ಮೊದಲ ಗೆಲುವಿಗಾಗಿ ಇಂದು ಗುಜರಾತ್​-ಮುಂಬೈ ಫೈಟ್​; 18ನೇ ಆವೃತ್ತಿಯಲ್ಲಿ ಹಾರ್ದಿಕ್​ ಪಾಂಡ್ಯ ಮೊದಲ ಬಾರಿ ಕಣಕ್ಕೆ

web mi vs gt
Published on

ಅಹಮದಾಬಾದ್​: ಐಪಿಎಲ್​ 18ನೇ ಆವೃತ್ತಿಯ ಆರಂಭಿಕ ಪಂದ್ಯದಲ್ಲಿ ದಿಟ್ಟ ಹೋರಾಟದ ನಡುವೆಯೂ ಸೋಲು ಅನುಭವಿಸಿರುವ ತಂಡಗಳಾದ ಗುಜರಾತ್​ ಟೈಟಾನ್ಸ್​ ಮತ್ತು ಮುಂಬೈ ಇಂಡಿಯನ್ಸ್​ ಶನಿವಾರ ಮುಖಾಮುಖಿ ಆಗಲಿವೆ. ಓವರ್​ಗತಿ ನಿಷೇಧದಿಂದಾಗಿ ಮೊದಲ ಪಂದ್ಯ ತಪ್ಪಿಸಿಕೊಂಡಿದ್ದ ನಾಯಕ ಹಾರ್ದಿಕ್​ ಪಾಂಡ್ಯ ಹಾಲಿ ಆವೃತ್ತಿಯಲ್ಲಿ ಮೊದಲ ಬಾರಿ ಕಣಕ್ಕಿಳಿಯಲು ಸಜ್ಜಾಗಿದ್ದು, ಮುಂಬೈ ತಂಡವನ್ನು ಗೆಲುವಿನ ಹಳಿ ಏರಿಸುವ ಉತ್ಸಾಹದಲ್ಲಿದ್ದಾರೆ. ಮತ್ತೊಂದೆಡೆ ಶುಭಮಾನ್​ ಗಿಲ್​ ಬಳಗ ತವರಿನ 2ನೇ ಪಂದ್ಯದಲ್ಲಾದರೂ ಗೆಲುವಿನ ಖಾತೆ ತೆರೆಯುವ ಛಲದಲ್ಲಿದೆ.

ಉತ್ತಮ ಬೌಲಿಂಗ್​ ವಿಭಾಗವನ್ನು ಹೊಂದಿರುವ ನಡುವೆಯೂ ಗುಜರಾತ್​ ತಂಡ ಮೊದಲ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​ ಎದುರು 243 ರನ್​ಗಳ ಬೃಹತ್​ ಮೊತ್ತ ಬಿಟ್ಟುಕೊಟ್ಟಿತ್ತು. ನಂತರ ಸಾಯಿ ಸುದರ್ಶನ್​, ಜೋಸ್​ ಬಟ್ಲರ್​, ರುದರ್ಫೋರ್ಡ್​ ಸಾಹಸದಿಂದ ಚೇಸಿಂಗ್​ ಸನಿಹ ಹೋದರೂ, ಅಂತಿಮವಾಗಿ 11 ರನ್​ಗಳಿಂದ ಶರಣಾಗಿತ್ತು. ಇತ್ತ ಮುಂಬೈ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್​ ವೈಫಲ್ಯದಿಂದಾಗಿ 155 ರನ್​ಗಳಿಗೆ ತೃಪ್ತಿಪಟ್ಟರೂ, ಯುವ ಸ್ಪಿನ್ನರ್​ ವಿಘ್ನೇಶ್​ ಪುಥುರ್​ ಮೊದಲ ಪಂದ್ಯದಲ್ಲೇ ಮಿಂಚಿದ ಬಲದಿಂದ ನಿಕಟ ಪ್ರತಿರೋಧ ತೋರಿ ಅಂತಿಮ ಓವರ್​ನಲ್ಲಷ್ಟೇ ಶರಣಾಗಿತ್ತು. ಹೀಗಾಗಿ ಸೋಲಿನ ನಡುವೆಯೂ ತೋರಿದ ದಿಟ್ಟ ಹೋರಾಟದಿಂದಾಗಿ ಉಭಯ ತಂಡಗಳು ಆತ್ಮವಿಶ್ವಾಸ ವೃದ್ಧಿಸಿಕೊಂಡು, ಈ ಬಾರಿ ಟೂರ್ನಿಯ ಮೊದಲ ಗೆಲುವಿಗೆ ಜಿದ್ದಾಜಿದ್ದಿನ ಹೋರಾಟ ನಡೆಸುವ ನಿರೀಕ್ಷೆ ಇದೆ.

