

ನವದೆಹಲಿ: ತಮ್ಮ ಭಾವನೆಗಳನ್ನು ರಾಷ್ಟ್ರೀಯ ಬ್ಯಾಡ್ಮಿಂಟನ್ ಕೋಚ್ ಪುಲ್ಲೇಲ ಗೋಪಿಚಂದ್ ಎಂದೂ ಸಾರ್ವಜನಿಕವಾಗಿ ತೋರಿಸಿಕೊಳ್ಳುವುದಿಲ್ಲ.
ಆದರೆ, ಸೈನಾ ನೆಹ್ವಾಲ್ ತಮ್ಮ ಅಕಾಡೆಮಿಯನ್ನು ತೊರೆದು ಪ್ರಕಾಶ್ ಪಡುಕೋಣೆ ಅಕಾಡೆಮಿ ಸೇರಿದ ವಿಚಾರ ತಮಗೆ ಸಾಕಷ್ಟು ನೋವು ಉಂಟು ಮಾಡಿತ್ತು ಎಂದು ತಮ್ಮ ಆತ್ಮಚರಿತ್ರಯೆಲ್ಲಿ ಬರೆದುಕೊಂಡಿದ್ದಾರೆ. ಭಾರತದ ಮೊಟ್ಟಮೊದಲ ಬ್ಯಾಡ್ಮಿಂಟನ್ ಸೂಪರ್ ಸ್ಟಾರ್ ಆಗಿರುವ ಪ್ರಕಾಶ್ ಪಡುಕೋಣೆ, ಸೈನಾ ನೆಹ್ವಾಲ್ ನಮ್ಮ ಅಕಾಡೆಮಿಯನ್ನು ತೊರೆಯಲು ಯಾಕೆ ಪ್ರೋತ್ಸಾಹಿಸಿದರು ಎನ್ನುವುದೇ ಅರ್ಥವಾಗಿಲ್ಲ ಎಂದಿದ್ದಾರೆ.
‘ಡ್ರೀಮ್ಸ್ ಆಫ್ ಎ ಬಿಲಿಯನ್: ಇಂಡಿಯಾ ಆಂಡರ್ ದಿ ಒಲಿಂಪಿಕ್ಸ್ ಗೇಮ್ಸ್’ ಹೆಸರಿನ ಪುಸ್ತಕ ಶೀಘ್ರದಲ್ಲಿಯೇ ಬಿಡುಗಡೆಯಾಗಲಿದ್ದು, ಮಾಜಿ ಆಲ್ ಇಂಗ್ಲೆಂಡ್ ಚಾಂಪಿಯನ್ ಕೂಡ ಆಗಿರುವ ಗೋಪಿಚಂದ್ ಹಲವು ವಿಚಾರಗಳ ಕಷ್ಟದ ದಿನಗಳ ವಿಚಾರದ ಬಗ್ಗೆ ಬರೆದಿದ್ದಾರೆ. ಸೈನಾ ಮಾತ್ರವಲ್ಲದೆ, ಅವರ ಪತಿ ಕಾಮನ್ವೆಲ್ತ್ ಗೇಮ್್ಸ ಸ್ವರ್ಣ ಪದಕ ವಿಜೇತ ಪಿ.ಕಶ್ಯಪ್ ಕೂಡ ಇದಕ್ಕೆ ಬೆಂಬಲ ನೀಡಿದ್ದರು ಎಂದಿದ್ದಾರೆ.
‘ಬಿಟ್ಟರ್ ರೈವರ್ಲಿ’ ಎನ್ನುವ ಅಧ್ಯಾಯದಲ್ಲಿ 2014ರ ವಿಶ್ವ ಚಾಂಪಿಯನ್ಷಿಪ್ ಬಳಿಕ, ಸೈನಾ ನೆಹ್ವಾಲ್ ಗೋಪಿಚಂದ್ ಅಕಾಡೆಮಿಯನ್ನು ತೊರೆದು ಪಡುಕೋಣೆ ಅಕಾಡೆಮಿಯಲ್ಲಿ ವಿಮಲ್ ಕುಮಾರ್ ಗರಡಿಯಲ್ಲಿ ಅಭ್ಯಾಸ ನಡೆಸಲು ಆರಂಭಿಸಿದ ದಿನಗಳ ಬಗ್ಗೆ ಬರೆದುಕೊಂಡಿದ್ದಾರೆ.
