

ರೋಮ್: ರೊಮೆನಿಯಾದ ಟೆನಿಸ್ ತಾರೆ ಸಿಮೋನಾ ಹಲೆಪ್ ಫ್ರೆಂಚ್ ಓಪನ್ ಗ್ರಾಂಡ್ ಸ್ಲಾಂ ಟೂರ್ನಿಗೆ ಪೂರ್ವಭಾವಿಯಾಗಿ ಇಟಾಲಿಯನ್ ಓಪನ್ ಪ್ರಶಸ್ತಿ ಜಯಿಸುವ ಮೂಲಕ ಭರ್ಜರಿ ಸಿದ್ಧತೆ ನಡೆಸಿದ್ದಾರೆ.
ಅಗ್ರ ಶ್ರೇಯಾಂಕಿತೆ ಸಿಮೋನಾ ಹಲೆಪ್ ಸೋಮವಾರ ನಡೆದ ಫೈನಲ್ ಪಂದ್ಯದಲ್ಲಿ 6-0, 2-1 ಸೆಟ್‌ಗಳಿಂದ ಮುನ್ನಡೆ ಸಾಧಿಸಿದಾಗ ಎದುರಾಳಿ ಜೆಕ್ ಗಣರಾಜ್ಯದ ಕ್ಯಾರೊಲಿನಾ ಪ್ಲಿಸ್ಕೋವಾ ಗಾಯದಿಂದಾಗಿ ಪಂದ್ಯ ತ್ಯಜಿಸಿದರು. ಪಂದ್ಯದ ಮೊದಲ ಸೆಟ್ ಸೋಲು ಕಂಡ ಬಳಿಕ ಪ್ಲಿಸ್ಕೋವಾ ಬೆನ್ನುನೋವಿನ ಸಮಸ್ಯೆ ಎದುರಿಸಿದರು.
ಹಲೆಪ್ ಈ ಮುನ್ನ 2017 ಮತ್ತು 2018ರ ಇಟಾಲಿಯನ್ ಓಪನ್ ಫೈನಲ್ ಪಂದ್ಯದಲ್ಲಿ ಎಲಿನಾ ಸ್ವಿಟೋಲಿನಾ ವಿರುದ್ಧ ಸೋತು ರನ್ನರ್‌ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ಕರೊನಾ ವೈರಸ್ ಹಾವಳಿಯಿಂದಾಗಿ ಪಡೆದ 5 ತಿಂಗಳ ಬಿಡುವಿನ ಬಳಿಕ ಕಳೆದ ತಿಂಗಳು ಪ್ರಾಗ್ ಓಪನ್‌ನಲ್ಲಿ ಪುನರಾಗಮನ ಕಂಡಾಗಲೂ ಹಲೆಪ್ ಪ್ರಶಸ್ತಿ ಜಯಿಸಿದ್ದರು.
ಸಿಮೋನಾ ಹಲೆಪ್ ಕರೊನಾ ವೈರಸ್ ಭೀತಿಯಿಂದಾಗಿ ಕಳೆದ ಯುಎಸ್ ಓಪನ್ ಗ್ರಾಂಡ್ ಸ್ಲಾಂ ಟೂರ್ನಿಯಿಂದ ಹೊರಗುಳಿದಿದ್ದರು.