GOLF: ಬೆಂಗಳೂರು ಓಪನ್ ಪ್ರಶಸ್ತಿ ಗೆದ್ದ ಖಲೀನ್ ಜೋಶಿ

ಬೆಂಗಳೂರಿನ ಖಲೀನ್ ಜೋಶಿ ಅವರು ಕೆಜಿಎಯಲ್ಲಿ ನಡೆದ ₹1 ಕೋಟಿ ಬಹುಮಾನ ಮೊತ್ತದ ಬೆಂಗಳೂರು ಓಪನ್ 2026 ಪವರ್ಡ್ ಬೈ ಇಂಡಿಯನ್ಆಯಿಲ್ ಟೂರ್ನಿಯಲ್ಲಿ ಭರ್ಜರಿ ಗೆಲುವು ದಾಖಲಿಸಿದರು.
bengaluru open golf
ಚಾಂಪಿಯನ್​ ಖಲೀನ್​ಗೆ ಟ್ರೋಫಿ ವಿತರಿಸಿದ ಇಂಡಿಯನ್​ ಆಯಿಲ್​ನ ನಿರ್ದೇಶಕ ಸಿದ್ದಾರ್ಥ ಅರ್ಗವಾಲ್​. ಕೆಜಿಎ ಅಧ್ಯಕ್ಷ ಸಿ.ಪಿ. ನಂಜಪ್ಪ, ಪಿಜಿಟಿಐನ ವಿಕಾಸ್​ ಸಿಂಗ್​ ಇದ್ದರು. ಏಜೆನ್ಸಿ
Published on: 

ಬೆಂಗಳೂರು: ಬೆಂಗಳೂರಿನ ಖಲೀನ್ ಜೋಶಿ ಅವರು ಕೆಜಿಎಯಲ್ಲಿ ನಡೆದ ₹1 ಕೋಟಿ ಬಹುಮಾನ ಮೊತ್ತದ ಬೆಂಗಳೂರು ಓಪನ್ 2026 ಪವರ್ಡ್ ಬೈ ಇಂಡಿಯನ್ಆಯಿಲ್ ಟೂರ್ನಿಯಲ್ಲಿ ತಂತಿ-ತಂತಿಯಾಗಿ (ವೈರ್-ಟು-ವೈರ್) ಮುನ್ನಡೆ ಕಾಯ್ದುಕೊಂಡು ಐದು ಶಾಟ್​ಗಳ ಭರ್ಜರಿ ಗೆಲುವು ದಾಖಲಿಸಿದರು. ಅಂತಿಮ ಸುತ್ತಿನಲ್ಲಿ ಎರಡು ಅಂಡರ್ 70 ಸ್ಕೋರ್ ಮಾಡಿದ ಜೋಶಿ, ಒಟ್ಟು 20 ಅಂಡರ್ 268 ಸ್ಕೋರ್​ನೊಂದಿಗೆ ಪ್ರಶಸ್ತಿ ಗೆದ್ದರು.

34 ವರ್ಷದ ಜೋಶಿ, 61-68-69-70 ಸ್ಕೋರ್​ಗಳೊಂದಿಗೆ ಒಟ್ಟು 268 ಸ್ಟ್ರೋಕ್​ಗಳನ್ನು ದಾಖಲಿಸಿದರು. ಐದು ಬರ್ಡಿಗಳು ಮತ್ತು ಮೂರು ಬೋಗಿಗಳೊಂದಿಗೆ ಅಂತಿಮ ಸುತ್ತು ಪೂರ್ಣಗೊಳಿಸಿದ ಅವರು, ತಮ್ಮ 10ನೇ ಡಿಪಿ ವರ್ಲ್ಡ್ ಪಿಜಿಟಿಐ ಪ್ರಶಸ್ತಿ ಹಾಗೂ ಈ ಋತುವಿನ ನಾಲ್ಕನೇ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