‘ನನ್ನ ಆಪ್ತರೊಬ್ಬರನ್ನು ನನ್ನಿಂದ ದೂರ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದನಿಸಿತು. ಇದಕ್ಕೂ ಮುನ್ನ ಸೈನಾಗೆ ಪಡುಕೋಣೆ ಅಕಾಡೆಮಿಗೆ ಹೋಗದಂತೆ ಬೇಡಿಕೊಂಡಿದ್ದೆ. ಅದಾಗಲೇ ಬೇರೆಯವರ ಮಾತುಗಳಿಂದ ಸೈನಾ ಮನಸ್ಸಿನಲ್ಲಿಯೇ ತಮ್ಮ ನಿರ್ಧಾರ ಮಾಡಿಕೊಂಡಿದ್ದರು. ಆಗ ಅವರನ್ನು ಉಳಿಸಿಕೊಳ್ಳುವ ಪ್ರಯತ್ನ ನಾನು ಮಾಡಲಿಲ್ಲ. ಯಾಕೆಂದರೆ ಆಕೆಯ ಪ್ರಗತಿಯನ್ನು ನಾನು ತಡೆಯಬಾರದಿತ್ತು.
ಆದರೆ, ಈ ಪ್ರಕರಣ ನಮ್ಮಿಬ್ಬರಿಗೂ ಯಾವುದೇ ಲಾಭ ತಂದುಕೊಡಲಿಲ್ಲ’ ಎಂದು ಬರೆದಿದ್ದಾರೆ. ಸೈನಾಗಿಂತ ಹೆಚ್ಚಾಗಿ ಸಿಂಧುರತ್ತ ನಾನು ಹೆಚ್ಚಿನ ಗಮನ ನೀಡುತ್ತಿದ್ದೇನೆ ಎಂದು ನಂಬಿದ್ದರು. 2012 ರಿಂದ 2014ರ ಅವಧಿಯಲ್ಲಿ ಸಿಂಧು ದೊಡ್ಡ ಮಟ್ಟದ ನಿರ್ವಹಣೆ ತೋರಿದ್ದರು. ಆದರೆ, ಯಾವುದೇ ಕಾರಣಕ್ಕೆ ನಾನು ಸೈನಾ ಬಗ್ಗೆ ಅಸಡ್ಡೆ ತೋರಿರಲಿಲ್ಲ. ಆದರೆ, ಇದನ್ನು ಆಕೆಗೆ ತಿಳಿಸಿ ಹೇಳುವಲ್ಲಿ ವಿಫಲನಾದೆ ಎಂದು ಬರೆದಿದ್ದಾರೆ. 2017ರ ವಿಶ್ವ ಚಾಂಪಿಯನ್ಷಿಪ್ ಪದಕ ಗೆದ್ದ ಬಳಿಕ ಸೈನಾ ಗೋಪಿಚಂದ್ ಅಕಾಡೆಮಿಗೆ ವಾಪಸಾಗಿದ್ದರು.
ಬಹುಶಃ ವೀರನ್ ರಸ್ಕಿನಾ (ಒಜಿಕ್ಯು ಸಿಇಒ), ವಿಮಲ್ ಕುಮಾರ್ ಅಥವಾ ಪ್ರಕಾಶ್ ಸರ್ ಆಕೆಯೊಂದಿಗೆ ಮಾತನಾಡಿರಬೇಕು. ಯಾಕೆ ಮಾತನಾಡಿದರು ಎನ್ನುವುದು ನನಗೆ ತಿಳಿಸಿಲ್ಲ. ಹೈದರಾಬಾದ್ಅನ್ನು ತೊರೆಯುವಂತೆ ಆಕೆಯ ತಲೆಗೆ ತುಂಬಿದ್ದರು. ನಾನು ಪ್ರಕಾಶ್ ಸರ್ ಅವರನ್ನು ಇಂದಿಗೂ ಆದರ್ಶ ಎನ್ನುವ ರೀತಿಯಲ್ಲಿ ನೋಡಿದ್ದೇನೆ. ಆದರೆ, ಈವರೆಗೂ ಅವರು ನನ್ನ ಬಗ್ಗೆ ಒಂದೇ ಒಂದು ಧನಾತ್ಮಕ ಮಾತುಗಳನ್ನು ಆಡಿಲ್ಲ. | ಪುಲ್ಲೇಲ ಗೋಪಿಚಂದ್