ಭಾರತ-ನ್ಯೂಜಿಲೆಂಡ್ ನಡುವಿನ ಮೂರನೇ ಏಕದಿನಕ್ಕೂ ಮಳೆ ಭೀತಿ!

ಹ್ಯಾಮಿಲ್ಟನ್​ನಲ್ಲೂ ವರುಣನ ಅಡಚಣೆ ಸಾಧ್ಯತೆ
cricket
ಮೋಡ ಆವೃತ್ತವಾಗಿರುವ ಹ್ಯಾಮಿಲ್ಟನ್​ನ ಸೆಡ್ಡನ್ ಪಾರ್ಕ್​ ಮೈದಾನಏಜೆನ್ಸಿ
Published on: 

ಹ್ಯಾಮಿಲ್ಟನ್​: ನ್ಯೂಜಿಲೆಂಡ್​ ವಿರುದ್ಧದ ಮೊದಲ 2 ಏಕದಿನ ಪಂದ್ಯಗಳಲ್ಲಿ ಭಾರತ ತಂಡ ಮಳೆ ಅಡಚಣೆಯ ನಡುವೆಯೂ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿತ್ತು. ಇದೀಗ ಸರಣಿಯ ಮೂರನೇ ಏಕದಿನ ಪಂದ್ಯಕ್ಕೂ ಮಳೆ ಅಡಚಣೆ ಭೀತಿ ಎದುರಾಗಿದ್ದು, ಈ ಬಾರಿ ಸ್ಪಷ್ಟ ಫಲಿತಾಂಶ ಹೊರಹೊಮ್ಮಲು ವರುಣ ದೇವ ಅವಕಾಶ ಕಲ್ಪಿಸಬಹುದೇ ಎಂಬ ಅನುಮಾನವೂ ಮೂಡಿದೆ.

ಮೂರನೇ ಏಕದಿನ ಪಂದ್ಯ ಮಂಗಳವಾರ ಹ್ಯಾಮಿಲ್ಟನ್​ನ ಸೆಡ್ಡನ್​ ಪಾರ್ಕ್​ ಮೈದಾನದಲ್ಲಿ ನಿಗದಿಯಾಗಿದ್ದು, ಈ ಪಂದ್ಯ ಗೆದ್ದುಕೊಂಡರೆ ಸರಣಿ ವಶಪಡಿಸಿಕೊಳ್ಳುವ ಅವಕಾಶ ಶುಭಮಾನ್​ ಗಿಲ್​ ಬಳಗದ ಮುಂದಿದೆ. ಆದರೆ ಭಾನುವಾರ ಭಾರತ ತಂಡ ಇಲ್ಲಿಗೆ ಆಗಮಿಸಿದಾಗಲೇ ಮಳೆಯ ಸ್ವಾಗತ ದೊರೆತಿದ್ದು, ಸೋಮವಾರ ಮತ್ತು ಭಾನುವಾರ ಇಲ್ಲಿ ಮತ್ತಷ್ಟು ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಸಾಮಾನ್ಯವಾಗಿ ನ್ಯೂಜಿಲೆಂಡ್​ನಲ್ಲಿ ನವೆಂಬರ್​ನಲ್ಲಿ ಮಳೆಯಾಗುವುದಿಲ್ಲ. ಆದರೆ ಈ ಬಾರಿ ನವೆಂಬರ್​ ಆರಂಭದಿಂದಲೂ ನ್ಯೂಜಿಲೆಂಡ್​ನೆಲ್ಲೆಡೆ ಮಳೆಯಾಗುತ್ತಿದೆ. ಇದರಿಂದ ತಂಪಾದ ವಾತಾವರಣ ಇರುವುದರಿಂದಲೇ ಸರಣಿಯ ಮೊದಲ 2 ಪಂದ್ಯಗಳ ವೇಳೆಯೂ ಪಿಚ್​ ಬೌಲರ್​ಗಳಿಗೆ ಹೆಚ್ಚಿನ ಸಹಕಾರ ನೀಡಿದೆ. ಆತಿಥೇಯ ನ್ಯೂಜಿಲೆಂಡ್​ ತಂಡವೇ ಮೊದಲ 2 ಏಕದಿನಗಳಲ್ಲೂ ಸಂಪೂರ್ಣ 50 ಓವರ್​ ಬ್ಯಾಟಿಂಗ್​ ಮಾಡಲು ಶಕ್ತವಾಗಿರಲಿಲ್ಲ. ಇದೇ ಮೈದಾನಗಳಲ್ಲಿ ಆಡಿದ ಟಿ20 ಪಂದ್ಯಗಳಲ್ಲಿ ರನ್​ಪ್ರವಾಹ ಹರಿದಿತ್ತು ಎಂಬುದು ಗಮನಾರ್ಹ.