ಗುಜರಾತ್​ಗೆ ಬ್ಯಾಟಿಂಗ್​ಗಿಂತ ಬೌಲಿಂಗ್​ ವಿಭಾಗ ದೊಡ್ಡ ತಲೆನೋವಾಗಿದ್ದು, ಸಿರಾಜ್​ ಜತೆಗೆ ಪ್ರಸಿದ್ಧ ಕೃಷ್ಣ, ರಶೀದ್​ ಖಾನ್​, ರಬಾಡ, ಅರ್ಷದ್​ ಖಾನ್​ ಶ್ರೀ ಲಯಕ್ಕೆ ಮರಳಬೇಕಿದೆ.

*ಮುಖಾಮುಖಿ: 5

ಮುಂಬೈ: 2

ಗುಜರಾತ್​: 3

ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಜಿಯೋ ಹಾಟ್​ಸ್ಟಾರ್​.

ಮುಂಬೈಗೆ ಹಾರ್ದಿಕ್​ ಬಲ

ಮೊದಲ ಪಂದ್ಯದಲ್ಲಿ ನಾಯಕ ಹಾರ್ದಿಕ್​ ಪಾಂಡ್ಯ ಗೈರು ಮುಂಬೈಗೆ ಬ್ಯಾಟಿಂಗ್​-ಬೌಲಿಂಗ್​ ಎರಡರಲ್ಲೂ ಕಾಡಿತ್ತು. ಹೀಗಾಗಿ ಈ ಬಾರಿ ಹಾರ್ದಿಕ್​ ಲಭ್ಯತೆ ಹೊಸ ಬಲ ತುಂಬಿದೆ. ತನ್ನ ಹಳೆಯ ತಂಡದ ವಿರುದ್ಧವೇ ಹಾರ್ದಿಕ್​ ಮರಳಿ ಕಣಕ್ಕಿಳಿಯುತ್ತಿರುವುದು ವಿಶೇಷ. ಹಾರ್ದಿಕ್​ಗೆ ರಾಬಿನ್​ ಮಿಂಜ್​ ಅಥವಾ ಸತ್ಯನಾರಾಯಣ ರಾಜು ಸ್ಥಾನ ಬಿಟ್ಟುಕೊಡುವ ನಿರೀೆ ಇದೆ. ಮೊದಲ ಪಂದ್ಯದಲ್ಲಿ ಸೊನ್ನೆ ಸುತ್ತಿದ್ದ ರೋಹಿತ್​ ಶರ್ಮ, ವಿಕೆಟ್​ ಕೀಪರ್​&ಬ್ಯಾಟರ್​ ರ್ಯಾನ್​ ರಿಕೆಲ್​ಟನ್​, ವಿಲ್​ ಜಾಕ್ಸ್​ ಅಗ್ರ ಕ್ರಮಾಂಕಕ್ಕೆ ಬಲ ತುಂಬಬೇಕಿದೆ. ಬೌಲಿಂಗ್​ನಲ್ಲಿ ಪ್ರಮುಖರಾದ ಟ್ರೆಂಟ್​ ಬೌಲ್ಟ್​, ದೀಪಕ್​ ಚಹರ್​, ಸ್ಪಿನ್ನರ್​ ಮಿಚೆಲ್​ ಸ್ಯಾಂಟ್ನರ್​ ಇನ್ನಷ್ಟು ಪರಿಣಾಮಕಾರಿ ಎನಿಸಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net