

ನ್ಯೂಯಾರ್ಕ್: ವಿಶ್ವ ಚೆಸ್‌ನಲ್ಲಿ ಭಾರತದ ಪ್ರಾಬಲ್ಯಕ್ಕೆ ಮತ್ತೊಂದು ಗರಿ ಸೇರ್ಪಡೆಗೊಂಡಿದೆ. ಭಾರತದ ಗ್ರಾಂಡ್ ಮಾಸ್ಟರ್ ಕೊನೆರು ಹಂಪಿ ವಿಶ್ವ ರ‌್ಯಾಪಿಡ್ ಚೆಸ್ ಚಾಂಪಿಯನ್‌ಷಿಪ್‌ನ ಮಹಿಳಾ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. 11 ಹಾಗೂ ಅಂತಿಮ ಸುತ್ತಿನ ಪಂದ್ಯದಲ್ಲಿ ಇಂಡೋನೇಷ್ಯಾದ ಐರಿನ್ ಸುಕಂದರ್ ಅವರನ್ನು ಮಣಿಸುವ ಮೂಲಕ ಹಂಪಿ ಈ ಸಾಧನೆ ಮಾಡಿದ್ದಾರೆ. ಇದರೊಂದಿಗೆ ಕಳೆದ ಬಾರಿ ಕೈ ತಪ್ಪಿದ ಕಿರೀಟವನ್ನು ತನ್ನದಾಗಿಸಿದ್ದಾರೆ. ಇದು ಕೊನೆರು ಹಂಪಿಗೆ ವೃತ್ತಿಜೀವನದ 2ನೇ ವಿಶ್ವ ರ‌್ಯಾಪಿಡ್ ಚೆಸ್ ಪ್ರಶಸ್ತಿ ಗೆಲುವಾಗಿದೆ.
ವೈಯಕ್ತಿಕ ಕಾರಣಗಳಿಂದ ಸೆಪ್ಟೆಂಬರ್‌ನಲ್ಲಿ ನಡೆದ ಬುಡಾಪೆಸ್ಟ್ ಚೆಸ್ ಒಲಿಂಪಿಯಾಡ್ ಮಹಿಳಾ ತಂಡದಿಂದ ಹೊರಗುಳಿದಿದ್ದ ಭಾರತದ ನಂ.1 ಆಟಗಾರ್ತಿ ಕೊನೆರು ಹಂಪಿ, ಯಾವುದೇ ನಿರೀಕ್ಷೆಗಳಿಲ್ಲದೆ ಟೂರ್ನಿಯಲ್ಲಿ 10ನೇ ಶ್ರೇಯಾಂಕಿತೆಯಾಗಿ ಭಾಗವಹಿಸಿದರು. ಮೊದಲ ಸುತ್ತಿನಲ್ಲಿ ಸೋಲಿನ ಆಘಾತ ಎದುರಿಸಿದ ವಿಜಯವಾಡದ 37 ವರ್ಷದ ಕೊನೆರು ಹಂಪಿ, ಮೊದಲ 4 ಸುತ್ತಿನ ನಂತರ 2.5 ಅಂಕ ಕಲೆಹಾಕಿದರು. ಬಳಿಕ ಸತತ 4 ಸುತ್ತಿನಲ್ಲಿ ಗೆದ್ದು ಬೀಗಿದ ಅವರು ಅಂತಿಮ ಪಂದ್ಯದಲ್ಲಿ ಕಪ್ಪು ಕಾಯಿಗಳೊಂದಿಗೆ ಆಡುವ ಸವಾಲು ಪಡೆದರು. ಅಂತಿಮವಾಗಿ ಸವಾಲು ಜಯಿಸಿದ ಕೊನೆರು ಹಂಪಿ ಅಂಕಪಟ್ಟಿಯಲ್ಲಿ ಒಟ್ಟು 11ರಲ್ಲಿ 8.5 ಅಂಕ ಕಲೆಹಾಕಿ ಅಗ್ರಸ್ಥಾನ ಪಡೆದು ಪ್ರಶಸ್ತಿ ಒಲಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ಈ ಗೆಲುವನ್ನು ತನ್ನ ಕುಟುಂಬಕ್ಕೆ ಅರ್ಪಿಸಿರುವ ಕೊನೆರು ಹಂಪಿ, ಕುಟುಂಬದ ಬೆಂಬಲದಿಂದಾಗಿ ಇದು ಸಾಧ್ಯವಾಯಿತು ಎಂದು ಭಾವಿಸುತ್ತೇನೆ. ನನ್ನ ಪತಿ ಮತ್ತು ನನ್ನ ಪೋಷಕರು ... ನನಗೆ ಬಹಳಷ್ಟು ಬೆಂಬಲ ನೀಡುತ್ತಾರೆ. ನಾನು ಪ್ರಯಾಣಿಸುವಾಗ ನನ್ನ ಹೆತ್ತವರು ನನ್ನ ಮಗಳನ್ನು ನೋಡಿಕೊಳ್ಳುತ್ತಾರೆ ಎಂದು ಪಂದ್ಯದ ಬಳಿಕ ನುಡಿದರು. ಕೊನೆರು ಹಂಪಿ ಅವರಿಗೆ ಅಹನಾ ಎಂಬ ಏಳು ವರ್ಷದ ಮಗಳಿದ್ದಾಳೆ.
