

ಹ್ಯಾಮಿಲ್ಟನ್: ಆತಿಥೇಯ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆರಂಭಿಕ ಸ್ಥಾನಗಳಿಗೆ ರೇಸ್ನಲ್ಲಿರುವ ಮೂವರು ಯುವ ಆಟಗಾರರಾದ ಪೃಥ್ವಿ ಷಾ, ಮಯಾಂಕ್ ಅಗರ್ವಾಲ್ ಹಾಗೂ ಶುಭಮಾನ್ ಗಿಲ್ ದೊಡ್ಡಮಟ್ಟದ ವೈಫಲ್ಯ ಕಂಡ ನಡುವೆಯೂ ಭಾರತ ತಂಡ ನ್ಯೂಜಿಲೆಂಡ್ ಇಲೆವೆನ್ ವಿರುದ್ಧದ ತ್ರಿದಿನ ಅಭ್ಯಾಸ ಪಂದ್ಯದಲ್ಲಿ ಚೇತರಿಕೆ ಕಾಣುವಲ್ಲಿ ಯಶ ಕಂಡಿದೆ. ಇದಕ್ಕೆ ಕಾರಣವಾಗಿದ್ದು ಹನುಮ ವಿಹಾರಿ ಆಕರ್ಷಕ ಶತಕ ಹಾಗೂ ಚೇತೇಶ್ವರ ಪೂಜಾರ ಆಡಿದ 211 ಎಸೆತಗಳ ತಾಳ್ಮೆಯ ಇನಿಂಗ್ಸ್.
ಸೆಡ್ಡನ್ ಪಾರ್ಕ್ ಮೈದಾನದಲ್ಲಿ ಶುಕ್ರವಾರ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿದ ಭಾರತ ತಂಡ, 78.5 ಓವರ್ಗಳಲ್ಲಿ 263 ರನ್ಗೆ ಆಲೌಟ್ ಆಯಿತು. ವೇಗದ ಬೌಲಿಂಗ್ಗೆ ನೆರವೀಯುವ ಪಿಚ್ನಲ್ಲಿ ಪೃಥ್ವಿ ಷಾ ಹಾಗು ಶುಭಮಾನ್ ಗಿಲ್ ಶೂನ್ಯಕ್ಕೆ ಔಟಾದರೆ, ಮಯಾಂಕ್ ಅಗರ್ವಾಲ್ 1 ರನ್ ಬಾರಿಸಿದರು. 5 ರನ್ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ವೇಳೆ ಚೇತೇಶ್ವರ ಪೂಜಾರ (93 ರನ್, 21 1 ಎಸೆತ, 11 ಬೌಂಡರಿ, 1 ಸಿಕ್ಸರ್) ಹಾಗೂ ಹನುಮ ವಿಹಾರಿ (101*ರನ್, 182 ಎಸೆತ, 10 ಬೌಂಡರಿ, 3 ಸಿಕ್ಸರ್) 5ನೇ ವಿಕೆಟ್ಗೆ 195 ರನ್ ಜತೆಯಾಟವಾಡಿ ಚೇತರಿಕೆ ನೀಡಿದರು. ನ್ಯೂಜಿಲೆಂಡ್ ಇಲೆವೆನ್ ಪರ ಸ್ಕಾಟ್ ಕಗಿಲಿನ್ 40 ರನ್ಗೆ ಮೂರು ವಿಕೆಟ್ ಉರುಳಿಸಿದರೆ, ಇಶ್ ಸೋಧಿ 3 ವಿಕೆಟ್ ಉರುಳಿಸಿ ಮಿಂಚಿದರು.
ಅನುಭವಿ ಮಧ್ಯಮ ಕ್ರಮಾಂಕದ ಆಟಗಾರ ಅಜಿಂಕ್ಯ ರಹಾನೆ 18 ರನ್ ಬಾರಿಸಿದರೆ, ರಿಷಭ್ ಪಂತ್ 7, ವೃದ್ಧಿಮಾನ್ ಸಾಹ ಶೂನ್ಯಕ್ಕೆ ಔಟಾದರು.ಕೆಳ ಕ್ರಮಾಂಕದ ಬ್ಯಾಟಿಂಗ್ಗಿಂತ ಮೂವರು ಆರಂಭಿಕರ ಕಳಪೆ ನಿರ್ವಹಣೆ ಟೀಮ್ ಮ್ಯಾನೇಜ್ವೆುಂಟ್ನ ಆತಂಕಕ್ಕೆ ಕಾರಣವಾಗಿದೆ. ಷಾ ಹಾಗೂ ಶುಭಮಾನ್ ಗಿಲ್, ಹೆಚ್ಚುವರಿ ಬೌನ್ಸ್ ಆಗಿ ಬಂದ ಚೆಂಡನ್ನು ಎದುರಿಸಲು ವಿಫಲವಾದರೆ, ಮಯಾಂಕ್ ಅಗರ್ವಾಲ್ ಚೆಂಡಿನ ಚಲನೆಯನ್ನು ಅಂದಾಜಿಸಲಾಗದೆ ವಿಕೆಟ್ ಒಪ್ಪಿಸಿದರು. -ಏಜೆನ್ಸೀಸ್
ನೆಟ್ಸ್ನಲ್ಲಿ ವಿರಾಟ್ ಕೊಹ್ಲಿ ಅಭ್ಯಾಸ
ನಾಯಕ ವಿರಾಟ್ ಕೊಹ್ಲಿ ಅಭ್ಯಾಸ ಪಂದ್ಯದಲ್ಲಿ ಬ್ಯಾಟಿಂಗ್ಗೆ ಇಳಿಯಲಿಲ್ಲ. ಅದರ ಬದಲು ನೆಟ್ಸ್ ಅಭ್ಯಾಸದಲ್ಲಿ ಬೌಲರ್ಗಳಿಂದ ಚೆಂಡನ್ನು ಎದುರಿಸುವ ಮೂಲಕ ಟೆಸ್ಟ್ ಸರಣಿಗೆ ಸಿದ್ಧತೆ ನಡೆಸಿದರು.