

ಐಚಿ-ನಗೋಯಾ: ಹೈದರಾಬಾದ್ನ ಈಶಾ ಸಿಂಗ್ ಏಷ್ಯಾಡ್ ಮಹಿಳೆಯರ 25 ಮೀ. ಪಿಸ್ತೂಲ್ ಶೂಟಿಂಗ್ ವೈಯಕ್ತಿಕ ವಿಭಾಗದಲ್ಲಿ ರಜತ ಪದಕಕ್ಕೆ ಕೊರಳೊಡ್ಡಿದರು. ಸತತ 2 ದಿನಗಳ ಶೂಟಿಂಗ್ನಿಂದ ತೋಳು ಮತ್ತು ಭುಜ ನೋಯುತ್ತಿದ್ದ ಮತ್ತು ಸುಸ್ತಾಗಿದ್ದ ನಡುವೆ 21 ವರ್ಷದ ಈಶಾ ಸಿಂಗ್, 5 ಶೂಟ್-ಆಫ್ಗಳಲ್ಲಿ ರೋಚಕ ಸೋಲು ಅನುಭವಿಸಿ ಚಿನ್ನದ ಪದಕದಿಂದ ವಂಚಿತರಾದರು. ಹಾಲಿ ವಿಶ್ವ ನಂ.1 ಆಗಿರುವ ಈಶಾ, ಫೈನಲ್ನಲ್ಲಿ ಚೀನಾದ ಕ್ಸಿಯಾವೊ ಜಿಯಾರುಕ್ಸಿಯನ್ ವಿರುದ್ಧ ಕೊನೇ ಸುತ್ತಿನಲ್ಲಿ 38 ಅಂಕಗಳ ಸಮಬಲ ಸಾಧಿಸಿದರು. ಬಳಿಕ ಶೂಟ್-ಆಫ್ನಲ್ಲಿ ಕೊನೇ ಹಂತದಲ್ಲಿ ಲಯ ತಪ್ಪಿದರು. ಉತ್ತರ ಕೊರಿಯಾದ ಕಿಮ್ ಹ್ಯೋನ್ ಸುಕ್ (34) ಕಂಚು ಜಯಿಸಿದರು. ಈಶಾ ಇದಕ್ಕೆ ಮುನ್ನ ಅರ್ಹತಾ ಸುತ್ತಿನಲ್ಲಿ 580 ಅಂಕ ಗಳಿಸಿ ಫೈನಲ್ಗೇರಿದ್ದರು.
ಮನು ಭಾಕರ್ಗೆ ಪದಕವಿಲ್ಲ!
ಒಲಿಂಪಿಕ್ಸ್ ಅವಳಿ ಕಂಚಿನ ಪದಕ ವಿಜೇತೆ ಮನು ಭಾಕರ್ 10 ಮೀ. ಬಳಿಕ 25 ಮೀ. ಪಿಸ್ತೂಲ್ ವಿಭಾಗದಲ್ಲೂ ತಂಡ ಮತ್ತು ವೈಯಕ್ತಿಕವಾಗಿ ಪದಕ ಗೆಲ್ಲದೆ ನಿರಾಸೆ ಅನುಭವಿಸಿದರು. 25 ಮೀ. ಪಿಸ್ತೂಲ್ನ ವೈಯಕ್ತಿಕ ವಿಭಾಗದಲ್ಲಿ ಅವರು ಫೈನಲ್ಗೇರಲು ಕೂಡ ವಿಫಲರಾದರು. 2 ದಿನಗಳ ಶೂಟಿಂಗ್ ಬಳಿಕ 579 ಅಂಕ ಗಳಿಸಿದ ಅವರು 11ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಅವರು 2023ರ ಏಷ್ಯಾಡ್ನಲ್ಲಿ 1 ಚಿನ್ನ ಗೆದ್ದಿದ್ದರು.
ಗುರಿ ತಪ್ಪಿದ ರಾಹಿ, ಕೈಜಾರಿದ ಪದಕ!
ಮಹಿಳೆಯರ 25 ಮೀ. ಪಿಸ್ತೂಲ್ ತಂಡ ವಿಭಾಗದಲ್ಲಿ ರಾಹಿ ಸನೋರ್ಬತ್ ನಿರ್ಣಾಯಕ ಘಟ್ಟದ ಒಂದು ಶೂಟ್ನಲ್ಲಿ ಗುರಿ ತಪ್ಪಿದ್ದರಿಂದ ಭಾರತ ತಂಡ ಪದಕ ಗೆಲುವಿನಿಂದ ವಂಚಿತವಾಯಿತು. ಮಹಾರಾಷ್ಟ್ರದ 35 ವರ್ಷದ ರಾಹಿ 5 ಶೂಟ್ ಒಳಗೊಂಡ 4ನೇ ಸರಣಿಯಲ್ಲಿ 39 ಅಂಕಗಳನ್ನಷ್ಟೇ ಗಳಿಸಿದರು. ಅವರ ಒಂದು ಶೂಟ್ ಟಾರ್ಗೆಟ್ನಿಂದ ಹೊರಬಿದ್ದಿದೆ ಎಂದು ಪರಿಗಣಿಸಿದ ರೆಫ್ರಿ ಒಂದೂ ಅಂಕವನ್ನು ನೀಡಲಿಲ್ಲ. ಇದರಿಂದ ರಾಹಿ 568 ಅಂಕದೊಂದಿಗೆ 30ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಇದರಿಂದ ಭಾರತ ತಂಡ ಒಟ್ಟು 1,727 ಅಂಕಗಳೊಂದಿಗೆ 5ನೇ ಸ್ಥಾನಕ್ಕೆ ತೃಪ್ತಿಪಟ್ಟಿತು. ರಾಹಿ ಆ ಶೂಟ್ನಲ್ಲಿ ಕನಿಷ್ಠ 9 ಅಂಕ ಗಳಿಸಿದರೂ ಭಾರತಕ್ಕೆ ರಜತ ಪದಕ ಜಯಿಸುವ ಅವಕಾಶವಿತ್ತು. ಚೀನಾ (1,743) ಚಿನ್ನ ಗೆದ್ದರೆ, ದಣ ಕೊರಿಯಾ (1735) ಬೆಳ್ಳಿ, ಚೀನಾ ತೈಪೆ (1734) ಕಂಚು ಜಯಿಸಿತು.