2011ರ ವಿಶ್ವ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ರನ್ನರ್ ಅಪ್ ಆಗುವುದರೊಂದಿಗೆ ಮೊದಲ ಬಾರಿಗೆ ಪೋಡಿಯಂ ಏರಿದ ಕೊನೆರು ಹಂಪಿ, ಬಳಿಕ 2012ರಲ್ಲಿ ಮಾಸ್ಕೋದಲ್ಲಿ ನಡೆದ ರ‌್ಯಾಪಿಡ್ ಚೆಸ್ ಟೂರ್ನಿಯಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟರು. 2019ರಲ್ಲಿ ಚಾಂಪಿಯನ್ ಪಟ್ಟಕ್ಕೇರಿದ್ದರು. 2022ರ ಆವೃತ್ತಿಯ ಬ್ಲಿಟ್ಜ್ ವಿಭಾಗದ ಸ್ಪರ್ಧೆಯಲ್ಲಿ ಮತ್ತೆ ರನ್ನರ್ ಅಪ್ ಸ್ಥಾನಕ್ಕೆ ಸಮಾಧಾನ ಕಂಡಿದ್ದರು. ಜತೆಗೆ 2020ರ ಚೆಸ್ ಒಲಿಂಪಿಯಾಡ್ ಗೆದ್ದ ಮಹಿಳಾ ತಂಡದ ಸದಸ್ಯೆಯೂ ಆಗಿದ್ದರು.
ಚೀನಾದ ಜು ವೆನ್‌ಜುನ್,ರಷ್ಯಾದ ಕಟೆರಿನಾ ಲಗ್ನೊ, ಭಾರತದ ಹರಿಕಾ ತಲಾ 8 ಅಂಕಗಳೊಂದಿಗೆ ಸ್ಪರ್ಧೆ ಮುಗಿಸಿದರು. ಪುರುಷರ ವಿಭಾಗದಲ್ಲಿ 18 ವರ್ಷದ ರಷ್ಯಾದ ಗ್ರಾಂಡ್ ಮಾಸ್ಟರ್ ವೊಲೊಡರ್ ಮುರ್ಜಿನ್ ಚಾಂಪಿಯನ್ ಎನಿಸಿದರು. ಟೂರ್ನಿಯುದ್ದಕ್ಕೂ ಅಜೇಯವಾಗಿ ಉಳಿದ ವೊಲೊಡರ್, ಭಾರತದ ಅರ್ಜುನ್ ಇರಿಗೈಸಿ, ಆರ್, ಪ್ರಜ್ಞಾನಂದ, ್ಯಾಬಿಯಾನೊ ಕರುವಾನ ಅಂಥ ಪ್ರತಿಭೆಗಳನ್ನು ಪರಾಭವಗೊಳಿಸಿದರು.
> ಕೊನೆರು ಹಂಪಿಭಾರತಕ್ಕೆ ಇದು ಉತ್ತಮ ಸಮಯ ಎಂದು ನಾನು ಭಾವಿಸುತ್ತೇನೆ. ನಮ್ಮಲ್ಲಿ ಗುಕೇಶ್ ವಿಶ್ವ ಚಾಂಪಿಯನ್ ಆಗಿದ್ದಾರೆ. ಈಗ ರ‌್ಯಾಪಿಡ್ ಈವೆಂಟ್‌ನಲ್ಲಿ ನಾನು 2ನೇ ಬಾರಿ ವಿಶ್ವ ಪ್ರಶಸ್ತಿಯನ್ನು ಪಡೆದುಕೊಂಡಿದ್ದೇನೆ. ಬಹಳಷ್ಟು ಯುವಕರಿಗೆ ಇದು ಚೆಸ್ ಆಟವನ್ನು ವೃತ್ತಿಪರವಾಗಿ ತೆಗೆದುಕೊಳ್ಳಲು ಪ್ರೇರೇಪಿಸುತ್ತದೆ ಎಂದು ಭಾವಿಸುತ್ತೇನೆ.
2. ಕೊನೆರು ಹಂಪಿ ಒಂದಕ್ಕಿಂತ ಹೆಚ್ಚು ಬಾರಿ ವಿಶ್ವ ರ‌್ಯಾಪಿಡ್ ಚೆಸ್ ಚಾಂಪಿಯನ್ ಎನಿಸಿದ 2ನೇ ಸಾಧಕಿ. ಚೀನಾದ ಜು ವೆನ್‌ಜುನ್ (2017,2018) ಮೊದಲ ಸಾಧಕಿ. ಪ್ರಧಾನಿ ಅಭಿನಂದನೆ: ನೂತನ ವಿಶ್ವ ಚಾಂಪಿಯನ್ ಕೊನೆರು ಹಂಪಿ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಜತೆಗೆ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು, ಡಿಸಿಎಂ ಪವನ್ ಕಲ್ಯಾಣ್ ಎಕ್ಸ್‌ನಲ್ಲಿ ಶ್ಲಾಘಿಸಿದ್ದಾರೆ. ‘2024ರ ಫಿಡೆ ಮಹಿಳಾ ವಿಶ್ವ ರ‌್ಯಾಪಿಡ್ ಚಾಂಪಿಯನ್‌ಷಿಪ್ ಗೆದ್ದಿದ್ದಕ್ಕಾಗಿ ಅಭಿನಂದನೆಗಳು! ನಿಮ್ಮ ದಿಟ್ಟತನ ಮತ್ತು ಪ್ರತಿಭೆಯು ಲಕ್ಷಾಂತರ ಜನರನ್ನು ಪ್ರೇರೇಪಿಸುತ್ತದೆ. ಈ ವಿಜಯ ಇನ್ನಷ್ಟು ಐತಿಹಾಸಿಕವಾಗಿದೆ. ಹಂಪಿ 2 ಬಾರಿ ಈ ಅದ್ಭುತ ಸಾಧನೆ ಮಾಡಿದ ಏಕೈಕ ಭಾರತೀಯಳಾಗಿದ್ದಾಳೆ ಎಂದು ಪ್ರಧಾನಿ ಅಭಿನಂದಿಸಿದ್ದಾರೆ.