ವಿಶ್ವ ಚೆಸ್​ ಚಾಂಪಿಯನ್​ಷಿಪ್​ 11ನೇ ಪಂದ್ಯ ಗೆದ್ದ ಗುಕೇಶ್​, ಹೆಚ್ಚಿದ ಪ್ರಶಸ್ತಿ ನಿರೀಕ್ಷೆ!

web gukesh
Published on

ಸಿಂಗಾಪುರ: ಭಾನುವಾರ ಕ್ರಿಕೆಟ್​ನಲ್ಲಿ ಭಾರತದ ಪುರುಷರು, ಮಹಿಳೆಯರು ಮತ್ತು ಕಿರಿಯರು ಸೋಲು ಅನುಭವಿಸಿದ ನಿರಾಸೆಯ ನಡುವೆ ಗ್ರಾಂಡ್​ ಮಾಸ್ಟರ್​ ದೊಮ್ಮರಾಜು ಗುಕೇಶ್​ ವಿಶ್ವ ಚೆಸ್​ ಚಾಂಪಿಯನ್​ಷಿಪ್​ನ 11ನೇ ಸುತ್ತಿನ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಕ್ರೀಡಾಪ್ರೇಮಿಗಳಿಗೆ ಶುಭ ಸುದ್ದಿ ನೀಡಿದರು. ಹಾಲಿ ಚಾಂಪಿಯನ್​ ಚೀನಾದ ಡಿಂಗ್​ ಲಿರೆನ್​ ಸವಾಲನ್ನು ಹಿಮ್ಮೆಟ್ಟಿಸುವ ಮೂಲಕ ಗುಕೇಶ್​ 6-5 ಅಂಕಗಳಿಂದ ಮುನ್ನಡೆ ಸಾಧಿಸಿದರು.

14 ಕ್ಲಾಸಿಕ್​ ಪಂದ್ಯಗಳ ಈ ಹಣಾಹಣಿ 18 ವರ್ಷದ ಗುಕೇಶ್​ ಮೊದಲ ಬಾರಿಗೆ ಮುನ್ನಡೆ ಸಾಧಿಸಿದ್ದಾರೆ. ಅಲ್ಲದೆ ರೋಚಕ ಕಾದಾಟ ಕೊನೇ ಹಂತ ತಲುಪುತ್ತಿರುವ ಸಮಯದಲ್ಲಿ ಗುಕೇಶ್​ಗೆ ಇದು ಅಮೂಲ್ಯ ಮುನ್ನಡೆ ಎನಿಸಿದೆ. ಅಲ್ಲದೆ ವಿಶ್ವನಾಥನ್​ ಆನಂದ್​ ಬಳಿಕ ಚೆಸ್​ ವಿಶ್ವ ಚಾಂಪಿಯನ್​ ಪಟ್ಟ ಅಲಂಕರಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಂತಾಗಿದೆ. ಹಣಾಹಣಿಯಲ್ಲಿ ಇನ್ನು 3 ಸುತ್ತಿನ ಪಂದ್ಯಗಳಷ್ಟೇ ಬಾಕಿ ಉಳಿದಿದ್ದು, ಗುಕೇಶ್​ ಮೂರರಲ್ಲೂ ಡ್ರಾ ಸಾಧಿಸಿದರೂ ಇತಿಹಾಸ ಸೃಷ್ಟಿಸುವ ಅವಕಾಶ ಹೊಂದಿದ್ದಾರೆ.

ಭಾನುವಾರ ನಡೆದ 11ನೇ ಪಂದ್ಯದಲ್ಲಿ ಬಿಳಿ ಕಾಯಿಯೊಂದಿಗೆ ಆಡಿದ ಗುಕೇಶ್​, 29 ನಡೆಗಳಲ್ಲಿ ಗೆಲುವು ದಾಖಲಿಸಿದರು. ಇದರೊಂದಿಗೆ ಸತತ 7 ಡ್ರಾ ಬಳಿಕ ಗುಕೇಶ್​ ಜಯ ಕಂಡಂತಾಗಿದೆ. ಈ ಮುನ್ನ ಮೊದಲ ಪಂದ್ಯ ಸೋತಿದ್ದ ಗುಕೇಶ್​, 3ನೇ ಪಂದ್ಯದಲ್ಲಿ ಗೆಲುವು ದಾಖಲಿಸಿದ್ದರು.

28ನೇ ನಡೆಯಲ್ಲಿ 32 ವರ್ಷದ ಲಿರೆನ್​ ದೊಡ್ಡ ಎಡವಟ್ಟು ಮಾಡಿಕೊಂಡರು. ಅದರ ಬೆನ್ನಲ್ಲೇ ಗುಕೇಶ್​ ಅತ್ಯುತ್ತಮ ನಡೆಯೊಂದಿಗೆ ಲಿರೆನ್​ ಸೋಲೊಪ್ಪಿಕೊಳ್ಳುವಂತೆ ಮಾಡಿದರು.

"ಈ ಪಂದ್ಯ ಯಾವ ಕಡೆ ಬೇಕಾದರೂ ಹೋಗಬಹುದಿತ್ತು. ಪಂದ್ಯದ ವೇಳೆ ಒಂದು ಹಂತದಲ್ಲಿ ನಾನು ತಾಳ್ಮೆ ಕಳೆದುಕೊಂಡಿದ್ದೆ. ಆದರೆ ನಾನು ಸೋಲುವುದಿಲ್ಲ ಎಂದು ಅರಿವಾದ ಬಳಿಕ ನನ್ನ ಎದುರು ಉತ್ತಮ ಅವಕಾಶಗಳೂ ಕಾಣಿಸಿದವು. ಅದರ ಬೆನ್ನಲ್ಲೇ ಗೆಲುವು ಸಾಧಿಸಿದೆ' ಎಂದು ಗುಕೇಶ್​ ಪಂದ್ಯದ ಬಳಿಕ ಹೇಳಿದರು. ಕಳೆದ ಆವೃತ್ತಿಯಲ್ಲಿ ರಷ್ಯಾದ ನೆಪೊಮ್ನಸಿಯಾಚಿ ಎದುರು 12ನೇ ಪಂದ್ಯದಲ್ಲಿ ಗೆದ್ದಿದ್ದ ಲಿರೆನ್​ ಈ ಸಲವೂ ಅದನ್ನೇ ಪುನರಾವರ್ತಿಸುವ ವಿಶ್ವಾಸ ವ್ಯಕ್ತಪಡಿಸಿದರು.

3: ಉಳಿದ 3 ಪಂದ್ಯಗಳಲ್ಲಿ ಗುಕೇಶ್​ 3 ಡ್ರಾ ಅಥವಾ 1 ಜಯ&1 ಡ್ರಾ ಅಥವಾ 2 ಜಯ ಕಂಡರೂ ಪ್ರಶಸ್ತಿ ಒಲಿಸಿಕೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net