್ಟ್ ಆರಂಭಿಕ ಹಾಗೂ ಕನ್ನಡಿಗ ಮಯಾಂಕ್ ಅಗರ್ವಾಲ್, ಬೆಂಗಳೂರಿನ ಮನೆಯಲ್ಲೇ ಪತ್ನಿ ಆಶಿತಾ ಜತೆ ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ. ಗೆಳತಿ, ನಟಿ ಆಥಿಯಾ ಶೆಟ್ಟಿ ಜತೆ ಥಾಯ್ಲೆಂಡ್ ಪ್ರವಾಸದಲ್ಲಿರುವ ಕನ್ನಡಿಗ ಕೆಎಲ್ ರಾಹುಲ್, ಅಲ್ಲೇ ಹೊಸ ವರ್ಷವನ್ನು ಸಂಭ್ರಮಿಸಿದ್ದಾರೆ.

ಭವಿಷ್ಯದ ಬಗ್ಗೆ ಇನ್ನೂ ಗುಟ್ಟುಬಿಟ್ಟು ಕೊಡದಿರುವ ಮಾಜಿ ನಾಯಕ ಎಂಎಸ್ ಧೋನಿ, ಪತ್ನಿ ಸಾಕ್ಷಿ ಜತೆಗೆ ಪುಣೆಯಲ್ಲಿ ಹೊಸ ವರ್ಷದ ಸಂಭ್ರಮ ಆಚರಿಸಿದ್ದಾರೆ. ಧೋನಿ ಜತೆಗಿರುವ ಚಿತ್ರವನ್ನು ಇನ್​ಸ್ಟಾಗ್ರಾಮ್ಲ್ಲಿ ಪ್ರಕಟಿಸಿರುವ ಸಾಕ್ಷಿ, ‘ಇವರೊಂದಿಗೆ 2020’ ಎಂದು ಅಡಿಬರಹ ನೀಡಿದ್ದಾರೆ. ಧೋನಿ ಇತ್ತೀಚೆಗೆ, ಜನವರಿಯಲ್ಲಿ ಭವಿಷ್ಯದ ಬಗ್ಗೆ ಹೇಳುವೆ ಎಂದಿದ್ದರು. -ಏಜೆನ್ಸೀಸ್

ಸವಾಲಿಗೆ ಸಿದ್ಧರಾಗಿ: ಹೊಸ ವರ್ಷ ಸ್ವಾಗತಕ್ಕೆ ಮುನ್ನ ನಟ ಶಾರುಖ್ ಖಾನ್ ಮತ್ತು ನಟಿ ರವೀನಾ ಟಂಡನ್ ಜತೆಗಿರುವ ಚಿತ್ರಗಳನ್ನು ಟ್ವಿಟರ್​ನಲ್ಲಿ ಪ್ರಕಟಿಸಿ ಸುದ್ದಿಯಾಗಿದ್ದ ಟೀಮ್ ಇಂಡಿಯಾ ಕೋಚ್ ರವಿಶಾಸ್ತ್ರಿ, ‘ಹೊಸ ಸವಾಲುಗಳಿಗೆ ಸಿದ್ಧರಾಗಿ, 2020 ವಿಷನ್​ನೊಂದಿಗೆ ನಿಮ್ಮನ್ನು ಮತ್ತೆ ಭೇಟಿಯಾಗುವೆ’ ಎಂದು ಆಟಗಾರರಿಗೆ ಕಿವಿಮಾತು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net