2018ರಲ್ಲಿ ಏಷ್ಯನ್ ಟೂರ್ ಪ್ರಶಸ್ತಿ ಗೆದ್ದಿದ್ದ ಜೋಶಿ, ಕಳೆದ ವಾರ ನಡೆದ ಎಸ್ಇಸಿಎಲ್ ಪ್ರೆಸೆಂಟ್ಸ್ ನವಾ ರಾಯ್ಪುರ ಓಪನ್ ಬಳಿಕ ಸತತ ಎರಡನೇ ಪ್ರಶಸ್ತಿ ಗೆದ್ದಿದ್ದಾರೆ. ಈ ಗೆಲುವಿನಿಂದ ಅವರು ₹15 ಲಕ್ಷ ಬಹುಮಾನ ಪಡೆದಿದ್ದು, 2026ರ ಡಿಪಿ ವರ್ಲ್ಡ್ ಪಿಜಿಟಿಐ ಆರ್ಡರ್ ಆಫ್ ಮೆರಿಟ್​ನಲ್ಲಿ ಏಳನೇ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಏರಿದ್ದಾರೆ. ಅವರ ಒಟ್ಟು ಋತುಮಾನದ ಆದಾಯ ₹67,34,225ಕ್ಕೆ ಏರಿಕೆಯಾಗಿದೆ.

ಗುರುಗ್ರಾಮದ ಮನು ಗಾಂಡಸ್ 15 ಅಂಡರ್ 273 ಸ್ಕೋರ್​ನೊಂದಿಗೆ ರನ್ನರ್-ಅಪ್ ಸ್ಥಾನ ಪಡೆದರು. ಅವರು ₹10 ಲಕ್ಷ ಬಹುಮಾನ ಪಡೆದರು. ಗುರುಗ್ರಾಮದ ವೀರ್ ಅಹ್ಲಾವತ್ ಮತ್ತು ಗ್ರೇಟರ್ ನೋಯ್ಡಾದ ಸಪ್ತಕ್ ತಲ್ವಾರ್ ತಲಾ 12 ಅಂಡರ್ 276 ಸ್ಕೋರ್​ನೊಂದಿಗೆ ಜಂಟಿ ಮೂರನೇ ಸ್ಥಾನ ಪಡೆದರು.

ಗೆಲುವಿನ ಬಳಿಕ ಮಾತನಾಡಿದ ಜೋಶಿ, ಇತ್ತೀಚಿನ ಯಶಸ್ಸಿಗೆ ತಮ್ಮ ಮಾನಸಿಕ ದೃಢತೆ ಮತ್ತು ಒತ್ತಡದ ಸಂದರ್ಭಗಳಲ್ಲಿ ಶಾಂತವಾಗಿ ಆಡುವ ಸಾಮರ್ಥ್ಯ ಪ್ರಮುಖ ಕಾರಣ ಎಂದು ಹೇಳಿದರು.

ಕೆಜಿಎಯಲ್ಲಿ ಬಾಲ್ಯದಿಂದಲೇ ಗಾಲ್ಫ್ ಆಡಲು ಆರಂಭಿಸಿದ್ದ ಜೋಶಿಗೆ ತವರು ನೆಲದಲ್ಲಿ ಪ್ರಶಸ್ತಿ ಗೆದ್ದಿರುವುದು ವಿಶೇಷವಾಗಿದೆ. “ಕೆಜಿಎಯಲ್ಲಿ ಗೆಲ್ಲುವುದು ನನ್ನ ಬಹುಕಾಲದ ಕನಸಾಗಿತ್ತು. ತವರಿನಲ್ಲಿ ಕೊನೆಗೂ ಪ್ರಶಸ್ತಿ ಗೆದ್ದಿರುವುದು ನನಗೆ ಅಪಾರ ಸಂತಸ ತಂದಿದೆ,” ಎಂದು ಅವರು ಹೇಳಿದರು.

ಬೆಂಗಳೂರು ಓಪನ್ನೊಂದಿಗೆ 2026ರ ಡಿಪಿ ವರ್ಲ್ಡ್ ಪಿಜಿಟಿಐ ಆರ್ಡರ್ ಆಫ್ ಮೆರಿಟ್​ನ ಅಗ್ರ 60 ಆಟಗಾರರ ರೇಸ್ ಕೂಡ ಅಂತ್ಯಗೊಂಡಿದ್ದು, ಅಗ್ರ 60ರಲ್ಲಿ ಸ್ಥಾನ ಪಡೆದ ಆಟಗಾರರು 2026–27ರ ಋತುವಿನ ಆಟದ ಹಕ್ಕುಗಳನ್ನು ಉಳಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net