ಅಕಾಲಿಕ ಮಳೆಯಿಂದಾಗಿ ಹ್ಯಾಮಿಲ್ಟನ್​ನಲ್ಲಿ ಪಂದ್ಯಕ್ಕೆ ಪಿಚ್​ ಸಿದ್ಧಪಡಿಸಲು ಕೂಡ ತೊಂದರೆಯಾಗಿದೆ ಎಂದು ಸೆಡ್ಡನ್​ ಪಾರ್ಕ್​ನ ಪಿಚ್​ ಕ್ಯುರೇಟರ್​ ಕರ್ಲ್​ ಜಾನ್ಸನ್​ ತಿಳಿಸಿದ್ದಾರೆ. ಆದರೆ ಮಳೆ ಬಂದರೂ ಮೈದಾನವನ್ನು ಬೇಗನೆ ಪಂದ್ಯಕ್ಕೆ ಸಜ್ಜುಗೊಳಿಸಬಹುದಾದ ಒಳಚರಂಡಿ ವ್ಯವಸ್ಥೆ ಇದೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.

ಆಸೀಸ್​ ದಾಖಲೆ ಮುರಿದ ಭಾರತ!

ಭಾರತ ತಂಡ ಹಾಲಿ ವರ್ಷ ಎಲ್ಲ ಮಾದರಿಯ ಕ್ರಿಕೆಟ್​ ಸೇರಿ ನ್ಯೂಜಿಲೆಂಡ್​ ವಿರುದ್ಧ ಒಟ್ಟಾರೆ 11 ಗೆಲುವು ದಾಖಲಿಸಿದೆ. ಈ ಮೂಲಕ ರಿಕಿ ಪಾಂಟಿಂಗ್​ ಸಾರಥ್ಯದ ಆಸ್ಟ್ರೆಲಿಯಾ ತಂಡ 2005ರಲ್ಲಿ ನ್ಯೂಜಿಲೆಂಡ್​ ವಿರುದ್ಧ ಒಟ್ಟು 10 ಗೆಲುವು ಸಾಧಿಸಿದ್ದ ದಾಖಲೆಯನ್ನು ಭಾರತ ಮುರಿದಿದೆ. ಆಸ್ಟ್ರೆಲಿಯಾ 21 ವರ್ಷಗಳ ಹಿಂದೆ 12 ಪಂದ್ಯಗಳಲ್ಲೇ 10 ಗೆಲುವು (ಟಿ20ಯಲ್ಲಿ 1, ಏಕದಿನದಲ್ಲಿ 7, ಟೆಸ್ಟ್​ನಲ್ಲಿ 2) ಸಾಧಿಸಿದ್ದರೆ, ಭಾರತ ತಂಡ 16 ಪಂದ್ಯಗಳಲ್ಲಿ 11 ಗೆಲುವು ಸಾಧಿಸಿದೆ. ಭಾರತ ಹಾಲಿ ವರ್ಷ ಕಿವೀಸ್​ ವಿರುದ್ಧ ಆಡಿದ 11 ಟಿ20 ಪಂದ್ಯಗಳಲ್ಲಿ 8 ಗೆಲುವು ಸಾಧಿಸಿದ್ದರೆ, ಏಕದಿನದಲ್ಲಿ 5ರಲ್ಲಿ 3 ಗೆಲುವು ಸಾಧಿಸಿದೆ.