ಒಂದು ಕಾಲದಲ್ಲಿ ಸಚಿನ್​, ವಿರಾಟ್​ ಜತೆ ಆಡಿದ್ದ ವ್ಯಕ್ತಿ ಸಾಲ ತೀರಿಸಲು ಮಾಡಿದ್ದು ಒಂದೆರಡಲ್ಲ; ಇಂದು ಕ್ರೀಡಾ ಸಚಿವರಾಗಿರುವ ಈ ವ್ಯಕ್ತಿ ನಡೆದು ಬಂದ ಹಾದಿಯೇ ರೋಚಕ

Manoj Tiwary
Published on

ಕಲ್ಕತ್ತಾ: ಕ್ರೀಡಾಪಟುವಿನ ಜೀವನವು ಹೆಚ್ಚಾಗಿ ಹೋರಾಟಗಳಿಂದ ತುಂಬಿರುತ್ತದೆ ಎಂದರೆ ತಪ್ಪಾಗಲಾರದು. ಕ್ರೀಡೆಯ ವಿಚಾರಕ್ಕೆ ಬರುವುದಾದರೆ ಭಾರತದಲ್ಲಿ ಕ್ರಿಕೆಟ್​ ಹೆಚ್ಚು ಮಹತ್ವಪಡೆದುಕೊಂಡಿದ್ದು, ರಾಷ್ಟ್ರೀಯ ತಂಡದ ಪರ ಪದಾರ್ಪಣೆ ಮಾಡಬೇಕು ಎನ್ನುವುದು ಪ್ರತಿಯೊಬ್ಬ ಆಟಗಾರನ ಕನಸಾಗಿರುತ್ತದೆ. ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುವುದು ಒಂದು ವಿಚಾರವಾದರೆ, ಆ ಸ್ಥಾನವನ್ನು ನಾವು ಭದ್ರಪಡಿಸಿಕೊಂಡು ಹೋಗುವುದು ಮತ್ತೊಂದು ವಿಚಾರವಾಗಿದೆ. ಈ ವಿಚಾರಕ್ಕೆ ಬರುವುದಾದರೆ ಹಲವು ಹಾಲಿ ಹಾಗೂ ಮಾಜಿ ಕ್ರಿಕೆಟಿಗರು ನಮ್ಮ ಕಣ್ಣ ಮುಂದೆ ಬಂದು ಹೋಗುತ್ತಾರೆ. ಈ ಪೈಕಿ ಮನೋಜ್ ತಿವಾರಿ ಕೂಡ ಒಬ್ಬರಾಗಿದ್ದಾರೆ. 

ಒಂದು ಕಾಲದಲ್ಲಿ ಐಪಿಎಲ್​, ದೇಶೀಯ ಟೂರ್ನಿ, ಟೀಮ್​ ಇಂಡಿಯಾ ಪರ ಆಡಿದ್ದ ಮನೋಜ್​ ತಿವಾರಿ ಅವರು ಪ್ರಸ್ತುತ ಟಿಎಂಸಿ ಸರ್ಕಾರದಲ್ಲಿ ಯುವ ಹಾಗೂ ಕ್ರೀಡಾ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ ತಮ್ಮ ಕ್ರಿಕೆಟ್​ ವೃತ್ತಿಜೀವನ ಹಾಳಾಗಲು ಧೋನಿ ಕಾರಣ ಎಂದು ಈ ಹಿಂದೆ ಅನೇಕ ಬಾರಿ ಆರೋಪಿಸಿದ್ದ ಮನೋಜ್​ ತಿವಾರಿ ಇದೀಗ ತಮ್ಮ ನೋವಿನ ಕಥೆಯನ್ನು ಹೇಳಿಕೊಂಡಿದ್ದಾರೆ.

Manoj Tiwary

ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಮನೋಜ್​, ಮನೆಯಲ್ಲಿ ಕಷ್ಟವಿದ್ದ ಕಾರಣ ನಾನು ಬೇಗನೆ ನಿವೃತ್ತಿ ಪಡೆಯಲು ಹೋಗಲಿಲ್ಲ. ನನ್ನ ತಲೆಯಲ್ಲಿದ್ದ ಒಂದು ವಿಚಾರವೆಂದರೆ ಆದಷ್ಟು ಬೇಗ ಸಾಲ ತೀರಿಸಬೇಕೆಂಬುದು. ಕಲ್ಕತ್ತಾದಲ್ಲಿ ನಾವು ಮಂಗಳಾ ಹಾತ್ ಹೊಂದಿದ್ದೇವೆ, ಅಲ್ಲಿ ನಾನು ಪೂರಿ ಸಬ್ಜಿಯನ್ನು ಮಾರುತ್ತಿದ್ದೆ, ನನ್ನ ತಾಯಿ ಬಡಿಯನ್ನು ತಯಾರಿಸುತ್ತಿದ್ದರು. ಕೆಲವೊಮ್ಮೆ ಜನರು ತಿಂದು ದುಡ್ಡು ಕೊಡದೆ ಹೋಗುತ್ತಿದ್ದರು. 

14 ವರ್ಷದವನಿದ್ದಾಗ ಫ್ಯಾಕ್ಟರಿ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡೆ. ಆ ಬಳಿಕ ನನಗೆ ಅಂಡರ್​ 16 ತಂಡದಲ್ಲಿ ಸ್ತಾನ ಸಿಕ್ಕಿತ್ತು. ಪ್ರತಿ ಮ್ಯಾಚ್​ಗೆ 1200 ರೂಪಾಯಿ ಶುಲ್ಕವನ್ನು ಕೊಡುತ್ತಿದ್ದರು. ಆ ಬಳಿಕ ನಾನು ಫ್ಯಾಕ್ಟರಿ ಕೆಲಸ ತೊರೆದು ಹೆಚ್ಚಾಗಿ ಕ್ರಿಕೆಟ್​ ಆಡಲು ಶುರು ಮಾಡಿದೆ. ಆ ಬಳಿಕ ರಣಜಿ, ಐಪಿಎಲ್ ಹಾಗೂ ಟೀಮ್​ ಇಂಡಿಯಾ ಪರ ಆಡಲು ಅವಕಾಶ ಸಿಕ್ಕಿತ್ತು. ಆ ಬಳಿಕ ಏನಾಯಿತು ಎಂಬುದು ನಿಮ್ಮೆಲರಿಗೂ ತಿಳಿದಿದೆ ಎಂದು ಮಾಜಿ ಆಟಗಾರ ಮನೋಜ್​ ತಿವಾರಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net