

ನವದೆಹಲಿ: ಐಪಿಎಲ್ಗೆ 2022ರಲ್ಲಿ ಸೇರ್ಪಡೆಗೊಂಡ ಗುಜರಾತ್ ಟೈಟಾನ್ಸ್ ತಂಡದ ಮಾಲೀಕತ್ವ ಹೊಂದಿರುವ ಸಿವಿಸಿ ಕ್ಯಾಪಿಟಲ್ ಕಂಪನಿಯು ಹೆಚ್ಚಿನ ಷೇರುಗಳ ಮಾರಾಟಕ್ಕೆ ಮುಂದಾಗಿದೆ. ಅದಾನಿ ಗ್ರೂಪ್ ಮತ್ತು ಟೊರೆಂಟ್ ಗ್ರೂಪ್ಗಳು ಈ ಷೇರುಗಳ ಖರೀದಿಗೆ ಮಾತುಕತೆಯನ್ನೂ ನಡೆಸಿವೆ ಎನ್ನಲಾಗಿದೆ.
ಸಿವಿಸಿ ಕ್ಯಾಪಿಟಲ್ ಕಂಪನಿ ಈಗ ಗುಜರಾತ್ ಫ್ರಾಂಚೈಸಿಯಲ್ಲಿ ಸಣ್ಣ ಪ್ರಮಾಣದ ಷೇರುಗಳನ್ನು ಮಾತ್ರ ತನ್ನಲ್ಲಿ ಉಳಿಸಿಕೊಳ್ಳಲು ಬಯಸಿದೆ. ಬಿಸಿಸಿಐ ನಿಯಮದ ಅನುಸಾರ ಈ ಹೊಸ ತಂಡವನ್ನು 2025ರ ೆಬ್ರವರಿವರೆಗೆ ಸಂಪೂರ್ಣವಾಗಿ ಮಾರಾಟ ಮಾಡಲು ಮಾಲೀಕರಿಗೆ ಅನುಮತಿ ಇರುವುದಿಲ್ಲ.
ಸಿವಿಸಿ ಕ್ಯಾಪಿಟಲ್ ಕಂಪನಿ 2021ರಲ್ಲಿ 5,625 ಕೋಟಿ ರೂ.ಗಳಿಗೆ ಅಹಮದಾಬಾದ್ ನಗರ ಮೂಲದ ಗುಜರಾತ್ ತಂಡವನ್ನು ಖರೀದಿಸಿತ್ತು. ಆಗ ಅದಾನಿ ಗ್ರೂಪ್ (5,100 ಕೋಟಿ ರೂ.) ಮತ್ತು ಟೊರೆಂಟ್ ಗ್ರೂಪ್ (4,653 ಕೋಟಿ ರೂ.) ಬಿಡ್ಡಿಂಗ್ಗಳನ್ನು ಸಿವಿಸಿ ಕಂಪನಿ ಹಿಮ್ಮೆಟ್ಟಿಸಿತ್ತು. 2022ರ ಐಪಿಎಲ್ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡದ ಹಾಲಿ ಮೌಲ್ಯ 8,366ರಿಂದ 12,549 ಕೋಟಿ ರೂ.ವರೆಗೆ ಇದೆ ಎನ್ನಲಾಗಿದೆ.
ಅಹಮದಾಬಾದ್ ನಗರದ ಫ್ರಾಂಚೈಸಿಯನ್ನು ಖರೀದಿಸಲು ಭಾರಿ ಉತ್ಸಾಹದಲ್ಲಿದ್ದ ಅದಾನಿ ಗ್ರೂಪ್, ಐಪಿಎಲ್ನಲ್ಲಿ ತಂಡದ ಸಿಗದ ನಿರಾಸೆಯಲ್ಲಿ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ 1,289 ಕೋಟಿ ರೂ.ಗಳಿಗೆ ಅಹಮದಾಬಾದ್ ಮಹಿಳಾ ತಂಡವನ್ನು (ಗುಜರಾತ್ ಜೈಂಟ್ಸ್) ಖರೀದಿಸಿತ್ತು.